ಬಳ್ಳಾರಿ: ಹಾಸನ ಕ್ಷೇತ್ರದ ಅಭ್ಯರ್ಥಿ ಬಗ್ಗೆ ಪಕ್ಷದ ವರಿಷ್ಠ ಎಚ್‌ಡಿ ದೇವೇಗೌಡರ ಬಳಿ ಮಾತನಾಡಲು ಸಹೋದರ ಎಚ್‌ಡಿ ರೇವಣ್ಣ ಹೆದರುತ್ತಿದ್ದಾರೆ ಎಂದು ಜೆಡಿಎಸ್ ಮುಖಂಡ, ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅವರು ಸೋಮವಾರ ಹೇಳಿದ್ದಾರೆ.
ಬಳ್ಳಾರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಕುಮಾರಸ್ವಾಮಿ, ''ಕೆಲವರ ಪ್ರಭಾವಕ್ಕೆ ಒಳಗಾಗಿ ರೇವಣ್ಣ ಅವರು ಹಾಸನ ಕ್ಷೇತ್ರದ ಟಿಕೆಟ್ ಗಾಗಿ ಒತ್ತಾಯಿಸುತ್ತಿದ್ದಾರೆ. ರೇವಣ್ಣ ಅವರ ವಾದ ನನಗೆ ಮತ್ತು ದೇವೇಗೌಡರಿಗೆ ತೃಪ್ತಿ ತಂದಿಲ್ಲ. ಇದಲ್ಲದೆ, ಪಕ್ಷ ಒಂದೂವರೆ ವರ್ಷಗಳ ಹಿಂದೆಯೇ ಸಾಮಾನ್ಯ ಕಾರ್ಯಕರ್ತನಿಗೆ ಅಲ್ಲಿಂದ ಕಣಕ್ಕೆ ಇಳಿಸಬೇಕು ಎಂಬ ನಿರ್ಧಾರ ತೆಗೆದುಕೊಂಡಿದೆಮತ್ತು ನಾವು ಅದರ ಪರವಾಗಿ ನಿಲ್ಲುತ್ತೇವೆ ಎಂದರು.
ಕೆಲವು ಶಕುನಿಗಳು ಬೆಳಗಿನಿಂದ ಸಂಜೆಯವರೆಗೆ ರೇವಣ್ಣ ಮೈಂಡ್ ವಾಶ್ ಮಾಡುತ್ತಿದ್ದಾರೆ. ಬೇರೆ ಪಕ್ಷದವರು, ಬುದ್ಧಿ ಜೀವಿಗಳು ಮತ್ತು ಹಿತಶತ್ರುಗಳು ಅವರ ತಲೆ ಕೆಡೆಸಿದ್ದಾರೆ. ಹಾಸನದಲ್ಲಿ ಕಾರ್ಯಕರ್ತರಿಗೆ ಟಿಕೆಟ್ ಕೊಡಬೇಕೆಂದು ಹೇಳಿದ್ದೇನೆ, ಇದರಲ್ಲಿ ರಾಜಿ ಪ್ರಶ್ನೆಯೇ ಇಲ್ಲ ಎಂದರು.
ದೇವೇಗೌಡರಿಗೂ ಸಹ ರೇವಣ್ಣ ಅವರನ್ನು ಮನವೊಲಿಸುವ ಶಕ್ತಿ ಇಲ್ಲ. ಕಳೆದ 15 ವರ್ಷದಿಂದ ಹಲವು ವಿಷಯ ನುಂಗಿಕೊಂಡಿದ್ದೇನೆ, ಕೆಲವು ವಿಷಯಗಳನ್ನು ಹೇಳಿ ಕೊಳ್ಳಲು ಆಗೋದಿಲ್ಲ. ನನಗೆ ಆಗುತ್ತಿರುವ ಅನಾಹುತ ಗೊತ್ತಿದ್ದರೂ ಸಹ, ತಪ್ಪುಗಳು ಮಾಡದಿದ್ದರೂ ತಲೆ ಮೇಲೆ ಹೊತ್ತು ಕೊಳ್ಳಬೇಕಾಯಿತು. ಈಗಲೂ ಅದೇ ರೀತಿ ವಾತಾವರಣ ಸೃಷ್ಟಯಾಗಿದೆ ಎಂದರು.
ಇದನ್ನು ಓದಿ: ಹಳೇ ಮೈಸೂರು ಭಾಗದಲ್ಲಿ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಪ್ರಚಾರ: ಶೀಘ್ರದಲ್ಲೇ ಜೆಡಿಎಸ್ ಪ್ರಣಾಳಿಕೆ ಬಿಡುಗಡೆ
ಇದೇ ವೇಳೆ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ, ಕಲ್ಯಾಣ-ಕರ್ನಾಟಕದ ಜನರು ಇಂದಿಗೂ ಅನ್ನ, ವಸತಿ ಸಮಸ್ಯೆ ಎದುರಿಸುತ್ತಿದ್ದಾರೆ. ಇತ್ತೀಚೆಗೆ, ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ, ರಾಜ್ಯದ 10 ಜಿಲ್ಲೆಗಳು ಇನ್ನೂ ಬಡತನ ಮತ್ತು ಅಪೌಷ್ಟಿಕತೆಯ ಸಮಸ್ಯೆಗಳನ್ನು ಎದುರಿಸುತ್ತಿವೆ ಎಂದರು.
ನಾವು ಇಲ್ಲಿ ಕನಿಷ್ಠ 16 ಸ್ಥಾನಗಳನ್ನು ಗೆಲ್ಲುತ್ತೇವೆ ಮತ್ತು ನಾವು ಖಂಡಿತವಾಗಿಯೂ ಈ ಪ್ರದೇಶವನ್ನು ಅಭಿವೃದ್ಧಿಪಡಿಸುತ್ತೇವೆ ಎಂದು ಮಾಜಿ ಸಿಎಂ ಭರವಸೆ ನೀಡಿದರು.