ರಾಜಕೀಯ

2023ರ ಚುನಾವಣೆ ಬಳಿಕ ಕಾಂಗ್ರೆಸ್ ಉನ್ನತ ನಾಯಕರಿಂದಲೇ ಮುಖ್ಯಮಂತ್ರಿಗಳ ಆಯ್ಕೆ: ಸಿದ್ದರಾಮಯ್ಯ

Manjula VN

ಬೆಂಗಳೂರು: 2023ರ ರಾಜ್ಯ ವಿಧಾನಸಭೆ ಚುನಾವಣೆ ಪೂರ್ಣಗೊಂಡ ಬಳಿಕ ಕಾಂಗ್ರೆಸ್ ಉನ್ನತ ನಾಯಕರು ಮುಖ್ಯಮಂತ್ರಿಗಳನ್ನು ಆಯ್ಕೆ ಮಾಡುತ್ತಾರೆ. ಅವರು ಯಾರನ್ನೇ ಸೂಚಿಸಿದರೂ ನಿರ್ಧಾರಕ್ಕೆ ಎಲ್ಲರೂ ತಲೆ ಬಾಗುತ್ತೇವೆಂದು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರು ಭಾನುವಾರ ಹೇಳಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳ ಕುರಿತು ಹೈಕಮಾಂಡ್ ನಿರ್ಧಾರ ಕೈಗೊಳ್ಳಲಿದೆ. ಕಾಂಗ್ರೆಸ್ ರಾಷ್ಟ್ರೀಯ ಪಕ್ಷವಾಗಿದೆ. ಬಸವರಾಜ ಬೊಮ್ಮಾಯಿಯವರನ್ನು ಮುಖ್ಯಮಂತ್ರಿಗಳನ್ನಾಗಿ ಯಾರು ಮಾಡಿದರು? ಶಾಸಕರು ಮಾಡಿದರೇ? ಬಿಜೆಪಿ ಹೈಕಮಾಂಡ್ ಹಾಗೂ ಆರ್'ಎಸ್ಎಸ್ ಮಾಡಿತು. ಅದೇ ರೀತಿ ನಮ್ಮಲ್ಲೂ ಹೈಕಮಾಂಡ್ ಇದೆ ಎಂದು ಹೇಳಿದ್ದಾರೆ. 

ಇದೇ ವೇಳೆ ರಾಷ್ಟ್ರೀಯ ರಾಜಕೀಯಕ್ಕೆ ಹೈಕಮಾಂಡ್ ಆಹ್ವಾನ ನೀಡಿದೆ ಎಂಬ ಊಹಾಪೋಹಗಳ ವಿರುದ್ಧ ಕಿಡಿಕಾರಿದ ಅವರು, ಸೋನಿಯಾ ಗಾಂಧಿ ಭೇಟಿ ವೇಳೆ ಈ ವಿಚಾರ ಕುರಿತು ಚರ್ಚೆಗಳೇ ನಡೆದಿಲ್ಲ. ನನಗೀಗ 74 ವರ್ಷ ವಯಸ್ಸಾಗಿದೆ. ಗರಿಷ್ಠ ಎಂದರೂ ಇನ್ನೈದು ವರ್ಷ ರಾಜಕೀಯದಲ್ಲಿ ಇರಬಹುದು. ಕರ್ನಾಟಕ ರಾಜಕೀಯಲ್ಲಿಯೇ ನಾನು ಉತ್ತಮವಾಗಿದ್ದೇನೆ. ಅದರಲ್ಲಿಯೇ ನನಗೆ ಸಂತೋಷವಿದೆ ಎಂದು ತಿಳಿಸಿದ್ದಾರೆ. 

ಬಳಿಕ ರಾಹುಲ್ ಗಾಂಧಿ ಕುರಿತು ಮಾತನಾಡಿ, ರಾಹುಲ್ ಅವರೇ ಪಕ್ಷದ ಅಧ್ಯಕ್ಷರಾಗಬೇಕು. ಸಾಕಷ್ಟು ಬಾರಿ ಈ ಬಗ್ಗೆ ನಾನು ಮಾತನಾಡಿದ್ದೇನೆಂದಿದ್ದಾರೆ.

SCROLL FOR NEXT