ರಾಜಕೀಯ

ಆರ್ ಎಸ್ ಎಸ್ ಗೆ ಎಚ್ ಡಿಕೆ ಗುದ್ದು; ಬಿಜೆಪಿಯ ಮೋದಿ ಉತ್ಸವದಲ್ಲಿ ಸಾ.ರಾ. ಮಹೇಶ್ ಭಾಗಿ: ಏನಿದರ ಗುಟ್ಟು!

Shilpa D

ಮೈಸೂರು: ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಆರ್ ಎಸ್ ಎಸ್ ವಿರುದ್ಧ ಹರಿಹಾಯುತ್ತಿದ್ದರೇ ಮತ್ತೊಂದೆಡೆ ಕೃಷ್ಣರಾಜ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ಎಸ್‌.ಎ. ರಾಮದಾಸ್‌ ಆಯೋಜಿಸಿದ್ದ ಮೋದಿ ಯುಗ ಉತ್ಸವ್‌ ಕಾರ್ಯಕ್ರಮದಲ್ಲಿ ಜೆಡಿಎಸ್‌ ಶಾಸಕ ಸಾ.ರಾ. ಮಹೇಶ್‌ ಪಾಲ್ಗೊಂಡಿದ್ದು ಎಲ್ಲರಿಗೂ ಅಚ್ಚರಿ ಮೂಡಿಸಿದೆ.

ವಿದ್ಯಾರಣ್ಯಪುರಂನ ರಾಮಲಿಂಗೇಶ್ವರ ಸ್ವಾಮಿ ದೇವಸ್ಥಾನ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಮೋದಿ ಯುಗ ಉತ್ಸವ್‌ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಾ.ರಾ. ಮಹೇಶ್‌ ಅವರು, ಪ್ರಧಾನಿ ಮೋದಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು ಎಂದು ಬರೆದ ಅಂಚೆ ಪತ್ರವನ್ನು ಅಂಚೆ ಪೆಟ್ಟಿಗೆಗೆ ಹಾಕಿದರು. ಈ ವೇಳೆ ಸಾ.ರಾ. ಮಹೇಶ್‌ ಅವರಿಗೆ ಕೇಸರಿ ಶಾಲು ಹೊದಿಸಿ ಸ್ವಾಗತಿಸಲಾಯಿತು. ಕಾರ್ಯಕ್ರಮ ಮುಗಿಯುವವರೆಗೂ ಕೇಸರಿ ಶಾಲು ಹಾಕಿಕೊಂಡಿದ್ದರು. 

ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಈ ಕಾರ್ಯಕ್ರಮದಲ್ಲಿ ಶಾಸಕ ಸಾ.ರಾ. ಮಹೇಶ್‌ ಅವರು ಪಾಲ್ಗೊಂಡಿರುವುದು ವಿಶೇಷ. ಅವರು ಮೋದಿ ಅವರಿಗೆ ಹುಟ್ಟುಹಬ್ಬದ ಶುಭ ಕೋರಿರುವುದು ಮತ್ತೂ ವಿಶೇಷವಾಗಿದ್ದು, ಅಂತರಂಗದಲ್ಲಿ ಅವರು ನಮ್ಮವರು ಎಂಬ ಅಭಿಮಾನವಿದೆ. ಆದರೆ ಅವರು ಬೇರೆಡೆ ಇದ್ದಾರೆ ಎಂದರು.

ಸಚಿವರಾದ ಎಸ್.ಟಿ.ಸೋಮಶೇಖರ್, ಭೈರತಿ ಬಸವರಾಜು ಅವರೊಂದಿಗೆ ಕುಳಿತ ಸಾ.ರಾ.ಮಹೇಶ್ ಅವರು ಕೇಸರಿ ಶಾಲನ್ನು ಬಿಜೆಪಿ ಕಾರ್ಯಕರ್ತರಂತೆ ತನ್ನ ಹೆಗಲಿಗೆ ಹಾಕಿಕೊಳ್ಳುವ ಮೂಲಕ ಕಾರ್ಯಕರ್ತರಲ್ಲಿ ಅಚ್ಚರಿ ಮೂಡಿಸಿದ್ದಾರೆ.

ಈ ಮೊದಲು ಸಾ.ರಾ. ಮಹೇಶ್‌ ಅವರು, ಬಿಜೆಪಿಯಲ್ಲೇ ಇದ್ದು, ಕೆ.ಆರ್‌.ನಗರ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಬಳಿಕ ಜೆಡಿಎಸ್‌ ಸೇರಿ ಸತತ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಅಲ್ಲದೆ ಶಾಸಕ ಎಸ್‌.ಎ. ರಾಮದಾಸ್‌ ಅವರ ಆಪ್ತವಲಯದಲ್ಲಿರುವ ನಾಯಕರಲ್ಲಿ ಸಾ.ರಾ. ಮಹೇಶ್‌ ಕೂಡ ಒಬ್ಬರಾಗಿದ್ದಾರೆ.

SCROLL FOR NEXT