ಮನ್ಸೂರ್ ಅಲಿ ಖಾನ್ - ಪಿಸಿ ಮೋಹನ್
ಮನ್ಸೂರ್ ಅಲಿ ಖಾನ್ - ಪಿಸಿ ಮೋಹನ್ 
ರಾಜಕೀಯ

ಲೋಕಸಭೆ ಚುನಾವಣೆ 2024: ಪಿಸಿ ಮೋಹನ್ ಗೆಲುವಿನ ಓಟಕ್ಕೆ ಬ್ರೇಕ್ ಹಾಕ್ತಾರಾ ಮನ್ಸೂರ್ ಅಲಿ ಖಾನ್?

Ramyashree GN

ಬೆಂಗಳೂರು: ಲೋಕಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ದಿನದಿಂದ ದಿನಕ್ಕೆ ರಂಗೇರುತ್ತಿದೆ. ಬಹುತೇಕ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ನಡೆಯಲಿದ್ದು, ಅಭ್ಯರ್ಥಿಗಳು ಇನ್ನಿಲ್ಲದ ಕಸರತ್ತಿನಲ್ಲಿ ತೊಡಗಿದ್ದಾರೆ.

ಪ್ರತಿಷ್ಠಿತ ಕ್ಷೇತ್ರವಾಗಿರುವ ಬೆಂಗಳೂರು ಸೆಂಟ್ರಲ್‌‌ನಲ್ಲಿ ಹಾಲಿ ಬಿಜೆಪಿ ಸಂಸದ ಪಿಸಿ ಮೋಹನ್ ಮತ್ತು ಕಾಂಗ್ರೆಸ್‌ನ ಮನ್ಸೂರ್ ಅಲಿ ಖಾನ್ ನಡುವೆ ಜಟಾಪಟಿಗೆ ಕಾರಣವಾಗಿದೆ. ಪಿಸಿ ಮೋಹನ್ ಸತತ ನಾಲ್ಕನೇ ಗೆಲುವಿನ ವಿಶ್ವಾಸದಲ್ಲಿದ್ದರೆ, ಮನ್ಸೂರ್ ಖಾನ್ ಬಿಜೆಪಿಯಿಂದ ಕ್ಷೇತ್ರವನ್ನು ಕಿತ್ತುಕೊಳ್ಳಲು ರಾಜ್ಯ ಸರ್ಕಾರದ ಖಾತರಿ ಯೋಜನೆಗಳ ಮೇಲೆ ಪ್ರಚಾರ ನಡೆಸುತ್ತಿದ್ದಾರೆ.

ಬೆಂಗಳೂರು ಸೆಂಟ್ರಲ್ ಕ್ಷೇತ್ರವು ಪೂರ್ವದ ಮಹದೇವಪುರದಿಂದ ಪಶ್ಚಿಮದ ರಾಜಾಜಿನಗರದವರೆಗೆ ವ್ಯಾಪಿಸಿದೆ.

2019ರ ಸಾರ್ವತ್ರಿಕ ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿತ್ತು. ಆಗ ಪಿಸಿ ಮೋಹನ್ ಅವರು 70,000 ಮತಗಳ ಮುನ್ನಡೆಯೊಂದಿಗೆ ಕಾಂಗ್ರೆಸ್‌ನ ರಿಜ್ವಾನ್ ಅರ್ಷದ್ ಮತ್ತು ಸ್ವತಂತ್ರವಾಗಿ ಸ್ಪರ್ಧಿಸಿದ್ದ ನಟ ಪ್ರಕಾಶ್ ರಾಜ್ ಅವರನ್ನು ಸೋಲಿಸಿದ್ದರು. ಬೆಂಗಳೂರು ಸೆಂಟ್ರಲ್‌ನ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಕಳೆದ ಮೇನಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಸಿವಿ ರಾಮನ್‌ನಗರ, ರಾಜಾಜಿನಗರ ಮತ್ತು ಮಹದೇವಪುರ ಹೊರತುಪಡಿಸಿ ಐದು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಜಯಭೇರಿ ಬಾರಿಸಿದ್ದು, ಅದು ಮನ್ಸೂರ್ ಖಾನ್‌ ಅವರ ಪರವಾಗಿ ಕೆಲಸ ಮಾಡಬೇಕಿದೆ.

ಆದರೆ, ಖಾನ್ ನಾಮಪತ್ರ ಸಲ್ಲಿಸುವಾಗ ಶಿವಾಜಿನಗರ ಶಾಸಕ ರಿಜ್ವಾನ್ ಅರ್ಷದ್ ಹೊರತುಪಡಿಸಿ, ಹಲವು ಪಕ್ಷದ ಮುಖಂಡರು ಗೈರಾಗುವ ಮೂಲಕ ಕಾಂಗ್ರೆಸ್ ನಾಯಕರ ನಡುವಿನ ಭಿನ್ನಾಭಿಪ್ರಾಯ ಎದ್ದುಕಾಣಿಸಿತ್ತು. ಹೊಸ ಮುಖವಾಗಿರುವ ಮನ್ಸೂರ್ ಅಲಿ ಖಾನ್ ಅವರನ್ನು ಕಣಕ್ಕಿಳಿಸಿರುವುದಕ್ಕೆ ಅಸಮಾಧಾನ ವ್ಯಕ್ತವಾಗಿದೆ. ಅಲ್ಲದೆ, ಶಾಂತಿನಗರ ಶಾಸಕ ಎನ್‌ಎ ಹ್ಯಾರಿಸ್ ತಮ್ಮ ಪುತ್ರ ಮೊಹಮ್ಮದ್ ಹ್ಯಾರಿಸ್ ನಲಪಾಡ್‌ಗೆ ಟಿಕೆಟ್ ಸಿಗುವ ನಿರೀಕ್ಷೆಯಲ್ಲಿದ್ದರು ಎಂದು ಮೂಲಗಳು ತಿಳಿಸಿವೆ.

ಮೋಹನ್ ಮತ್ತು ಖಾನ್ ಇಬ್ಬರೂ ಇದೀಗ ಭರ್ಜರಿ ಪ್ರಚಾರದಲ್ಲಿ ತೊಡಗಿದ್ದು, ರೋಡ್‌ಶೋಗಳನ್ನು ಮಾಡುತ್ತಿದ್ದಾರೆ. ಮುಂಜಾನೆ ಉದ್ಯಾನಳಿಗೆ ತೆರಳಿ ಮತಯಾಚಿಸುತ್ತಿದ್ದಾರೆ, ಬೀದಿಬದಿ ವ್ಯಾಪಾರಿಗಳೊಂದಿಗೆ ಮಾತನಾಡುತ್ತಿದ್ದಾರೆ, ಅಪಾರ್ಟ್‌ಮೆಂಟ್ ನಿವಾಸಿಗಳು ಮತ್ತು ನಿವಾಸಿಗಳ ಕಲ್ಯಾಣ ಸಂಘಗಳನ್ನು ಭೇಟಿ ಮಾಡುತ್ತಿದ್ದಾರೆ ಮತ್ತು ಕ್ಷೇತ್ರದಲ್ಲಿನ ದೇವಸ್ಥಾನಗಳಿಗೂ ಭೇಟಿ ನೀಡುವ ಮೂಲಕ ಮತದಾರರ ಮನ ಗೆಲ್ಲಲು ಕಸರತ್ತು ನಡೆಸುತ್ತಿದ್ದಾರೆ.

ಬೆಂಗಳೂರು ಸೆಂಟ್ರಲ್ ಕ್ಷೇತ್ರದಲ್ಲಿ ವಿವಿಧ ಜನಾಂಗದ ಜನರಿದ್ದು, ಹಿಂದೂಗಳು, ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರ ಹೆಚ್ಚಿನ ಜನಸಂಖ್ಯೆ ಇದೆ ಮತ್ತು ತಮಿಳು ಮತ್ತು ಇತರ ಭಾಷಿಕರೂ ಕೂಡ ಇಲ್ಲಿ ಗಮನಾರ್ಹ ಸಂಖ್ಯೆಯಲ್ಲಿ ಇದ್ದಾರೆ.

ಒಂದೆಡೆ, ಮೋಹನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಮುಂದಿಟ್ಟುಕೊಂಡು ಮತಯಾಚಿಸುತ್ತಿದ್ದು, ನಮ್ಮ ಮೆಟ್ರೋ, ಸಬ್ ಅರ್ಬನ್ ರೈಲು ಯೋಜನೆ, ರೈಲ್ವೆ ನಿಲ್ದಾಣಗಳು, ಹೆದ್ದಾರಿಗಳಲ್ಲಿ ಉತ್ತಮ ಸೌಕರ್ಯಗಳು, ದಟ್ಟಣೆಯನ್ನು ಕಡಿಮೆ ಮಾಡಲು ಎಲೆಕ್ಟ್ರಿಕ್ ಬಸ್‌ಗಳು, ಸ್ಕೈವಾಕ್‌ಗಳು ಮತ್ತು ಫ್ಲೈಓವರ್‌ಗಳೊಂದಿಗೆ ಆಧುನಿಕ ಬೆಂಗಳೂರನ್ನು ನಿರ್ಮಿಸುವ ಕ್ರಮಗಳನ್ನು ಮತದಾರರ ಮುಂದಿಡುತ್ತಿದ್ದಾರೆ.

ಕಳೆದ ವರ್ಷದ ವಿಧಾನಸಭಾ ಚುನಾವಣೆಯ ವೇಳೆ ಕಾಂಗ್ರೆಸ್ ಐದು ಭರವಸೆಗಳನ್ನು ನೀಡಿತ್ತು ಮತ್ತು ಅಧಿಕಾರಕ್ಕೆ ಬಂದ ನಂತರ ಅವೆಲ್ಲವನ್ನೂ ಈಡೇರಿಸಿದೆ. ಅದೇ ರೀತಿಯಲ್ಲಿ ಬೆಂಗಳೂರನ್ನು ಪರಿಸರ ಸ್ನೇಹಿ ಆಚರಣೆಗಳ ಮೂಲಕ ಸುಸ್ಥಿರ ನಗರವನ್ನಾಗಿ ಮಾಡಲು ಶ್ರಮಿಸುವುದಾಗಿ ಖಾನ್ ಮತದಾರರಿಗೆ ಹೇಳುತ್ತಿದ್ದಾರೆ. ತಾವು ಅಧಿಕಾರಕ್ಕೆ ಬಂದರೆ ನಗರದ ನೀರಿನ ಸಮಸ್ಯೆ ನೀಗಿಸಲು ಸಾಧ್ಯವಾಗುತ್ತದೆ ಎಂದು ಭರವಸೆ ನೀಡುತ್ತಿದ್ದಾರೆ.

ಈಮಧ್ಯೆ, ಈ ನಗರ ಭಾಗದಲ್ಲಿ ಕುಡಿಯುವ ನೀರು ಮತ್ತು ನೈರ್ಮಲ್ಯವು ಪ್ರಮುಖ ಸಮಸ್ಯೆಗಳಾಗಿ ಮುಂದುವರೆದಿದ್ದು, 'ನಾವು ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದ ಭಾಗವಾಗಿರುವ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತೇವೆ. ಇಲ್ಲಿನ ಸಮಸ್ಯೆಗಳಿಗೆ ಕಡಿವಾಣ ಹಾಕಲು ಶಾಸಕ ಜಮೀರ್ ಆಗಲಿ, ಸಂಸದ ಪಿಸಿ ಮೋಹನ್ ಆಗಲಿ ತಲೆ ಕೆಡಿಸಿಕೊಂಡಿಲ್ಲ. ಅನೇಕ ಯುವಕರು ನಿರುದ್ಯೋಗಿಗಳಾಗಿದ್ದು, ಅವರಿಗೆ ಉದ್ಯೋಗ ಕಲ್ಪಿಸಲು ಕ್ರಮಕೈಗೊಳ್ಳಬೇಕು’ ಎನ್ನುತ್ತಾರೆ ಅಂಜನಪ್ಪ ಗಾರ್ಡನ್ ನಿವಾಸಿ ಶಿವ.

ಕ್ಷೇತ್ರದಲ್ಲಿನ ಕಳಪೆ ಸಾರ್ವಜನಿಕ ಮೂಲಸೌಕರ್ಯಗಳ ಬಗ್ಗೆ ಮತದಾರರು ದೂರುತ್ತಿದ್ದು, ಕ್ಷೇತ್ರದಲ್ಲಿ ಟ್ರಾಫಿಕ್ ಸಮಸ್ಯೆಯನ್ನು ತಡೆಗಟ್ಟುವ ಕ್ರಮಗಳ ಜೊತೆಗೆ ಅದನ್ನು ಸುಧಾರಿಸಲು ಮುಂದಾಗಬೇಕೆಂದು ಬಯಸುತ್ತಿದ್ದಾರೆ.

SCROLL FOR NEXT