ರಾಜಕೀಯ

ವಿಪಕ್ಷ ನಾಯಕರು 14 ದಿನ ಬಾಯಿ ಲಾಕ್ಡೌನ್ ಮಾಡಿಕೊಳ್ಳಲಿ: ಸಚಿವ ಈಶ್ವರಪ್ಪ

Manjula VN

ಶಿವಮೊಗ್ಗ: ರಾಜ್ಯದಲ್ಲಿ ಲಾಕ್ಡೌನ್ ಯಶಸ್ವಿಯಾಗಬೇಕಾದರೆ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಹೆಚ್.ಡಿ.ಕುಮಾರಸ್ವಾಮಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಮ್ಮ ಬಾಯಿಗೆ 14 ದಿನ ಲಾಕ್ಡೌನ್ ಮಾಡಿಕೊಳ್ಳಬೇಕು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಛೇಡಿಸಿದರು. 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಮೂವರು ನಾಯಕರು 14 ದಿನ ಬಾಯಿಗೆ ಬೀಗ ಹಾಕಿಕೊಂಡರೆ ರಾಜ್ಯದಲ್ಲಿ ಲಾಕ್ಡೌನ್ ಯಶಸ್ವಿಯಾಗುತ್ತದೆ. ಪ್ರಸ್ತುತ ಸಂದರ್ಭ ಸರಿಯಿಲ್ಲ. ಸಂಕಷ್ಟದಿಂದ ಹೊರಂಬ ಬಳಿಕ ಯಾವ ಭಾಷೆಯಲ್ಲಿ ಬೇಕಾದಾರೂ ಮಾತನಾಡಿಕೊಳ್ಳೋಣ. ಸದ್ಯಕ್ಕೆ ಇವರೆಲ್ಲರೂ ತಮ್ಮ ಬಾಯಿಗೆ ಬೀಗ ಹಾಕಿಕೊಳ್ಳುವುದು ಉತ್ತಮ ಎಂದು ಹೇಳಿದರು. 

ಸಂಕಷ್ಟ ಸಂದರ್ಭದಲ್ಲಿ ಸರ್ಕಾರಕ್ಕೆ ಒಳ್ಳೆಯ ಸಲಹೆ ನೀಡುವುದನ್ನು ಬಿಟ್ಟು ರೂ.10,000 ನೀಡಬೇಕು ಎಂದರೆ ಹಣ ಪ್ರಿಂಟ್ ಮಾಡುತ್ತೇವೆಯೇ? ಸೋಂಕಿತರಿಗೆ ಅನುಕೂಲ ಮಾಡುವ ನಿಟ್ಟಿನಲ್ಲಿ ಸಲಹೆ-ಸೂಚನೆ ನೀಡಿದರೆ ಸರ್ಕಾರ ಖಂಡಿತವಾಗಿ ಸ್ವೀಕಾರ ಮಾಡುವುದಕ್ಕೆ ಸಿದ್ಧವಿದೆ ಎಂದು ತಿಳಿಸಿದರು. 

ಸಂಕಷ್ಟ ಸಂದರ್ಭದಲ್ಲಿ ವೈದ್ಯಕೀಯ ಸಲಕರಣೆಗಳ ಖರೀದಿಗೆ ರಾಜ್ಯ ಸರ್ಕಾರ 224 ಶಾಸಕರಿಗೆ ತಲಾ ರೂ.1 ಕೋಟಿ ವಿಶೇಷ ಅನುದಾನ ಬಿಡುಗಡೆ ಮಾಡಿದೆ. ಬಿಡುಗಡೆಯಾದ ಅನುದಾನವನ್ನು ಹೇಗೆ ಬಳಕೆ ಮಾಡಿಕೊಳ್ಳಬೇಕೆಂದು ಜಿಲ್ಲೆಯ ಎಲ್ಲಾ ಶಾಸಕರು ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳುತ್ತೇವೆ ಎಂದರು.

ರಾಜ್ಯಕ್ಕೆ ಅವಶ್ಯಕವಾದ ಆಮ್ಲಜನಕವನ್ನು ನಾವೇ ಉತ್ಪಾದನೆ ಮಾಡಿಕೊಂಡು ಬಳಸಿಕೊಳ್ಳುತ್ತೇವೆ ಎಂದು ಆರೋಗ್ಯ ಸಚಿವ ಸುಧಾಕರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಸುಧಾಕರ್ ಅವರು ಸ್ವತಃ ವೈದ್ಯರಾಗಿದ್ದಾರೆ. ಅವರು ಆ ದಿಕ್ಕಿನಲ್ಲಿ ಯೋಚನೆ ಮಾಡುತ್ತಾರೆ. ಅವರ ಯೋಚನೆ ಸರಿ ಇದೆ ಎಂದು ಹೇಳಿದ್ದಾರೆ. 

SCROLL FOR NEXT