ಡಿಕೆ ಶಿವಕುಮಾರ್ 
ರಾಜಕೀಯ

ಆಸ್ತಿ ಸಂಪಾದಿಸಿರುವುದು ನಾನು ಮಾತ್ರಾನಾ? ತನಿಖೆ ನನ್ನ ಮೇಲೆಯೇ ಯಾಕೆ?: ಡಿಕೆಶಿ ಪ್ರಶ್ನೆ

ರಾಜ್ಯದಲ್ಲಿ ಆಸ್ತಿ ಸಂಪಾದಿಸಿರುವುದು ನಾನು ಮಾತ್ರಾನಾ? ಯಾರ ಮೇಲೂ ಇಲ್ಲದ ತನಿಖೆ ನನ್ನ ಮೇಲೆಯೇ ಯಾಕೆ? ನನ್ನ ಮೇಲೆ ನಡೆಯುತ್ತಿರುವ ತನಿಖೆ ದ್ವೇಷದ ರಾಜಕಾರಣವಲ್ಲವೇ? ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಪ್ರಶ್ನಿಸಿದ್ದಾರೆ.

ಬೆಂಗಳೂರು: ರಾಜ್ಯದಲ್ಲಿ ಆಸ್ತಿ ಸಂಪಾದಿಸಿರುವುದು ನಾನು ಮಾತ್ರಾನಾ? ಯಾರ ಮೇಲೂ ಇಲ್ಲದ ತನಿಖೆ ನನ್ನ ಮೇಲೆಯೇ ಯಾಕೆ? ನನ್ನ ಮೇಲೆ ನಡೆಯುತ್ತಿರುವ ತನಿಖೆ ದ್ವೇಷದ ರಾಜಕಾರಣವಲ್ಲವೇ? ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಪ್ರಶ್ನಿಸಿದ್ದಾರೆ.

ಸದಾಶಿವನಗರದ ತಮ್ಮ ನಿವಾಸದ ಬಳಿ ಬುಧವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ‘ರಾಜಕೀಯ ದ್ವೇಷದಿಂದ ನನ್ನ ವಿರುದ್ಧ ಸಿಬಿಐ ವಿಚಾರಣೆ ನಡೆಸಲಾಗುತ್ತಿದೆ. ನಾನು ಮಾಡಬಾರದ ಕೆಲಸ ಮಾಡಿಲ್ಲ. ಹೀಗಾಗಿ ಹೆದರುವ ಅಗತ್ಯವಿಲ್ಲ. ನಾನು ವಿಚಾರಣೆಗೆ ಸಂಪೂರ್ಣ ಸಹಕಾರ ನೀಡುತ್ತೇನೆ. ಇಡೀ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಅಕ್ರಮ ಆಸ್ತಿ ಗಳಿಕೆ ವಿಚಾರವಾಗಿ ನನ್ನ ವಿರುದ್ಧ ತನಿಖೆ ಮಾಡುವಂತೆ ಸಿಬಿಐಗೆ ಅನುಮತಿ ನೀಡಿದ್ದಾರೆ. ಇದುವರೆಗೂ ಯಾರ ಮೇಲೆ ಈ ರೀತಿ ತನಿಖೆ ಮಾಡಿಸಿದ್ದಾರೆ? ರಾಜ್ಯದಲ್ಲಿ ನಾನೊಬ್ಬನೇ ಆಸ್ತಿ ಸಂಪಾದಿಸಿದ್ದೇನಾ? ನನ್ನ ಮೇಲೆ ಯಾವುದಾದರೂ ದೂರು ದಾಖಲಾಗಿದೆಯಾ? ಯಾವುದಾದರೂ ಆರೋಪ ಸಾಬೀತಾಗಿದೆಯಾ? ಯಾರ ಬಳಿಯಾದರೂ ನಾನು ಲಂಚ ಪಡೆದಿದ್ದೇನಾ? ಅಧಿಕಾರ ದುರುಪಯೋಗ ಮಾಡಿಕೊಂಡಿದ್ದೇನಾ? ಇಂಧನ ಸಚಿವ ಆಗಿದ್ದಾಗ ಅಕ್ರಮ ಮಾಡಿದ್ದೇನಾ? ಯಡಿಯೂರಪ್ಪನವರೇ ಅಧಿಕಾರದಲ್ಲಿದ್ದಾರೆ. ಈ ಎಲ್ಲದರ ಬಗ್ಗೆ ತನಿಖೆ ಮಾಡಿಸಲಿ. ಅದನ್ನು ಬಿಟ್ಟು ಸಿಬಿಐಗೆ ಕೊಡುವ ಅಗತ್ಯ ಏನಿತ್ತು?’ ಎಂದು ಅವರು ಖಾರವಾಗಿಯೇ ಪ್ರಶ್ನಿಸಿದರು.

‘ಇದೊಂದು ತನಿಖೆ ಮಾಡುವ ಪ್ರಕರಣವಲ್ಲ ಎಂದು ಅಡ್ವೊಕೇಟ್ ಜನರಲ್ ಅವರೇ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ರಾಜ್ಯದಲ್ಲಿರುವ ಎಸಿಬಿಯಿಂದಲೇ ವಿಚಾರಣೆ ನಡೆಸಬಹುದು ಎಂದು ತಿಳಿದ್ದಾರೆ. ಆದರೂ ಸರ್ಕಾರದ ಒತ್ತಡದ ಮೇಲೆ ಈ ವಿಚಾರಣೆ ನಡೆಯುತ್ತಿದೆ. ನಾನು ಸಿಬಿಐ ಅಧಿಕಾರಿಗಳ ತನಿಖಾ ವ್ಯವಸ್ಥೆ ಪ್ರಶ್ನಿಸುವುದಿಲ್ಲ. ಅವರು ನಮಗೆ ಯಾವುದೇ ರೀತಿಯ ತೊಂದರೆ ನೀಡುತ್ತಿಲ್ಲ. ಅವರು ಅವರ ಕರ್ತವ್ಯ ಮಾಡುತ್ತಿದ್ದಾರೆ. ಅವರ ಕಾರ್ಯವೈಖರಿ ಕೈಪಿಡಿ ನಾನು ಓದಿದ್ದೇನೆ. 48 ದಿನ ನಾನು ಈ ಕುರಿತ ಪುಸ್ತಕಗಳನ್ನು ಓದಿದ್ದೇನೆ. ಅವರಿಗೆ ಬರುವ ಮಾರ್ಗದರ್ಶನದಂತೆ ಅವರು ಕೆಲಸ ಮಾಡುತ್ತಿದ್ದಾರೆ. ಅವರನ್ನು ನಾನು ದೂರುವುದಿಲ್ಲ. ಸಿಬಿಐ ಅಧಿಕಾರಿಗಳು 23ರಂದು ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ನೀಡಿದ್ದರು. ಆದರೆ 23ರಂದು ಮಸ್ಕಿ ಪ್ರವಾಸ ಪೂರ್ವ ನಿಗದಿಯಾಗಿದ್ದ ಹಿನ್ನೆಲೆಯಲ್ಲಿ, 25 ರಂದು ವಿಚಾರಣೆಗೆ ಹಾಜರಾಗುವುದಾಗಿ ಅಧಿಕಾರಿಗಳಿಗೆ ತಿಳಿಸಿದ್ದೆ. ಇವತ್ತು ವಿಚಾರಣೆಗೆ ಹಾಜರಾಗುತ್ತೇನೆ. ನಾನು ವಿಚಾರಣೆಗೆ ಹಾಜರಾಗುತ್ತೇನೆ ಎಂದ ಮೇಲೆ ಅದರಿಂದ ತಪ್ಪಿಸಿಕೊಳ್ಳುವುದಿಲ್ಲ. ನಾನು ಇ.ಡಿ. ಸೇರಿದಂತೆ ಎಲ್ಲ ತನಿಖಾ ಸಂಸ್ಥೆ ಅಧಿಕಾರಿಗಳಿಗೆ ಸಂಪೂರ್ಣ ಸಹಕಾರ ನೀಡುತ್ತಾ ಬಂದಿದ್ದೇನೆ. ನಾನು 4 ಗಂಟೆಗೆ ಹಾಜರಾಗುವುದಾಗಿ ತಿಳಿಸಿದ್ದೇನೆ. ಸಾಧ್ಯವಾದರೆ ಅರ್ಧ ಗಂಟೆ ಮುಂಚಿತವಾಗಿ ಹಾಜರಾಗುತ್ತೇನೆ ಎಂದು ಅವರು ಹೇಳಿದರು.

ಈಗಾಗಲೇ ನಾನು ಮನವಿ ಮಾಡಿಕೊಂಡಿರುವಂತೆ, ನಾನು ವಿಚಾರಣೆಗೆ ಹಾಜರಾಗಲು ಸಿಬಿಐ ಕಚೇರಿಗೆ ಹೋದಾಗ ಯಾರು ಕೂಡ ಅಲ್ಲಿಗೆ ಬರಬಾರದು. ನಿಮಗೆ ಮುಜುಗರ ತರುವ ಯಾವುದೇ ಕೆಲಸ ನಾನು ಮಾಡಿಲ್ಲ. ನನಗೆ ಏನಾಗುತ್ತದೋ ಎಂಬ ಆತಂಕ ಬೇಡ. ಅಧಿಕಾರಿಗಳು ಅವರ ಕೆಲಸ ಮಾಡುತ್ತಾರೆ. ಅಲ್ಲಿಗೆ ಬಂದು ಯಾರ ವಿರುದ್ಧವೂ ಘೋಷಣೆ ಹಾಕುವುದು ಬೇಡ. ಪರಿಸ್ಥಿತಿ ಕೈಮೀರಿದರೆ ನಮಗೆ ಕೆಟ್ಟ ಹೆಸರು ಬರುತ್ತದೆ. ಹೀಗಾಗಿ ನಾನು ಸ್ನೇಹಿತರು, ಕಾರ್ಯಕರ್ತರು ಹಾಗೂ ಅಭಿಮಾನಿಗಳಲ್ಲಿ ಈ ಮನವಿ ಮಾಡಿಕೊಳ್ಳುತ್ತಿದ್ದೇನೆ ಎಂದು ಅವರು ತಿಳಿಸಿದರು.   

ಅಹ್ಮದ್ ಪಟೇಲ್ ಅವರ ನಿಧನ ಸುದ್ದಿ ಕೇಳಿ ತೀವ್ರ ಆಘಾತವಾಗಿದೆ. ನಮ್ಮ ಪಕ್ಷಕ್ಕೆ ನಿಷ್ಠೆಯಿಂದ ಇದ್ದ ನಾಯಕರು. ರಾಜ್ಯಗಳಿಗೆ ಉತ್ತಮ ಮಾರ್ಗದರ್ಶನ ನೀಡುತ್ತಿದ್ದರು. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಅವರು ಯಾವಾಗ ಬೇಕಾದರೂ ಮಂತ್ರಿ ಆಗಬಹುದಿತ್ತು. ಆದರೆ ಅವರು ಯಾವತ್ತೂ ಅಧಿಕಾರ ಬಯಸಲಿಲ್ಲ. ಪಕ್ಷ ಸಂಘಟನೆಯಲ್ಲೇ ಅವರು ತಮ್ಮನ್ನು ತೊಡಗಿಸಿಕೊಂಡರು. ಪಕ್ಷದ ವಿವಿಧ ಹುದ್ದೆಗಳನ್ನು ನಿಭಾಯಿಸಿದ್ದರು. ನನ್ನ ಮೇಲೆ ಅಪಾರವಾದ ನಂಬಿಕೆ, ವಿಶ್ವಾಸ ಇಟ್ಟಿದ್ದರು.ನನ್ನ ಕಷ್ಟದ ದಿನಗಳಲ್ಲಿ ನನ್ನ ಜತೆ ನಿಂತರು. ಅವರು ರಾಜ್ಯಸಭೆ ಚುನಾವಣೆಗೆ ನಿಂತಾಗ ಅದರ ಜವಾಬ್ದಾರಿ ಯಾರಿಗೆ ಬೇಕಾದರೂ ಕೊಡಬಹುದಿತ್ತು. ಆದರೆ ಅವರು ನನ್ನ ಮೇಲೆ ನಂಬಿಕೆ ಇಟ್ಟು ತಮ್ಮ ಶಾಸಕರನ್ನು ಕಳುಹಿಸಿಕೊಟ್ಟರು. ಒಂದು ವಾರದ ಹಿಂದೆ ಅವರ ಜತೆ ದೂರ ವಾಣಿಯಲ್ಲಿ ಮಾತನಾಡಿದ್ದೆ. ಅವರು ಕೊಟ್ಟ ಮಾರ್ಗದರ್ಶನ, ಧೈರ್ಯವೇ ನಮಗೆ ಶಕ್ತಿ. ದೇಶದ ಉದ್ದಗಲಕ್ಕೂ ಸಾವಿರಾರು ನಾಯಕರನ್ನು ಗುರುತಿಸಿ, ಬೆಳೆಸಿ ಶಕ್ತಿ ತುಂಬಿದ ಧೀಮಂತ ನಾಯಕ ಅವರು ಎಂದು ಅಹಮದ್ ಪಟೇಲರ ಗುಣಗಾನ ಮಾಡಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಐವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

Indre Nemdiyag Irbek: ಯೂ ಟ್ಯೂಬ್ ನಲ್ಲಿ ಧೂಳೆಬ್ಬಿಸುತ್ತಿರುವಂತೆ ವಿವಾದಕ್ಕೆ ಗುರಿಯಾದ Devil ಸಾಂಗ್! ಟ್ಯೂನ್ ಕದ್ದ ಆರೋಪ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ಭ್ರಷ್ಟಾಚಾರ ಪ್ರಕರಣ: ಬಂಧಿತ ಶ್ರೀಲಂಕಾ ಮಾಜಿ ಅಧ್ಯಕ್ಷ ವಿಕ್ರಮಸಿಂಘೆಗೆ ಜಾಮೀನು

SCROLL FOR NEXT