ರಾಜಕೀಯ

ವಿಧಾನಸಭಾ ಚುನಾವಣೆ: ರೈತರಿಗೆ ಉಚಿತ ಆರೋಗ್ಯ, ರಸಗೊಬ್ಬರದ ಭರವಸೆ ನೀಡಿದ ಹೆಚ್‌ಡಿಕೆ

Manjula VN

ಜೋಯಿಡಾ (ಉತ್ತರ ಕನ್ನಡ): ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಪಕ್ಷ ಸ್ವಂತ ಬಲದಿಂದ ಸರ್ಕಾರ ರಚಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿರುವ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ನಾಯಕ ಎಚ್‌ಡಿ ಕುಮಾರಸ್ವಾಮಿ ಅವರು, ಜೋಯಿಡಾ ಮತ್ತು ರಾಮನಗರಕ್ಕೆ ಕುಡಿಯುವ ನೀರು, ರಸ್ತೆ ಮತ್ತು ಇತರ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಭರವಸೆ ನೀಡಿದ್ದಾರೆ.

ಜೋಯಿಡಾದಲ್ಲಿ ಆಯೋಜಿಸಿದ್ದ ಪಕ್ಷದ ಸಮಾವೇಶದಲ್ಲಿ ಮಾತನಾಡಿದ ಅವರು, ರೈತರಿಗಾಗಿ ಉಚಿತ ಆರೋಗ್ಯ ಸೇವೆ, ಬೀಜಗಳು, ರಸಗೊಬ್ಬರ ನೀಡುವುದು ಸೇರಿದಂತೆ ಹಲವು ಯೋಜನೆಗಳ ಕುರಿತು ಚಿಂತನೆ ನಡೆಸಲಾಗಿದೆ. ಕೃಷಿ ಮಾಡಲು ಹಣಕ್ಕಾಗಿ ಹೆಣಗಾಡುವ ರೈತರು, ಕುಟುಂಬದ ವ್ಯಕ್ತಿ ಅನಾರೋಗ್ಯಕ್ಕೀಡಾದರೆ ಲಕ್ಷಾಂತರ ಹಣ ಖರ್ಚು ಮಾಡುವುದು ನಮಗಿಷ್ಟವಿಲ್ಲ. ಹೀಗಾಗಿ ಪ್ರತೀ ರೈತನಿಗೆ ಕೃಷಿಗೆ ಎಕರೆಗೆ 10,000 ರೂ. ಮತ್ತು ಕೃಷಿ ಭೂಮಿಯಲ್ಲಿ ಕೆಲಸ ಮಾಡುವ ರೈತರಿಗೆ ತಿಂಗಳಿಗೆ 2,000 ರೂ. ನೀಡಲು ಚಿಂತನೆ ನಡೆಸಿದ್ದೇವೆ. ಈಗಾಗಲೇ ನಾನು 25 ಜಿಲ್ಲೆಗಳಿಗೆ ಭೇಟಿ ನೀಡಿದ್ದೇನೆ. ಜನರು ಜೆಡಿಎಸ್ ಮೇಲೆ ನಂಬಿಕೆ ಇಟ್ಟಿದ್ದಾರೆ, ಉತ್ತರ ಕನ್ನಡ ಜಿಲ್ಲೆಯಲ್ಲಿ ಗೆಲುವು ಸಾಧಿಸುವುದಿಲ್ಲ ಎಂಬು ಭಾವಿಸಿದ್ದೆವು. ಇದೀಗ ಪಕ್ಷವು ಕುಮಟಾದ ಮೂಲಕ ಗೆಲುವು ಸಾಧಿಸುವ ವಿಶ್ವಾಸವಿದೆ. 6 ಕ್ಷೇತ್ರಗಳ ಪೈಕಿ ಕನಿಷ್ಟ ಮೂರು ಕ್ಷೇತ್ರಗಳಲ್ಲಿ ಆದರೂ ನಾವು ಗೆಲುವು ಸಾಧಿಸುತ್ತೇವೆಂದು ವಿಶ್ವಾಸವ್ಯಕ್ತಪಡಿಸಿದರು.

ಜೆಡಿಎಸ್ ಟಿಕೆಟ್‌ನಲ್ಲಿ ಗೆದ್ದಿದ್ದ ಹಳಿಯಾಳ ಮಾಜಿ ಶಾಸಕ ಸುನೀಲ್ ಹೆಗಡೆ ನನ್ನ ಬೆಂಬಲದಿಂದ ಗೆದ್ದಿದ್ದಾರೆ, ಅದರ ಬಗ್ಗೆ ಈಗ ಅವರು ಮಾತನಾಡಲು ಬಯಸುವುದಿಲ್ಲ ಎಂದು ಇದೇ ವೇಳೆ ಹೆಚ್‌ಡಿಕೆ ವಾಗ್ದಾಳಿ ನಡೆಸಿದರು.

ಬಳಿಕ ಹಳಿಯಾಳ ಜೆಡಿಎಸ್ ಅಭ್ಯರ್ಥಿ ಶ್ರೀಕಾಂತ ಎಲ್.ಘೋಟ್ನೇಕರ ಅವರು, ಹಾಲಿ ಶಾಸಕ ಆರ್.ವಿ.ದೇಶಪಾಂಡೆ ವಿರುದ್ಧ ವಾಗ್ದಾಳಿ ನಡೆಸಿದರು.

ದೇಶಪಾಂಡೆ ಇಲ್ಲಿಂದ ಹಲವು ಬಾರಿ ಆಯ್ಕೆಯಾದರೂ ಕ್ಷೇತ್ರಕ್ಕಾಗಿ ಏನನ್ನೂ ಮಾಡಿಲ್ಲ. ಸಿಂಗಾಪುರ ಮಾದರಿಯಲ್ಲಿ ಹಳಿಯಾಳವನ್ನು ಅಭಿವೃದ್ಧಿ ಪಡಿಸುವುದಾಗಿ ಹೇಳಿದ್ದರು. ಆದರೆ, ಕೈಗಾರಿಕಾ ಸಚಿವರಾಗಿ ಸೇವೆ ಸಲ್ಲಿಸಿದ್ದರೂ ಸಿಂಗಾಪುರ ಮಾಡಲಿಲ್ಲ. ಇದೀಗ ಹಳಿಯಾಳ ಸಿಂಗಾಪುರ ಅಲ್ಲ ಮಂಗಪುರ (ಮಂಗಗಳ ಊರು) ಆಗಿ ಮಾರ್ಪಟ್ಟಿದೆ ಎಂದು ಕಿಡಿಕಾರಿದರು.

ಅಲ್ಲದೆ, ಕುಮಾರಸ್ವಾಮಿಯವರಿಗೆ ಮನವಿ ಮಾಡಿಕೊಂಡ ಅವರು, ಈ ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿದ್ದೇ ಆದರೆ, ನೀರು, ಉತ್ತಮ ರಸ್ತೆ ಕಲ್ಪಿಸಿಕೊಡಿ ಎಂದು ಕೇಳಿದರು.

SCROLL FOR NEXT