ರಾಜಕೀಯ

ಶಿರಾ ಉಪಚುನಾವಣೆ: ತಂದೆ ಜವಾಬ್ದಾರಿ ಹೊತ್ತು ಒತ್ತಡ ತಗ್ಗಿಸಿದ ಪುತ್ರರತ್ನರು!

Srinivasamurthy VN

ಶಿರಾ: ತೀವ್ರ ಕುತೂಹಲ ಕೆರಳಿಸಿದ್ದ ರಾಜರಾಜೇಶ್ವರಿ ನಗರ ಮತ್ತು ಶಿರಾ ಉಪ ಚುನಾವಣೆ ಆಡಳಿತಾ ರೂಡ ಬಿಜೆಪಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿ ಮಾರ್ಪಟ್ಟಿದ್ದು, ಶಿರಾ ಉಪಚುನಾವಣೆ ಜವಾಬ್ದಾರಿ ಹೊರುವ ಮೂಲಕ ಬಿವೈ ವಿಜಯೇಂದ್ರ ತಮ್ಮ ತಂದೆ ಬಿಎಸ್ ಯಡಿಯೂರಪ್ಪ ಅವರ ಮೇಲಿನ ಒತ್ತಡ ತಗ್ಗಿಸುವ  ಕೆಲಸಕ್ಕೆ ಮುಂದಾಗಿದ್ದಾರೆ.

ಹೌದು.. ದಿನದಿಂದ ದಿನಕ್ಕೆ ಕಾವು ಏರುತ್ತಿರುವ ಶಿರಾ ಮತ್ತು ರಾಜರಾಜೇಶ್ವರಿ ನಗರ ವಿಧಾನ ಸಭಾ ಕ್ಷೇತ್ರಗಳ ಉಪ ಚುನಾವಣೆಯ ನಡುವೆ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಮತ್ತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಮಗ, ಬಿ.ವೈ. ವಿಜಯೇಂದ್ರ ಶಿರಾ ಚುನಾವಣಾ ರಂಗಕ್ಕೆ ಇಳಿದಿದ್ದಾರೆ. ಈ ಉಪಚುನಾವಣೆ  ವಿಜಯೇಂದ್ರ ಅವರ ಭವಿಷ್ಯದ ದೃಷ್ಟಿಯಿಂದ ಭಾರಿ ಮಹತ್ವ ಪಡೆದಿದೆ. ಶಿರಾ ಉಪ ಚುನಾವಣೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿ ತಮ್ಮ ರಾಜಕೀಯ ಭವಿಷ್ಯ ಹಾಗೂ ತಂದೆ ಯಡಿಯೂರಪ್ಪನವರ ಕುರ್ಚಿ ಭದ್ರಪಡಿಸುವ ತಂತ್ರಗಾರಿಕೆಗೆ ವಿಜಯೇಂದ್ರ ಇಳಿದಿದ್ದಾರೆ ಎನ್ನಲಾಗಿದೆ. 

ಕಳೆದ ವರ್ಷ ಕೆ.ಆರ್.ಪೇಟೆ ಉಪಚುನಾವಣೆಯಲ್ಲಿ ಬಿಜೆಪಿಯ ಅದ್ಭುತ ವಿಜಯದಲ್ಲಿ ಪ್ರಮುಖ ಪಾತ್ರವಹಿಸಿದ್ದ ಬಿಜೆಪಿ ರಾಜ್ಯ ಉಪಾಧ್ಯಕ್ಷರೂ ಕೂಡ ಆಗಿರುವ ವಿಜಯೇಂದ್ರ ಇದೀಗ ಶಿರಾ ಉಪ ಚುನಾವಣೆ ಜವಾಬ್ದಾರಿ ಹೊತ್ತಿದ್ದಾರೆ. ಇದೇ ಕಾರಣಕ್ಕೆ ವಾರದ ಹಿಂದೆಯೇ ಶಿರಾಕ್ಕೆ ಆಗಮಿಸಿರುವ ಅವರು, ಈಗಾಗಲೇ  ಚುನಾವಣೆ ಸಂಬಂಧಿತ ಕೆಲಸ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. 

ವಿಜಯೇಂದ್ರ ರೀತಿಯಲ್ಲಿಯೇ ಶಿರಾದ ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ. ಜಯಚಂದ್ರ ಅವರ ಪುತ್ರರೂ ಕೂಡ ತಮ್ಮ ತಂಜೆಯ ಗೆಲುವಿಗೆ ಶ್ರಮ ಹಾಕುತ್ತಿದ್ದಾರೆ. ಜಯಚಂದ್ರ ಅವರ ಪುತ್ರರಾದ ಟಿಜೆ ಸಂದೀಪ್ ಮತ್ತು ಟಿಜೆ ಸಂತೋಷ್ ತಮ್ಮ ತಂದೆಯ ಪ್ರಚಾರದ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಸಂತೋಷ್ ಅವರು  ತುಮಕುರಿನ ಚಿಕ್ಕನಾಯಕನಹಳ್ಳಿಯಿಂದ 2018 ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರಿಂದ ಅವರಿಗೆ ಈ ಕ್ಷೇತ್ರ ಹೊಸತೇನು ಅಲ್ಲ. 2018ರಲ್ಲಿ ಅವರು ಬಿಜೆಪಿಯ ಜೆ ಸಿ ಮಧುಸ್ವಾಮಿ ವಿರುದ್ಧ ಸೋತಿದ್ದರು.

ಅಂತೆಯೇ ಮಾಜಿ ಕಾಂಗ್ರೆಸ್ ಶಾಸಕ ಕೆ.ಎನ್.ರಾಜಣ್ಣ ಅವರ ಪುತ್ರ ಆರ್.ರಾಜೇಂದ್ರ ಕೂಡ ಆರು ಬಾರಿ ಶಾಸಕರಾಗಿರುವ ಜಯಚಂದ್ರ ಪರ ಕೆಲಸ ಮಾಡುತ್ತಿದ್ದಾರೆ. ಅವರು ವಿವಿಧ ವಿಭಾಗಗಳ ನಾಯಕರನ್ನು ಭೇಟಿ ಮಾಡುತ್ತಿದ್ದು, ಮತದಾರರ ಮೇಲೆ ಪ್ರಭಾವ ಬೀರಲು ಪ್ರಯತ್ನಿಸುತ್ತಿದ್ದಾರೆ. 

ಅಷ್ಟು ಮಾತ್ರವಲ್ಲದೇ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರ ಪುತ್ರ ಡಾ.ಯತಿಂದ್ರ ಕೂಡ ಉಪ ಚುನಾವಣಾ ರಂಗಕ್ಕೆ ಜಿಗಿದಿದ್ದು, ಬಿಜೆಪಿಯಿಂದ ಸ್ಪರ್ಧಿಸುತ್ತಿರುವ ತಮ್ಮ ಒಂದು ಕಾಲದ ಸ್ನೇಹಿತ ಮತ್ತು ವ್ಯವಹಾರ ಪಾಲುದಾರ ಡಾ.ರಾಜೇಶ್ ಗೌಡ ಅವರ ವಿರುದ್ಧ ಪ್ರಚಾರ ನಡೆಸಬೇಕಾಗಿರುವ ಅನಿವಾರ್ಯತೆಯಲ್ಲಿ ಸಿಲುಕಿದ್ದಾರೆ. ಡಾ.ಯತಿಂದ್ರ ಅವರಿಗೆ ಪ್ರಚಾರಕ್ಕಾಗಿ ಕೆಲವು ಪಂಚಾಯಿತಿ ವ್ಯಾಪ್ತಿಯ ಪ್ರದೇಶಗಳನ್ನು ನೀಡಲಾಗಿದೆ.

ಇನ್ನು ಮಾಜಿ ಶಾಸಕ ದಿವಂಗತ ಬಿ ಸತ್ಯನಾರಾಯಣ ಅವರ ಪತ್ನಿ ಅಮ್ಮಾಜಮ್ಮ ಶಿರಾದ ಜೆಡಿಎಸ್ ಅಧಿಕೃತ ಅಭ್ಯರ್ಥಿಯಾಗಿದ್ದರೂ, ಅವರ ಪುತ್ರ ಬಿ ಸತ್ಯಪ್ರಕಾಶ್ ಅವರು ಪ್ರಚಾರದ ಸಂಪೂರ್ಣ ಹೊಣೆಯನ್ನು ನಿರ್ವಹಿಸುತ್ತಿದ್ದಾರೆ. ಈ ಹಿಂದೆ ಕೊರೋನಾ ಸೋಂಕಿಗೆ ತುತ್ತಾಗಿದ್ದ ಅಮ್ಮಾಜಮ್ಮ ಇದೀಗ ಸೋಂಕಿನಿಂದ ಚೇತರಿಸಿಕೊಂಡಿದ್ದು, ಚುನಾವಣಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಶತಾಯಗತಾಯ ಶಿರಾ ಕ್ಷೇತ್ರ ಉಳಿಸಿಕೊಳ್ಳುವ ತವಕದಲ್ಲಿರುವ ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಅವರು ತಮ್ಮ ಮಗ ಎಚ್.ಡಿ.ರೇವಣ್ಣ ಅವರಿಗೆ ಈ ಕ್ಷೇತ್ರದ ಜವಾಬ್ದಾರಿಯನ್ನು ವಹಿಸಿದ್ದಾರೆ. ರೇವಣ್ಣ ಅವರು ತಮ್ಮ ಸಂಸದ ಪುತ್ರ ಪ್ರಜ್ವಲ್ ರೇವಣ್ಣ ಅವರೊಂದಿಗೆ ಶಿರಾದಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. 

ಒಟ್ಟಾರೆ ಯಾರೇ ಗೆದ್ದರೂ ಗೆದ್ದ ಅಭ್ಯರ್ಥಿಯ ಪುತ್ರರಿಗೆ ರಾಜಕೀಯವಾಗಿ ಲಾಭವಾಗುವುದಂತ ನಿಶ್ಚಿತ.

SCROLL FOR NEXT