ರಾಜಕೀಯ

I.N.D.I.A ಮೈತ್ರಿಕೂಟದಲ್ಲಿ ಸಿಡಬ್ಲ್ಯೂಸಿ ದೊಡ್ಡ ಪಾತ್ರವನ್ನು ನಿರ್ವಹಿಸಿದೆ: ವೀರಪ್ಪ ಮೊಯ್ಲಿ

Manjula VN

ಬೆಂಗಳೂರು: I.N.D.I.A ಮೈತ್ರಿಕೂಟದಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು ದೊಡ್ಡ ಪಾತ್ರವನ್ನು ನಿರ್ವಹಿಸಲಿದೆ ಎಂದು ಮಾಜಿ ಮುಖ್ಯಮಂತ್ರಿ, ಕೇಂದ್ರದ ಮಾಜಿ ಸಚಿವ ವೀರಪ್ಪ ಮೊಯ್ಲಿ ಅವರು ಭಾನುವಾರ ಹೇಳಿದರು.
 
ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೆಸ್‌ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ 10 ತಿಂಗಳ ಬಳಿಕ ಅಳೆದೂ ತೂಗಿ ’ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ’ಯನ್ನು (ಸಿಡಬ್ಲ್ಯುಸಿ) ಭಾನುವಾರ ರಚನೆ ಮಾಡಿದ್ದಾರೆ.

ಸಮಿತಿಯಲ್ಲಿ ಪಕ್ಷ ನಿಷ್ಠರು ಹಾಗೂ ಭಿನ್ನರಿಗೆ ಸ್ಥಾನ ನೀಡುವ ಮೂಲಕ ಸಮತೋಲನ ಕಾಯ್ದುಕೊಳ್ಳುವ ಪ್ರಯತ್ನ ಮಾಡಿದ್ದಾರೆ.

ಲೋಕಸಭಾ ಚುನಾವಣೆಗೆ ಎಂಟು ತಿಂಗಳು ಬಾಕಿ ಇರುವ ಹೊತ್ತಿನಲ್ಲಿ ಖರ್ಗೆ ಅವರು ವಿವೇಚನಾಧಿಕಾರ ಬಳಸಿ ತಮ್ಮ ತಂಡವನ್ನು ರಚಿಸಿದ್ದಾರೆ. ಸಮಿತಿಯಲ್ಲಿ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಹಾಗೂ ಎಂಎಲ್​​ಸಿ ಬಿ.ಕೆ.ಹರಿಪ್ರಸಾದ್ ಅವರಿಗೆ ಸ್ಥಾನ ನೀಡಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ವೀರಪ್ಪ ಮೊಯ್ಲಿ ಅವರು, ಜವಾಬ್ದಾರಿ ಹೆಚ್ಚಾಗಿದೆ. ಸಿಡಬ್ಲ್ಯೂಸಿಯಲ್ಲಿ ಸ್ಥಾನ ಸಿಕ್ಕಿರುವುದು ಬಹುದೊಡ್ಡ ಜವಾಬ್ದಾರಿಯನ್ನು ನಿಭಾಯಿಸಬೇಕಾಗಿದೆ. ಈ ನಿಟ್ಟಿನಲ್ಲಿ ನಮ್ಮ ಸಂಪೂರ್ಣ ಸಾಮರ್ಥ್ಯದೊಂದಿಗೆ ಕೆಲಸ ಮಾಡುತ್ತೇವೆಂದು ಹೇಳಿದ್ದಾರೆ.

ಈ ಮಹತ್ವದ ಸ್ಥಾನಕ್ಕೆ ಆಯ್ಕೆ ಮಾಡಿದ್ದಕ್ಕೆ ಪಕ್ಷದ ನಾಯಕರಿಗೆ ಧನ್ಯವಾದಗಳು ಎಂದು ಎಐಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಬಿ ಕೆ ಹರಿಪ್ರಸಾದ್ ಅವರು ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷದ ಅತ್ಯುನ್ನತ "ಕೇಂದ್ರ ಕಾರ್ಯಕಾರಿಣಿ ಸಮಿತಿಗೆ ಖಾಯಂ ಆಹ್ವಾನಿತ ಸದಸ್ಯರನ್ನಾಗಿ" ನೇಮಕ ಮಾಡಿದ ಎಐಸಿಸಿ ಅಧ್ಯಕ್ಷರಾದ ಖರ್ಗೆ ಹಾಗೂ ಪಕ್ಷದ ಹೈಕಮಾಂಡ್ ಗೆ ಧನ್ಯವಾದಗಳು. ವಿಶೇಷವಾಗಿ ನನ್ನ ನೆಚ್ಚಿನ ನಾಯಕಿ ಸೋನಿಯಾಗಾಂಧಿ ಹಾಗೂ ರಾಹುಲ್ ಗಾಂಧಿಯವರಿಗೆ ನನ್ನ ಕೃತಜ್ಞತೆಗಳು ಎಂದು ಟ್ವೀಟ್ ಮಾಡಿದ್ದಾರೆ.

ಇದಕ್ಕೂ ಮುನ್ನ ಕೆಪಿಸಿಸಿ ಕಚೇರಿಯಲ್ಲಿ ಭಾನುವಾರ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡಿದ್ದ ಹರಿಪ್ರಸಾದ್ ಅವರು, ನಿಜವಾದ ಕಾಂಗ್ರೆಸ್ ಕಾರ್ಯಕರ್ತರಿಗೆ ಮಾತ್ರ ಮಂಡಳಿ ಮತ್ತು ನಿಗಮಗಳಲ್ಲಿ ಸ್ಥಾನ ನೀಡಬೇಕು. ಕಾಂಗ್ರೆಸ್‌ಗಾಗಿ ವರ್ಷಗಟ್ಟಲೆ ದುಡಿದವರನ್ನು ಕಡೆಗಣಿಸಿದರೆ ಪಕ್ಷಕ್ಕೆ ಸರ್ವನಾಶವಾಗಲಿದೆ ಎಂದು ಹೇಳಿದ್ದರು.

SCROLL FOR NEXT