ರಾಜಕೀಯ

'ಸಿದ್ಧರಾಮಯ್ಯ ಕೋಲಾರಕ್ಕೆ ಬರುತ್ತಿದ್ದಾರೆ, ಅವರಿಗೆ ಬೆಂಬಲ ನೀಡಿ': ಕೃಷ್ಣ ಬೈರೇಗೌಡ

Srinivasamurthy VN

ಕೋಲಾರ: ಕಾಂಗ್ರೆಸ್ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕೋಲಾರಕ್ಕೆ ಆಗಮಿಸುತ್ತಿದ್ದು, ಅವರಿಗೆ ಬೆಂಬಲ ನೀಡಿ ಎಂದು ಹೇಳುವ ಮೂಲಕ ಸಿದ್ದರಾಮಯ್ಯ ಅವರ ಕೋಲಾರ ಸ್ಪರ್ಧೆ ಕುರಿತು ಕಾಂಗ್ರೆಸ್ ನಾಯಕ ಕೃಷ್ಣ ಬೈರೇಗೌಡ ಸುಳಿವು ನೀಡಿದ್ದಾರೆ.

ಕೋಲಾರಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಜ.9ರಂದು ಭೇಟಿ ಹಿನ್ನೆಲೆ ತಾಲ್ಲೂಕಿನ ನರಸಾಪುರ ಹಾಗೂ ವೇಮಗಲ್ ಹೋಬಳಿಯ ಗ್ರಾಮಗಳಲ್ಲಿ ಪೂರ್ವಭಾವಿ ಸಭೆಗಳನ್ನು ನಡೆಸಿದ ಕಾಂಗ್ರೆಸ್ ನಾಯಕ ಕೃಷ್ಣ ಬೈರೇಗೌಡ ಅವರು, 'ಸಿದ್ಧರಾಮಯ್ಯ ಕೋಲಾರಕ್ಕೆ ಆಗಮಿಸುತ್ತಿದ್ದು ಅವರಿಗೆ ಬೆಂಬಲ ನೀಡಿ' ಎಂದು ಕರೆ ನೀಡಿದರು.

ತಾಲ್ಲೂಕಿನ ಮದ್ದೇರಿ ಗ್ರಾಮದಲ್ಲಿ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ರಾಜ್ಯದಲ್ಲಿ 5 ವರ್ಷ ಉತ್ತಮ ಆಡಳಿತ ನಡೆಸಿ ಹಲವಾರು ಅಭಿವೃದ್ಧಿ ಪರ ಯೋಜನೆಗಳನ್ನು ನೀಡುವ ಮೂಲಕ ಸಿದ್ದರಾಮಯ್ಯ ಅಭಿವೃದ್ಧಿಗೆ ಒತ್ತು ನೀಡಿದ್ದಾರೆ. ರಾಜ್ಯ ಮುಖ್ಯಮಂತ್ರಿಯಾಗಿದ್ದಾಗ ಕೋಲಾರದ ಸಮಸ್ಯೆಗಳು ಅಂತ ಬಂದ ಕೂಡಲೇ ಸ್ಪಂದಿಸುವ ಮೂಲಕ ಕ್ಷೇತ್ರದ ಬಗ್ಗೆ ಹೆಚ್ಚಿನ ಒಲವು ನೀಡಿದ್ದರು. ಕೆ.ಸಿ ವ್ಯಾಲಿ ಯೋಜನೆಗೆ 1400 ಕೋಟಿ ರೂಗಳನ್ನು ಮಂಜೂರು ಮಾಡಿ ಎರಡೇ ವರ್ಷದಲ್ಲಿ ಯೋಜನೆಯ ಕಾಮಗಾರಿ ಪೂರ್ಣಗೊಳಿಸಿ ಇಂದು ಜಿಲ್ಲೆಯ ಬಹುತೇಕ ಕೆರೆಗಳು ತುಂಬಿದ್ದು, ಪಾತಾಳಕ್ಕೆ ಕುಸಿದಿದ್ದ ಅಂತರ್ಜಲ ಮಟ್ಟ ಇದೀಗ 500 ಅಡಿಗಳಿಗೆ ಏರಿಕೆ ಆಗಿದೆ. ಕೋಲಾರ ಕ್ಷೇತ್ರದಿಂದ ಸ್ಪರ್ಧಿಸಿ ಶಾಸಕರಾದ್ರೆ ರಾಜ್ಯಕ್ಕೆ ಮುಖ್ಯಮಂತ್ರಿಯಾಗುವ ಮೂಲಕ ಕೋಲಾರ ಜಿಲ್ಲೆಯನ್ನು ಅಭಿವೃದ್ಧಿ ಪಡಿಸುತ್ತಾರೆ. ಅನ್ನೋ ಕಾರಣಕ್ಕೆ ಜಿಲ್ಲೆಯ ಮುಖಂಡರೆಲ್ಲಾ ಸೇರಿ ಸಿದ್ಧರಾಮಯ್ಯರನ್ನ ಕೋಲಾರ ಕ್ಷೇತ್ರದಿಂದ ಸ್ಪರ್ಧಿಸಲು ಒತ್ತಾಯಿಸಿದ್ದೇವೆ ಎಂದು ಕೃಷ್ಣ ಬೈರೇಗೌಡ ಹೇಳಿದರು.

ಅದರಂತೆ ಅ.13ರಂದು ಕೋಲಾರಕ್ಕೆ ಆಗಮಿಸಿ ಜನರ ನಾಡಿಮಿಡಿತ ಅರ್ಥ ಮಾಡಿಕೊಂಡಿದ್ದು, ಕೋಲಾರದಿಂದ ಸ್ಪರ್ಧಿಸುವ ಇಚ್ಛಾಶಕ್ತಿ ತೋರಿದ್ದಾರೆ. ವರುಣಾ ಕ್ಷೇತ್ರದಿಂದ ಗೆದ್ದು ಮುಖ್ಯಮಂತ್ರಿಯಾಗಿದ್ದಂತಹ ಸಿದ್ಧರಾಮಯ್ಯ ಸ್ವಕ್ಷೇತ್ರಕ್ಕೆ 3 ಸಾವಿರ ಕೋಟಿ ಅನುದಾನ ನೀಡುವ ಮೂಲಕ ಅಭಿವೃದ್ಧಿಪಡಿಸಿದ್ದಾರೆ, ಹಾಗಾಗಿ ಇದೇ 9 ರಂದು ಸಿದ್ಧರಾಮಯ್ಯ ಕೋಲಾರಕ್ಕೆ ಆಗಮಿಸಿ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಅಂದಿನ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವುದರ ಜೊತೆಗೆ ಅವರನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಶಾಸಕರಾದ ಕೆ.ಶ್ರೀನಿವಾಸಗೌಡ, ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್.ಸುದರ್ಶನ್, ವಿಧಾನ ಪರಿಷತ್ ಶಾಸಕರುಗಳಾದ ನಸೀರ್ ಅಹ್ಮದ್, ಎಂ.ಎಲ್.ಅನಿಲ್ ಕುಮಾರ್ ಸೇರಿದಂತೆ ಹಿರಿಯ ಮುಖಂಡರುಗಳಾದ ಸಿ.ಎಂ.ಮುನಿಯಪ್ಪ, ಶ್ರೀಕೃಷ್ಣ, ಟಿಎಪಿಸಿಎಂಎಸ್ ಅಧ್ಯಕ್ಷ ನಾಗನಾಳ ಸೋಮಣ್ಣ, ಕೂಡ ಮಾಜಿ ಅಧ್ಯಕ್ಷ ಅಬ್ದುಲ್ ಖಯುಮ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷರಾದ ಚಂಜಿಮಲೆ ಬಿ.ರಮೇಶ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಗೋಪಾಲಗೌಡ, ವಕ್ಕಲೇರಿ ರಾಜಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.

SCROLL FOR NEXT