ರಾಜಕೀಯ

ಕೋವಿಡ್ ಹೆಸರಲ್ಲಿ ಬಿಜೆಪಿ ಅಕ್ರಮ: ತನಿಖಾ ಆಯೋಗಕ್ಕೆ ಯತ್ನಾಳ್ ದಾಖಲೆ ನೀಡಲಿ ಎಂದ ಸಿಎಂ ಸಿದ್ದರಾಮಯ್ಯ

Manjula VN

ಕೊಪ್ಪಳ: ಕೋವಿಡ್ ಹೆಸರಿನಲ್ಲಿ ಹಿಂದಿನ ಬಿಜೆಪಿ ಸರ್ಕಾರ ರೂ.40 ಸಾವಿರ ಕೋಟಿ ಅಕ್ರಮ ನಡೆಸಿದೆ ಎಂದು ಆರೋಪ ಮಾಡಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರು ತನಿಖಾ ಆಯೋಗಕ್ಕೆ ಈ ಕುರಿತು ದಾಖಲೆ ನೀಡಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ಹೇಳಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕೋವಿಡ್ ಸಮಯದಲ್ಲಿ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಸಾಕಷ್ಟು ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಯತ್ನಾಳ್ ನೇರ ಆರೋಪ ಮಾಡಿದ್ದಾರೆ. ಬಿಜೆಪಿ ಸರ್ಕಾರದ‌ ಅವಧಿಯಲ್ಲಿ ನಡೆದ ಭ್ರಷ್ಟಾಚಾರ ಹಗರಣ ಕುರಿತು ತನಿಖೆಗಾಗಿ ಆಯೋಗ ರಚಿಸಿದ್ದೇವೆ. ಆರೋಪ ಮಾಡಿದವರು ಆಯೋಗಕ್ಕೆ ದಾಖಲೆಗಳನ್ನು ಒದಗಿಸಬೇಕು ಎಂದು ಹೇಳಿದರು.

ಯಲಬುರ್ಗಾ ಶಾಸಕ ಬಸವರಾಜ ರಾಯರಡ್ಡಿ ಅವರನ್ನು ಸಿಎಂ ಆರ್ಥಿಕ ಸಲಹೆಗಾರರಾಗಿ ನೇಮಕ ಮಾಡಿದ್ದಕ್ಕೆ ಎಚ್.ಡಿ.ಕುಮಾರಸ್ವಾಮಿ 'ರಾಯರಡ್ಡಿ ಆರ್ಥಿಕ ತಜ್ಞರೇ' ಎಂದು ಪ್ರಶ್ನಿಸಿದ್ದರ ಕುರಿತು ಪ್ರತಿಕ್ರಿಯೆ ನೀಡಿದ ಅವರು, 'ರಾಯರಡ್ಡಿ ಆರ್ಥಿಕವಾಗಿ ಸಾಕಷ್ಟು ವಿಷಯ ತಿಳಿದುಕೊಂಡಿದ್ದಾರೆ. ಹಾಗಾಗಿ ಆರ್ಥಿಕ ಸಲಹೆಗಾರರನ್ನಾಗಿ ನೇಮಿಸಲಾಗಿದೆ. ಯಡಿಯೂರಪ್ಪ ಸಿಎಂ ಇದ್ದಾಗಲೂ ಆರ್ಥಿಕ ಸಲಹೆಗಾರರನ್ನು ನೇಮಿಸಿಕೊಂಡಿದ್ದರು. ಆವಾಗ ಯಾರೂ ಕೇಳಲಿಲ್ಲ' ಎಂದು ಪ್ರಶ್ನಿಸಿದರು. ಬಳಿಕ ಕುಮಾರಸ್ವಾಮಿ ಆರೋಪಗಳ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ ಎಂದರು.

SCROLL FOR NEXT