ರಾಜಕೀಯ

ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡಬಾರದು: ಯೋಗೇಶ್ವರ್ ವಿರುದ್ಧ ಕಿಡಿಕಾರಿದ ಬಿಸಿ ಪಾಟೀಲ್

Shilpa D

ಮೈಸೂರು: ನಾಯಕತ್ವ ಬದಲಾವಣೆ ವಿಚಾರ ಚರ್ಚಿಸುವ ಸಮಯ ಇದಲ್ಲ. ಯೋಗೇಶ್ವರ್ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡಬಾರದು. ಏನಾದ್ರೂ ಹೇಳುವುದಿದ್ದರೆ ಸ್ಪಷ್ಟವಾಗಿ ಹೇಳಲಿ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮೈಸೂರಿನಲ್ಲಿ  ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಬಿ.ಸಿ ಪಾಟೀಲ್,  ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಆಗಮನ ಹಿನ್ನಲೆ, ಉಸ್ತುವಾರಿ ಜೊತೆ ಇಂದು ಸಂಜೆ ಸಭೆ ಇದೆ. ಎಲ್ಲರೂ ಸಭೆಗೆ ಬರುವಂತೆ ಆಹ್ವಾನ ಇದೆ. ಆದರೆ ಪ್ರತ್ಯೇಕವಾಗಿ ಮಾತನಾಡುವ ಬಗ್ಗೆ ನನಗೆ ಗೊತ್ತಿಲ್ಲ ಎಂದರು.

ನಮ್ಮ ಪಕ್ಷದಲ್ಲಿ ಹೊರಗಿನಿಂದ ಬಂದವರು, ಒಳಗಿಂದ ಬಂದವರು ಎಂಬ ಪ್ರಶ್ನೆಯೇ ಇಲ್ಲ. ಮನೆಗೆ ಒಂದು ಸಾರಿ‌ ಸೊಸೆ ಬಂದ ಬಳಿಕ ಆಕೆ ಮನೆ ಮಗಳು ಇದ್ದಂತೆ. ಮನೆಯಲ್ಲಿ‌ ಅಣ್ಣತಮ್ಮಂದಿರ ನಡುವೆ ವ್ಯತ್ಯಾಸಗಳು ಇರುತ್ತದೆ. ಅದೇ ರೀತಿ ಪಕ್ಷದೊಳಗೆ ಟೀಕೆ, ಟಿಪ್ಪಣಿಗಳು ಸಹಜ. ಪಕ್ಷದ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ಅವರು ಎಲ್ಲ ರೀತಿಯ ಭಿನ್ನಾಭಿಪ್ರಾಯಗಳನ್ನು ಶಮನ ಮಾಡಲಿದ್ದಾರೆ’ ಎಂದರು. 

‘ಸಹಿ ಸಂಗ್ರಹ ಅಭಿಯಾನ ಸರಿಯಲ್ಲ. ಈ ವಿಚಾರದಲ್ಲಿ ನನ್ನನ್ನು ಯಾರೂ ಸಂಪರ್ಕಿಸಿಲ್ಲ. ಬಿಜೆಪಿ ರಾಷ್ಟ್ರೀಯ ಪಕ್ಷ. ಏನೇ ಗೊಂದಲಗಳು ಇದ್ದರೂ, ಪಕ್ಷದ ಚೌಕಟ್ಟಿನಲ್ಲೇ ಚರ್ಚೆಯಾಗಬೇಕು. ಹಾದಿ ಬೀದಿಯಲ್ಲಿ ಚರ್ಚೆ ನಡೆಸಬಾರದು. ಬಾಂಬೆ ಟೀಮ್ ಎಂಬುದು ಈ ಹಿಂದೆ ಇತ್ತು, ಈಗ ಇಲ್ಲ. ಎಲ್ಲರೂ ಜತೆಯಾಗಿದ್ದೇವೆ’ ಎಂದರು.

‘ಸಿ.ಪಿ.ಯೋಗೇಶ್ವರ್ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಮಾತನಾಡಬಾರದು. ಏನಾದರೂ ಹೇಳುವುದಿದ್ದರೆ ಸ್ಪಷ್ಟವಾಗಿ ಹೇಳಲಿ. ಸುಮ್ಮನೆ ತೋಚಿದಂತೆ ಮಾತನಾಡುವುದು ಸರಿಯಲ್ಲ’ ಎಂದು ಅಸಮಾಧಾನ ಹೊರಹಾಕಿದರು.

SCROLL FOR NEXT