ರಾಜಕೀಯ

ಸಿದ್ದರಾಮಯ್ಯಗೆ ವರುಣಾ ಸೇಫ್, ಬೆಂಬಲಿಗರು ಹೊಗಳುತ್ತಾರೆಂದು ಕೋಲಾರದಲ್ಲಿ ನಿಂತು ಸೋಲುವುದು ಬೇಡ: ಸಿ.ಎಂ ಇಬ್ರಾಹಿಂ ಸಲಹೆ!

Shilpa D

ಮೈಸೂರು : 2023ರ ವಿಧಾನಸಭೆ ಚುನಾವಣೆಯೇ ಸಿದ್ದರಾಮಯ್ಯ ಅವರಿಗೆ ಕೊನೆಯಾಗಿರುವ ಕಾರಣ ವರುಣಾ ಕ್ಷೇತ್ರದಲ್ಲೇ ಕಣಕ್ಕಿಳಿಯುವುದು ಸೂಕ್ತ. ಯಾರೋ 4-5 ಜನರು ಹೊಗಳಿದಾಕ್ಷಣ ಕೋಲಾರದಲ್ಲಿ ಸ್ಪರ್ಧಿಸಿ ಸೋಲುವುದು ಬೇಡ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಸಲಹೆ ನೀಡಿದರು.

ಮೈಸೂರಿನಲ್ಲಿ ಮಾತನಾಡಿದ ಸಿಎಂ ಇಬ್ರಾಹಿಂ, ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ಧೆ ಮಾಡದೆ ವರುಣ ಕ್ಷೇತ್ರದಲ್ಲಿ ನಿಲ್ಲುವುದು ಉತ್ತಮ.  ರಾಜಕೀಯದ ಕೊನೆಯ ಘಟ್ಟದಲ್ಲಿ ಸೋಲಿನಿಂದ ನಿವೃತ್ತಿಯಾಗುವುದು ಬೇಡ ಎಂದು ಎಚ್ಚರಿಸಿದರು. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕಳೆದ ಬಾರಿ ಜನರು ಸೋಲಿಸಿದರು. ಬಾದಾಮಿ ಕ್ಷೇತ್ರದಲ್ಲಿ ಹಗಲು-ರಾತ್ರಿ ಎನ್ನದೆ ಓಡಾಡಿ ಕೆಲಸ ಮಾಡಿದ್ದರಿಂದ ಅತ್ಯಲ್ಪ ಮತಗಳ ಅಂತರದಿಂದ ಜಯ ದೊರೆಯಿತು. ಹೀಗಾಗಿ ಕೋಲಾರದಲ್ಲಿ ಸ್ಪರ್ಧೆ ಮಾಡಬಾರದೆಂದು ಸಲಹೆ ನೀಡಿದ್ದಾರೆ.

ಜೆಡಿಎಸ್ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು. ಕೆಲವು ಕ್ಷೇತ್ರಗಳಲ್ಲಿ ಮೂರ್ನಾಲ್ಕು ಆಕಾಂಕ್ಷಿಗಳಿರುವುದರಿಂದ ಕೆಲವು ನಾಯಕರು ರಾಜೀನಾಮೆ ನೀಡಬಹುದು ಎಂದು ಹೇಳಿದರು.

ಪಕ್ಷದ ಹಿರಿಯ ನಾಯಕ ಎಚ್‌ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದ ಅವರು, ಕಾಂಗ್ರೆಸ್ ಮತ್ತು ಬಿಜೆಪಿ ಎರಡರಿಂದಲೂ ಜನರು ಬೇಸತ್ತಿದ್ದಾರೆ. ಜೆಡಿಎಸ್ ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ಸಾಧಿಸುವುದರಿಂದ ಮೈಸೂರು ಜಿಲ್ಲೆ ಕಾಂಗ್ರೆಸ್ ಮುಕ್ತವಾಗಲಿದೆ ಎಂದು ಹೇಳಿದ್ದಾರೆ.

SCROLL FOR NEXT