ರಾಜಕೀಯ

ಫ್ಲೆಕ್ಸ್ ವಿವಾದ: ಬೆಂಗಳೂರು ಜ್ಞಾನಭಾರತಿ ವಿವಿಗೆ ಡಿಕೆ ಶಿವಕುಮಾರ್ ಭೇಟಿ; ನೈತಿಕ ಬೆಂಬಲ ನೀಡುವುದಾಗಿ ಭರವಸೆ

Lingaraj Badiger

ಬೆಂಗಳೂರು: ಜ್ಞಾನಭಾರತಿ ವಿದ್ಯಾರ್ಥಿಗಳು, ಸಚಿವ ಮುನಿರತ್ನ ಬೆಂಬಲಿಗರ ನಡುವೆ ಜಟಾಪಟಿ ನಡೆದಿದ್ದು, ಘಟನೆ ನಂತರ ಬೆಂಗಳೂರು ಜ್ಞಾನಭಾರತಿ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್‌ ಅವರು ವಿದ್ಯಾರ್ಥಿಗಳ ಬಂಧನವನ್ನು ಖಂಡಿಸಿದ್ದಾರೆ.

ಹೈಕೋರ್ಟ್‌ನ ಸ್ಪಷ್ಟ ಆದೇಶವಿದ್ದರೂ ಸಹ ವಿವಿ ಆವರಣದಲ್ಲಿ ಬಿಜೆಪಿ ಫ್ಲೆಕ್ಸ್, ಬ್ಯಾನರ್, ಬಂಟಿಂಗ್ಸ್ ಹಾಕಿದ್ದನ್ನು ವಿರೋಧಿಸಿದ್ದಕ್ಕೆ ಸಚಿವ ಮುನಿರತ್ನ ಅವರ ಗನ್ ಮ್ಯಾನ್, ಬೆಂಬಲಿಗರು, ಪೊಲೀಸರಿಂದ ಹಲ್ಲೆಗೊಳಗಾದ ಬೆಂಗಳೂರು ವಿವಿ ವಿದ್ಯಾರ್ಥಿಗಳನ್ನು ಡಿಕೆ ಶಿವಕುಮಾರ್ ಭೇಟಿ ಮಾಡಿ ಸಮಾಧಾನ ಮಾಡಿದರು.

ವಿದ್ಯಾರ್ಥಿಗಳ ಜೊತೆ ಚರ್ಚೆ ನಡೆಸಿದ ಅವರು, ಶಿಕ್ಷಣ ಸಂಸ್ಥೆಗಳು ರಾಜಕೀಯ ಪ್ರಭಾವದಿಂದ ದೂರವಿರಬೇಕು. ಭವಿಷ್ಯದ ಪ್ರಜೆಗಳಾದ ವಿದ್ಯಾರ್ಥಿಗಳನ್ನು ನಿಂದಿಸಿ ಪೊಲೀಸರ ಮೂಲಕ ದೌರ್ಜನ್ಯ ಎಸಗಿದ ಸಚಿವರ ನಡೆ ಖಂಡನೀಯ ಎಂದು ಹೇಳಿದ ಡಿಕೆಶಿ, ನೈತಿಕ ಬೆಂಬಲ ನೀಡುವುದಾಗಿ ವಿದ್ಯಾರ್ಥಿಗಳಿಗೆ ಭರವಸೆ ನೀಡಿದ್ದಾರೆ.

ವಿವಿ ಆವರಣದಲ್ಲಿ ಸಚಿವರ ಬೆಂಬಲಿಗರು ಬಿಜೆಪಿಯ ಬಂಟಿಂಗ್ ಮತ್ತು ಫ್ಲೆಕ್ಸ್‌ಗಳನ್ನು ಹಾಕುತ್ತಿದ್ದದ್ದನ್ನು ಪ್ರಶ್ನೆ ಮಾಡಿದ್ದಕ್ಕೆ ವಿದ್ಯಾರ್ಥಿ ನಾಯಕರು ಮತ್ತು ಸಚಿವರ ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆದಿತ್ತು. ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನ ಮಾಡಿದ್ದರು, ಆದರೂ ಸಚಿವರ ಬೆಂಬಲಿಗರು ವಿದ್ಯಾರ್ಥಿಗಳನ್ನು ನಿಂದಿಸಿ ಬಲವಂತವಾಗಿ ಪೊಲೀಸ್‌ ವ್ಯಾನ್ ಹತ್ತಿಸಿದ್ದರು. ಅಲ್ಲದೆ ವಿದ್ಯಾರ್ಥಿಗಳ ಮೊಬೈಲ್ ಕಸಿದು ಗಲಾಟೆಯ ವಿಡಿಯೋಗಳನ್ನು ಡಿಲೀಟ್ ಮಾಡಿದ್ದರು.

SCROLL FOR NEXT