ರಾಜಕೀಯ

ವಿಧಾನಸಭಾ ಚುನಾವಣೆ 2023: ಒಂದು ಕ್ಷೇತ್ರದಿಂದ ಮಾತ್ರ ಸ್ಪರ್ಧೆ; ಸಿದ್ದರಾಮಯ್ಯ ಸ್ಪಷ್ಟನೆ

Manjula VN

ಮೈಸೂರು: ಊಹಾಪೋಹಗಳಿಗೆ ಶುಕ್ರವಾರ ತೆರೆ ಎಳೆದಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು, 2023ರ ವಿಧಾನಸಭಾ ಚುನಾವಣೆಯಲ್ಲಿ ಎರಡು ಕ್ಷೇತ್ರಗಳ ಬದಲಾಗಿ ಒಂದು ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಹೇಳಿದ್ದಾರೆ.

ಹಲವು ಕ್ಷೇತ್ರಗಳ ಬೆಂಬಲಿಗರು ಹಾಗೂ ಮುಖಂಡರು ವಿವಿಧ ಕ್ಷೇತ್ರಗಳಿಂದ ಸ್ಪರ್ಧಿಸುವಂತೆ ಆಹ್ವಾನ ನೀಡಿದ್ದರೂ, ಈ ಸಂಬಂಧ ಸಿದ್ದರಾಮಯ್ಯ ಅವರು ಕೋಲಾರ, ವರುಣಾ ಮತ್ತು ಬಾದಾಮಿ ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಆದರೆ, ಈ ಬಗ್ಗೆ ಪಕ್ಷದ ಹೈಕಮಾಂಡ್‌ನೊಂದಿಗೆ ಸಮಾಲೋಚಿಸಿದ ನಂತರ ಅಂತಿಮ ಘೋಷಣೆ ಹೊರಬೀಳಲಿದೆ ಎನ್ನಲಾಗಿದೆ.

ಸಮೀಕ್ಷೆಯೊಂದು ಸೋಲಿನ ಮುನ್ಸೂಚನೆ ನೀಡಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ ಅವರು, ಸಮೀಕ್ಷೆ ನಡೆಸುವುದರಲ್ಲಿ ತಪ್ಪೇನಿದೆ. ನಾನು ಅಥವಾ ನನ್ನ ಪಕ್ಷವು ಸಮೀಕ್ಷೆಯನ್ನು ಮಾಡಿಲ್ಲ. ನರೇಂದ್ರ ಮೋದಿ 2 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿರಲಿಲ್ಲವೇ? ಹಾಗಾದರೆ ಅವರು ಸಮೀಕ್ಷೆ ಮಾಡಿಸಿರಲಿಲ್ಲವೇ. ನಾವು ರಾಜ್ಯವ್ಯಾಪಿ ಪ್ರವಾಸ ಮಾಡುತ್ತೇವೆ ಹೇಳಿದರು.

ಇದೇ ವೇಳೆ ಮತದಾರರ ಪಟ್ಟಿ ಪರಿಷ್ಕರಿಣೆ ವೇಳೆ ಮಾಹಿತಿ ಕಳ್ಳತನ ಆಗಿದ್ದು, ಈ ಬಗ್ಗೆ ದೂರು ನೀಡಲಾಗಿದೆ. ನಾಳೆ ಚುನಾವಣಾ ಆಯೋಗದ ಮುಂದೆ ಧರಣಿ ಮಾಡುತ್ತೇವೆ. ಬಿಬಿಎಂಪಿ ಆಯುಕ್ತರು ಖಾಸಗಿ ಕಂಪನಿಗೆ ಇದನ್ನ ವಹಿಸಿದ್ದಾರೆಂದು ತಿಳಿಸಿದರು.

ಚುನಾವಣಾ ಆಯೋಗ ಸ್ವೀಪ್ ಹೆಸರಿನಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದೆ. ಇವರು ಕಾಂಪಿಟೇಟಿವ್ ಬಿಡ್ ಕರಿಯಬೇಕಿತ್ತು. ಉಚಿತವಾಗಿ ಪರಿಷ್ಕರಣೆ ಮಾಡುತ್ತೇವೆ ಎಂದಿದ್ದಕ್ಕೆ ಚಿಲುಮೆ ಮತ್ತು ಹೊಂಬಾಳೆ ಕಂಪನಿಗೆ ಕೊಟ್ಟಿದ್ದಾರೆ. ಇದಕ್ಕೆ ಕೋಟ್ಯಾಂತರ ಖರ್ಚಾಗುತ್ತದೆ. ಆ ಕಂಪನಿ ಲಾಭ ಇಲ್ಲದೆ ಇದನ್ನು ಮಾಡುತ್ತದೆಯೇ. ಅಲ್ಪಸಂಖ್ಯಾತ, ದಲಿತರು, ಹಿಂದುಳಿದವರು ಕಾಂಗ್ರೆಸ್ ಪರ ಇರುತ್ತಾರೆ. ಅಂತಹ ಮತದಾರರ ಮಾಹಿತಿ ಡಿಲೀಟ್ ಮಾಡಿ ಬಿಜೆಪಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ ಎಂದು ಆರೋಪಿಸಿದರು.

ನಾವು ಆರೋಪ ಮಾಡಿದ ಮೇಲೆ ಬಿಬಿಎಂಪಿ ಆಯುಕ್ತರು ರಕ್ಷಣಾತ್ಮಕವಾಗಿ ಹೇಳಿಕೆ ನೀಡುತ್ತಿದ್ದಾರೆ. ಇಲ್ಲಿ ಮಾಹಿತಿ ಕಳ್ಳತನ ಆಗಿದೆ. ಬಿಎಲ್‌ಓಗಳು ಯಾವಾಗಲೂ ಸರ್ಕಾರಿ ಅರೆ ಸರ್ಕಾರಿ ನೌಕರರಾಗಬೇಕು. ಇವರು ತಮಗೆ ಬೇಕಾದವರನ್ನು ಬಿಎಲ‌್‌ಒ ಮಾಡಿಕೊಂಡಿದ್ದಾರೆ. ಇದು ಕಾನೂನು ಬಾಹಿರವಾಗಿ ಹಾಗೂ ಖಾಸಗಿಯವರನ್ನ ಬಿಎಲ್‌ಒಗಳ ನೇಮಕಕ್ಕೆ ನಿಮಗೆ ಅಧಿಕಾರ ಕೊಟ್ಟವರು ಯಾರು ಎಂದು ಪ್ರಶ್ನೆ ಮಾಡಿದರು.

ಬಳಿಕ ಮುಂದಿನ ಚುನಾವಣೆಯಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ಸ್ಪರ್ಧೆ ಬೇಡ ಎಂದ ಮಾಜಿ ಸಚಿವ ಸಂತೋಷ್ ಲಾರ್ಡ್ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಅವರು ತಮ್ಮ ಅಭಿಪ್ರಾಯ ಹೇಳಿದ್ದಾರೆ. ಅದನ್ನು ಪರಿಗಣನೆಗೆ ತೆಗೆದುಕೊಳ್ಳೋಣ ಎಂದರು.

SCROLL FOR NEXT