ರಾಜಕೀಯ

ತಾಲೂಕು-ಜಿಲ್ಲಾ ಪಂಚಾಯತ್ ಚುನಾವಣೆ: ಕಾಂಗ್ರೆಸ್ ನಿಂದ ಸಮಿತಿ ರಚನೆ

Manjula VN

ಬೆಂಗಳೂರು: ರಾಜ್ಯದಲ್ಲಿ ಮುಂಬರುವ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳನ್ನು ಎದುರಿಸಲು ರಾಜ್ಯ ಕಾಂಗ್ರೆಸ್, ಸಚಿವ ಪ್ರಿಯಾಂಕ ಖರ್ಗೆ ಅಧ್ಯಕ್ಷತೆಯಲ್ಲಿ ಚುನಾವಣಾ ಪೂರ್ವತಯಾರಿ ಸಮಿತಿಯನ್ನು ರಚಿಸಿದೆ ಎಂದು ತಿಳಿದುಬಂದಿದೆ.

ಸಮಿತಿಯ ಸದಸ್ಯರಾಗಿ ಸಚಿವ ಸತೀಶ್ ಜಾರಕಿಹೊಳಿ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್, ಸಚಿವರಾದ ಈಶ್ವರ್ ಖಂಡ್ರೆ, ಎಚ್.ಕೆ.ಪಾಟೀಲ್, ಎಚ್.ಸಿ.ಮಹದೇವಪ್ಪ, ಡಾ.ಶರಣಪ್ರಕಾಶ್ ಪಾಟೀಲ್, ಆರ್.ಬಿ. ತಿಮ್ಮಾಪುರ್, ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಅವರನ್ನು ನೇಮಿಸಲಾಗಿದೆ.

ಶಾಸಕರಾದ ರೂಪಾ ಶಶಿಧರ್, ಎ.ಎಸ್.ಪೊನ್ನಣ್ಣ, ಕೆ.ಎಂ.ಶಿವಲಿಂಗೇಗೌಡ, ಎಸ್.ಆರ್.ಶ್ರೀನಿವಾಸ್, ವಿಧಾನಪರಿಷತ್‍ನ ಸದಸ್ಯ ಎಸ್.ರವಿ, ಮಾಜಿ ಸಂಸದ ನಾರಾಯಣಸ್ವಾಮಿ, ಮಾಜಿ ಶಾಸಕ ವಿಜಯ್ ಸಿಂಗ್ ಮತ್ತು ಶಿವಮೊಗ್ಗ ಡಿಸಿಸಿ ಬ್ಯಾಂಕ್‍ನ ಅಧ್ಯಕ್ಷ ಮಂಜುನಾಥ ಗೌಡ ಸಮಿತಿಯ ಸದಸ್ಯರಾಗಿದ್ದು, ಕೆಪಿಸಿಸಿ ಉಪಾಧ್ಯಕ್ಷ ಮಂಜುನಾಥ್ ಭಂಡಾರಿ ಸಮಿತಿಯ ಸಂಚಾಲಕರಾಗಿ ಕಾರ್ಯನಿರ್ವಹಿಸಲಿದ್ದಾರೆ.

ಸಮಿತಿಯಲ್ಲಿರುವವರು ತಮಗೆ ನೀಡಿರುವ ಜವಾಬ್ದಾರಿಗಳನ್ನು ತಕ್ಷಣವೇ ವಹಿಸಿಕೊಂಡು ಚುನಾವಣೆಯು ಯಶಸ್ವಿಯಾಗಿ ನಡೆಯುವಂತಾಗಲು ಕಾನೂನಾತ್ಮಕ ಸಾಧಕ-ಬಾಧಕಗಳನ್ನು ಪರಾಮರ್ಶಿಸಿ ಎಲ್ಲಾ ಜಿಲ್ಲೆಗಳಲ್ಲಿ ಚುನಾವಣೆಯನ್ನು ನಡೆಸಲು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಕೂಲಂಕುಶವಾಗಿ ವರದಿಯನ್ನು 15 ದಿನಗಳ ಒಳಗಾಗಿ ಕೆಪಿಸಿಸಿಗೆ ಸಲ್ಲಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಸೂಚಿಸಿದ್ದಾರೆಂದು ತಿಳಿದುಬಂದಿದೆ.

SCROLL FOR NEXT