ರಾಜಕೀಯ

ಜೆಡಿಎಸ್ ನಲ್ಲಿ ಹಾಸನ ಕ್ಷೇತ್ರ ಟಿಕೆಟ್ ಹಂಚಿಕೆ ಕಗ್ಗಂಟು: ಹೆಚ್ ಡಿ ರೇವಣ್ಣ, ಭವಾನಿ ರೇವಣ್ಣ ಪಕ್ಷೇತರರಾಗಿ ಸ್ಪರ್ಧೆ?

Sumana Upadhyaya

ಹಾಸನ: ಹಾಸನ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದಿಂದ ಟಿಕೆಟ್ ಹಂಚಿಕೆ ಕುರಿತ ಬಿಕ್ಕಟ್ಟು ಶಮನ ಆಗುವ ಲಕ್ಷಣ ಕಾಣುತ್ತಿಲ್ಲ. ಮಾಜಿ ಸಚಿವ ಹೆಚ್.ಡಿ.ರೇವಣ್ಣ ಅವರು ತಮ್ಮ ಪತ್ನಿ ಭವಾನಿ ಅವರಿಗೆ ಹಾಸನ ಟಿಕೆಟ್ ನೀಡುವಂತೆ ಪಕ್ಷದ ಮುಖಂಡರ ಮೇಲೆ ಒತ್ತಡ ಹೇರಲು ಅಂತಿಮ ರಣಕಹಳೆ ಮೊಳಗಿಸಿದ್ದಾರೆ. ಟಿಕೆಟ್ ನೀಡದಿದ್ದರೆ ಸ್ವತಂತ್ರವಾಗಿ ಸ್ಪರ್ಧಿಸುವ ಬೆದರಿಕೆಯನ್ನೂ ಹಾಕಿದ್ದಾರೆ.

ವಿಧಾನಸಭೆ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸುವುದಾಗಿ ಬೆದರಿಕೆ ಹಾಕಿರುವುದರಿಂದ ಪರಿಸ್ಥಿತಿಯನ್ನು ವರಿಷ್ಠ ದೇವೇಗೌಡರು ಯಾವ ರೀತಿ ನಿಭಾಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಪಕ್ಷವು ಭವಾನಿ ಅವರಿಗೆ ಟಿಕೆಟ್ ನೀಡಲು ವಿಫಲವಾದರೆ ಸ್ವತಂತ್ರ ಅಭ್ಯರ್ಥಿಗಳಾಗಿ ರೇವಣ್ಣ ಮತ್ತು ಭವಾನಿ ಇಬ್ಬರೂ ಸ್ಪರ್ಧಿಸುವ ಸಾಧ್ಯತೆಯಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಈ ಬಗ್ಗೆ ರೇವಣ್ಣ ಈಗಾಗಲೇ ತಮ್ಮ ಸೋದರ ಕುಮಾರಸ್ವಾಮಿಗೆ ಸಂದೇಶ ರವಾನಿಸಿದ್ದಾರೆ ಎಂಬ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಕೇಳಿಬರುತ್ತಿದೆ. ಪಕ್ಷದ ಕಾರ್ಯಕರ್ತರೊಬ್ಬರಿಗೆ ಹಾಸನ ಟಿಕೆಟ್ ನೀಡುವುದಾಗಿ ಸಹೋದರ ಎಚ್.ಡಿ.ಕುಮಾರಸ್ವಾಮಿ ಆಗಾಗ ಹೇಳುತ್ತಿದ್ದರೂ ರೇವಣ್ಣ ಸುಮ್ಮನಿಲ್ಲ.

ರೇವಣ್ಣ ಅವರು ಪಕ್ಷದ ವಿವಿಧ ಸಾಮರ್ಥ್ಯದ ಕಾರ್ಯಕರ್ತರೊಂದಿಗೆ ಸರಣಿ ಸಭೆ ನಡೆಸಿ, ಮುಂದಿನ ಕ್ರಮಕ್ಕಾಗಿ ಸಲಹೆಗಳನ್ನು ಸಂಗ್ರಹಿಸಿದ್ದಾರೆ. ರೇವಣ್ಣ ನೇತೃತ್ವದಲ್ಲಿ ಶುಕ್ರವಾರ ಹಾಸನದಲ್ಲಿ ಪಕ್ಷದ ಹಿರಿಯ ಕಾರ್ಯಕರ್ತರ ಸಭೆ ನಡೆಸಿ ಭವಾನಿ ಅವರಿಗೆ ಪಕ್ಷ ಟಿಕೆಟ್ ಘೋಷಿಸದಿದ್ದಲ್ಲಿ ಮುಂದೇನು ಮಾಡಬಹುದು ಎಂಬ ಸಲಹೆಗಳನ್ನು ಪಡೆಯಿತು. ರೇವಣ್ಣ ಮತ್ತು ಭವಾನಿ ಪಕ್ಷೇತರರಾಗಿ ಸ್ಪರ್ಧಿಸುವಂತೆ ಹಿರಿಯ ನಾಯಕರು ಸಲಹೆ ನೀಡಿದ್ದಾರೆ ಎನ್ನಲಾಗಿದೆ.

ರೇವಣ್ಣ ಕೂಡ ಟಿಕೆಟ್ ವಿಚಾರದಲ್ಲಿ ಕುಮಾರಸ್ವಾಮಿಯವರ ರೀತಿಯಲ್ಲಿಯೇ ತಮ್ಮ ನಿಲುವಿಗೆ ಅಂಟಿಕೊಂಡಿದ್ದಾರೆ. ಆದರೆ, ಅವರು ಮತ್ತು ಅವರ ಪತ್ನಿ ಈ ನಿಟ್ಟಿನಲ್ಲಿ ಇನ್ನೂ ನಿರ್ಧಾರ ಕೈಗೊಳ್ಳುವ ಸಂದಿಗ್ಧದಲ್ಲಿದ್ದಾರೆ. ಕುಮಾರಸ್ವಾಮಿ ಅವರ ನಿರ್ಧಾರಕ್ಕಾಗಿ ದಂಪತಿ ಕಾಯಲಿದ್ದಾರೆ ಎಂದು ರೇವಣ್ಣ ಅವರ ಆಪ್ತ ಮೂಲಗಳು ತಿಳಿಸಿವೆ. ಕುಮಾರಸ್ವಾಮಿ ಅವರ ಹೇಳಿಕೆಯಿಂದ ರೇವಣ್ಣ ಅವರ ಕುಟುಂಬ ಅಸಮಾಧಾನಗೊಂಡಿದೆ ಎಂದು ವರದಿಯಾಗಿದೆ, ರೇವಣ್ಣ ಅವರನ್ನು ಹೊರತುಪಡಿಸಿ ಬೇರೆ ಯಾವುದೇ ಕುಟುಂಬದ ಸದಸ್ಯರು ಈ ಬಾರಿ ಹಾಸನದಿಂದ ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಿಲ್ಲ.

ಈ ಮಧ್ಯೆ, ಕುಮಾರಸ್ವಾಮಿಯವರ ಪುನರಾವರ್ತಿತ ಹೇಳಿಕೆಗಳು ದಂಪತಿಗಳನ್ನು ಹತಾಶೆಗೊಳಿಸಿದೆ ಎಂದು ಹೇಳಲಾಗುತ್ತದೆ, ಯಾವುದೇ ಸಂದರ್ಭದಲ್ಲೂ ಚುನಾವಣೆಗೆ ಸ್ಪರ್ಧಿಸುವ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ. ಪಕ್ಷ ಟಿಕೆಟ್ ನಿರಾಕರಿಸಿದರೆ ಸ್ವತಂತ್ರವಾಗಿ ಚುನಾವಣೆ ಎದುರಿಸುತ್ತೇನೆ ಎಂದು ಭವಾನಿ ಕುಟುಂಬ ಸದಸ್ಯರಿಗೆ ಸವಾಲು ಹಾಕಿದ್ದಾರೆ ಎಂದು ಭವಾನಿ ಅವರ ನಿಕಟವರ್ತಿಯೊಬ್ಬರು ಮಾಹಿತಿ ನೀಡಿದ್ದಾರೆ.

ಸ್ವತಂತ್ರ ಅಭ್ಯರ್ಥಿಗಳಾಗಿ ನಿಲ್ಲುವ ವರದಿಗಳನ್ನು ತಳ್ಳಿಹಾಕಿದ ಹಿರಿಯ ನಾಯಕರೊಬ್ಬರು, ಪಕ್ಷವು ಹೆಚ್ಚು ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯೊಂದಿಗೆ ರೇವಣ್ಣ ಅಥವಾ ಭವಾನಿ ಎಂದಿಗೂ ಯಾವುದೇ ಕಠಿಣ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎಂದು ಹೇಳಿದರು. ಈ ಬಗ್ಗೆ ಪ್ರತಿಕ್ರಿಯೆ ಕೇಳೋಣವೆಂದು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪ್ರತಿನಿಧಿಗಳು ಸಂಪರ್ಕಿಸಿದರೆ ರೇವಣ್ಣ ಪ್ರತಿಕ್ರಿಯಿಸಲು ನಿರಾಕರಿಸಿದರೆ, ಭವಾನಿ ಪ್ರತಿಕ್ರಿಯೆಗೆ ಲಭ್ಯವಾಗಲಿಲ್ಲ.

SCROLL FOR NEXT