ರಾಜಕೀಯ

ಕೋವಿಡ್ ನಿಯಂತ್ರಣ ಮರೆತು ಸಂಪುಟ ವಿಸ್ತರಣೆಯತ್ತ ಯಡಿಯೂರಪ್ಪ ಗಮನ: ಸುರ್ಜೇವಾಲ ಟೀಕೆ

Lingaraj Badiger

ಬೆಂಗಳೂರು: ಕೋವಿಡ್ ನಿಯಂತ್ರಣಕ್ಕೆ ಯೋಜನೆ ರೂಪಿಸದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಮ್ಮ ಗಮನವನ್ನು ಕೇವಲ ಸಚಿವ ಸಂಪುಟ ವಿಸ್ತರಣೆಯತ್ತ ಹರಿಸಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ನೂತನ ಉಸ್ತುವಾರಿ ರಂದೀಪ್ ಸಿಂಗ್ ಸುರ್ಜೇವಾಲಾ ಟೀಕಿಸಿದ್ದಾರೆ.

ಕರ್ನಾಟಕದಲ್ಲಿ ಕೊರೋನಾ ಸೋಂಕಿನ 2ನೇ ಅಲೆ ಕಾಲಿಟ್ಟಿರುವಾಗ, ಯಡಿಯೂರಪ್ಪ ನೇತೃತ್ವದ ಅಸಮರ್ಥ ಸರ್ಕಾರ ಜನರ ಸಂಕಷ್ಟಕ್ಕೆ ಪರಿಹಾರ ನೀಡುವ ಬದಲು ಕೇವಲ ಪಕ್ಷದ ಆಂತರಿಕ ಸಮಸ್ಯೆ, ಅಧಿಕಾರದ ಹಪಾಹಪಿ ಹಾಗೂ ಸಂಪುಟ ವಿಸ್ತರಣೆಯತ್ತ ಗಮನಹರಿಸಿದೆ ಎಂದು ವಾಗ್ದಾಳಿ ನಡೆಸಿದರು.

ಕರ್ನಾಟಕದಲ್ಲಿ ಸರ್ಕಾರ ಕೋವಿಡ್ ನಿಯಂತ್ರಣಕ್ಕೆ ಯೋಜನೆಯನ್ನು ರೂಪಿಸಬೇಕಿತ್ತು. ಆದರೆ ಅಂತಹ ಯಾವುದೇ ಕ್ರಮಗಳನ್ನು ಕೈಗೊಳ್ಳದೇ ಯಡಿಯೂರಪ್ಪ ಕೇವಲ ತಮ್ಮ ಸಂಪುಟ ವಿಸ್ತರಣೆಯತ್ತ ಗಮನ ಹರಿಸಿರುವುದನ್ನು ನೋಡಿದರೆ ನಿಜಕ್ಕೂ ಈ ಸರ್ಕಾರಕ್ಕೆ ಜನರ ಮೇಲೆ ಕಾಳಜಿಯಾಗಲೀ, ಜನಾರೋಗ್ಯವಾಗಲಿ ಬೇಕಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ ಎಂದಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಕೋವಿಡ್ ಪ್ರಕರಣಗಳ ಸಂಖ್ಯೆ 50 ಲಕ್ಷದ ಗಡಿ ದಾಟುವ ಮೂಲಕ ಭಾರತ ವಿಶ್ವದಲ್ಲಿ 2ನೇ ಸ್ಥಾನದಲ್ಲಿದೆ. ಅಲ್ಲದೇ ಕಳೆದ 10 ದಿನಗಳಿಂದ ಪ್ರತಿದಿನ ಸುಮಾರು 1 ಲಕ್ಷ ಪ್ರಕರಣಗಳು ದಾಖಲಾಗುತ್ತಿವೆ. ಕರ್ನಾಟಕದಲ್ಲಿ ಕೋವಿಡ್ ಸಂತ್ರಸ್ತರ ಸಂಖ್ಯೆ 5ಲಕ್ಷದ ಗಡಿ ದಾಟಿದೆ. ಕಳೆದ 10 ದಿನದಿಂದ ಪ್ರತಿದಿನ ಸುಮಾರು 10,000 ಪ್ರಕರಣಗಳು ಖಲಾಗುತ್ತಿವೆಯಾದರೂ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಕೋವಿಡ್ ನಿಯಂತ್ರಣಕ್ಕೆ ಯಾವುದೇ ಯೋಜನೆಯನ್ನು ರೂಪಿಸಿಲ್ಲ ಎಂದು ಆರೋಪಿಸಿದ್ದಾರೆ.

ಕೋವಿಡ್ ನಿಯಂತ್ರಣಕ್ಕೆ ಯೋಜನೆಯನ್ನು ರೂಪಿಸುವ ಬದಲು ದೇವರನ್ನು ದೂಷಿಸುತ್ತಿರುವುದು ಸರ್ಕಾರಗಳ ಅಸಹಾಯಕತೆಯನ್ನು ತೋರಿಸುತ್ತಿದೆ ಎಂದು ಸುರ್ಜೇವಾಲ ಹೇಳಿದ್ದಾರೆ.

SCROLL FOR NEXT