ರಾಜಕೀಯ

ವಿಧಾನಸಭಾ ಚುನಾವಣೆಗೆ ಮುತಾಲಿಕ್ ಸ್ಪರ್ಧೆ, ಆದರೆ ಬಿಜೆಪಿಯಿಂದಲ್ಲ!!

Srinivasamurthy VN

ಧಾರವಾಡ: ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ತಾವು ಸ್ಪರ್ಧಿಸುತ್ತೇವೆ ಎಂದು ಖಚಿತಪಡಿಸಿರುವ ಶ್ರೀರಾಮಸೇನೆ ಮುಖಸ್ಥ ಪ್ರಮೋದ್ ಮುತಾಲಿಕ್ ಅವರು ತಾವು ಬಿಜೆಪಿಯಿಂದ ಸ್ಪರ್ಧಿಸುತ್ತಿಲ್ಲ ಎಂದು ಅಚ್ಚರಿ ಮೂಡಿಸಿದ್ದಾರೆ.

ಹೌದು.. ಈ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಗೆ (Karnataka Vidhan Sabha Election) ಸ್ಪರ್ಧಿಸಲು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ (Pramod Muthalik) ಸಜ್ಜಾಗಿದ್ದಾರೆ. ಈ ಕುರಿತು ಸ್ವತಃ ಅವರೇ ಮಾಹಿತಿ ನೀಡಿದ್ದು, ವಿಧಾನಸಭಾ ಚುನಾವಣೆಗೆ ನಾನು ಸ್ಪರ್ಧೆ ಮಾಡುವುದು ಖಚಿತ. ಆದರೆ ನಾನು ಬಿಜೆಪಿ ಪಕ್ಷದಿಂದ ಸ್ಪರ್ಧಿಸುವುದಿಲ್ಲ. ಬಿಜೆಪಿಯವರು (BJP) ಟಿಕೆಟ್ ಕೊಡಲು ಬಂದರೂ ನಾನು ಪಡೆದುಕೊಳ್ಳುವುದಿಲ್ಲ. ಸ್ವತಂತ್ರನಾಗಿ ಸ್ಪರ್ಧೆ ಮಾಡುತ್ತೇನೆ ಎಂದು ಘೋಷಣೆ ಮಾಡಿದ್ದಾರೆ.

ಧಾರವಾಡದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಮೋದ್ ಮುತಾಲಿಕ್ ಅವರು, ಬಿಜೆಪಿಯಿಂದ ನನಗೆ ಯಾವುದೇ ಸಕಾರಾತ್ಮಕ ಸ್ಪಂದನೆ ದೊರೆಯಲಿಲ್ಲ. 2014ರಿಂದಲೂ ನಾನು ಬಿಜೆಪಿ ಮೇಲೆ ಆಸೆ ಇಟ್ಟಿದ್ದೆ. ಆದರೆ, ಅವರು ಸಕಾರಾತ್ಮಕವಾಗಿ ಸ್ಪಂದನೆ ನೀಡಲಿಲ್ಲ. ಇನ್ನು ಮೇಲೆ ಬಿಜೆಪಿಯವರು ಟಿಕೆಟ್ ಕೊಡಲು ಬಂದರೂ ನಾನು ಪಡೆದುಕೊಳ್ಳುವುದಿಲ್ಲ. ಸ್ವತಂತ್ರನಾಗಿ ಸ್ಪರ್ಧೆ ಮಾಡುತ್ತೇನೆ. ಹಿಂದೂ ಕಾರ್ಯಕರ್ತರ ಮೇಲಾಗುತ್ತಿರುವ ದೌರ್ಜನ್ಯಗಳನ್ನು ನೋಡಿ ಈ ತೀರ್ಮಾನಕ್ಕೆ ಬಂದಿದ್ದೇನೆ. ಕಾರ್ಯಕರ್ತರ ಆಸೆಯೂ ಇದೇ ಆಗಿದೆ ಎಂದು ಹೇಳಿದ್ದಾರೆ.

ರಾಜ್ಯದ ಏಳೆಂಟು ಕ್ಷೇತ್ರಗಳಿಂದ ಸ್ಪರ್ಧೆ ಮಾಡುವುದಕ್ಕಾಗಿ ಹಿಂದೂ ಕಾರ್ಯಕರ್ತರು ಮನವಿ ಮಾಡಿದ್ದು, ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇನೆ ಎಂಬುದನ್ನು ಶೀಘ್ರವೇ ಬಹಿರಂಗಪಡಿಸುತ್ತೇನೆ. ಬೆಳಗಾವಿ ನಗರದ ಎರಡೂ ಕ್ಷೇತ್ರ, ತೇರದಾಳ, ಜಮಖಂಡಿ, ಕಾರ್ಕಳ, ಉಡುಪಿ, ಶೃಂಗೇರಿ, ಪುತ್ತೂರಿನಿಂದ ಸ್ಪರ್ಧೆ ಮಾಡುವುದಕ್ಕಾಗಿ ಕಾರ್ಯಕರ್ತರು ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ತೊಡಗಿಕೊಂಡಿರುವವರು ಒತ್ತಡ ಹಾಕುತ್ತಿದ್ದಾರೆ. ಹೀಗಾಗಿ ಬರುವ ವಿಧಾನಸಭಾ ಚುನಾವಣೆಗೆ ನಾನು ಸ್ಪರ್ಧೆ ಮಾಡುವುದು ಖಚಿತ. ಯಾವ ಕ್ಷೇತ್ರ ಎನ್ನುವುದನ್ನು ಶೀಘ್ರ ಬಹಿರಂಗಪಡಿಸುತ್ತೇವೆ. 

ಬಿಜೆಪಿಗೆ ಮಾತ್ರ ಬೆಂಬಲ
ಅಂತೆಯೇ ನಾನು ಕಟ್ಟರ್ ಹಿಂದೂ ಆಗಿರುವುದರಿಂದ ಕಾಂಗ್ರೆಸ್ (Congress), ಜೆಡಿಎಸ್‍ನವರು (JDS) ನನಗೆ ಟಿಕೆಟ್ ಕೊಡುವ ಪ್ರಶ್ನೆಯೇ ಇಲ್ಲ. ನಾನು ಪಕ್ಷವನ್ನೂ ಕಟ್ಟುವುದಿಲ್ಲ. ಚುನಾವಣೆಯಲ್ಲಿ ಗೆಲುವು ಸಾಧಿಸಿದರೂ ನಾನು ಹಿಂದೂ ತತ್ವ ಸಿದ್ಧಾಂತದ ಮೇಲೆ ಇರುವ ಬಿಜೆಪಿಗೆ ಬೆಂಬಲ ಸೂಚಿಸುತ್ತೇನೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
 

SCROLL FOR NEXT