ರಾಜಕೀಯ

ಸಂಪುಟ ರಚನೆ: ದಿಢೀರ್ ದೆಹಲಿಗೆ ತೆರಳಿದ ಸಿಎಂ ಬೊಮ್ಮಾಯಿ, ಜೆಪಿ ನಡ್ಡಾ ಭೇಟಿ ಬಳಿಕ ಸಚಿವರ ಪಟ್ಟಿ ಅಂತಿಮ ಸಾಧ್ಯತೆ

Manjula VN

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಭಾನುವಾರ ತಡರಾತ್ರಿ ದಿಢೀರ್ ದೆಹಲಿಗೆ ಭೇಟಿ ನೀಡಿದ್ದು, ಸೋಮವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ದಾ ಅವರನ್ನು ಭೇಟಿಯಾಗಿ ಸಚಿವ ಸಂಪುಟ ಅಂತಿಮಗೊಳಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ಭಾನುವಾರ ರಾತ್ರಿ 9ಕ್ಕೆ ಕೇಂದ್ರ ಸಚಿವ ಪ್ರಲ್ಹಾದ ಜೊಶಿ ಅವರೊಂದಿಗೆ ಬೆಂಗಳೂರಿನಿಂದ ದೆಹಲಿಗೆ ತೆರಳಿರುವ ಮುಖ್ಯಮಂತ್ರಿಗಳು ತಡರಾತ್ರಿವರೆಗೆ ದೆಹಲಿಯ ಅಜ್ಞಾತ‌ ಸ್ಥಳದಲ್ಲಿದ್ದು, ಹಲವು ಸುತ್ತಿನ ಮಾತುಕತೆ‌ ನಡೆಸಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ. 

ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರೂ ಕೂಡ ಸಮಾಲೋಚನೆಯಲ್ಲಿ ಪಾಲ್ಗೊಂಡಿದ್ದು, ಬೊಮ್ಮಾಯಿ ಅವರು ಸಿದ್ಧಪಡಿಸಿ ತಂದಿದ್ದ ಪಟ್ಟಿಯನ್ನು ಪರಾಮರ್ಶಿಸಿದರು ಎಂದು ಮೂಲಗಳು ತಿಳಿಸಿವೆ.

ಸಚಿವರ ಪಟ್ಟಿ ಕೈಯಲ್ಲಿ ಹಿಡಿದಿರುವ ಬೊಮ್ಮಾಯಿಯವರು, ವರಿಷ್ಠರಿಂದ ಒಪ್ಪಿಗೆ ಪಡೆದು ನಾಳೆ ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ. ಬಳಿಕ ಬುಧವಾರ ಸಂಪುಟ ರಚನೆಯಾಗುವ ಸಾಧ್ಯತೆಗಳಿವೆ ಎಂದು ಮೂಲಗಳಿಂದ ತಿಳಿದುಬಂದಿದೆ. 

ಈ ನಡವೆ ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಬೊಮ್ಮಾಯಿಯವರು, ಇಂದು ಸಂಜೆ ದೆಹಲಿಯಲ್ಲಿ ಪಕ್ಷದ ಸಭೆ ನಡೆಯಲಿದೆ. ಸಭೆಯ ಬಳಿಕ ಸಚಿವ ಸಂಪುಟದ ಬಗ್ಗೆ ಚರ್ಚೆ ಮಾಡುತ್ತಾರೆ. ಅದಾದ ಬಳಿಕ ರಾಜ್ಯ ಸಚಿವ ಸಂಪುಟದ ಬಗ್ಗೆ ಮಾಹಿತಿ ಪಡೆಯುತ್ತೇನೆ. ದೆಹಲಿಗೆ ಬಂದ ಶಾಸಕರ ಜೊತೆಯೂ ಚರ್ಚಿಸುತ್ತಾರೆ. ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗಲಾಗುವುದು ಎಂದು ಹೇಳಿದ್ದಾರೆ.

ಎಲ್ಲಾ ಶಾಸಕರು ಸಚಿವರಾಗುವುದಕ್ಕೆ ಆಗುವುದಿಲ್ಲ. ಈ ವಿಚಾರ ನಮ್ಮ ಶಾಸಕರಿಗೂ ಗೊತ್ತಿದೆ. ಪ್ರಾದೇಶಿಕ ಸಮತೋಲನ ಮಾಡಬೇಕಾಗಿದೆ ಎಂದು ತಿಳಿಸಿದ್ದಾರೆ. 

ಸಚಿವ ಸಂಪುಟದ ಬಗ್ಗೆ ಹೈಕಮಾಂಡ್ ತೀರ್ಮಾನಿಸುತ್ತೆ. ಪ್ರಾದೇಶಿಕವಾರು ಗಮನದಲ್ಲಿಟ್ಟುಕೊಂಡು ಸಂಪುಟ ರಚನೆ ಮಾಡಲಾಗುವುದು. ನಡ್ಡಾ ಭೇಟಿಗೂ ಮುನ್ನ ಸಂಸತ್ ಭವನಕ್ಕೆ ಹೋಗುತ್ತಿದ್ದೇನೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿಗೆ ಪ್ರಯತ್ನಿಸುತ್ತೇನೆ ಎಂದು ಮಾಹಿತಿ ನೀಡಿದ್ದಾರೆ. 

SCROLL FOR NEXT