ಬೆಂಗಳೂರು: ರಾಜ್ಯ ಬಿಜೆಪಿ ನಾಯಕ ಬಿ.ಎಸ್.ಯಡಿಯೂರಪ್ಪ ಮತ್ತು ಅವರ ಪುತ್ರ ಬಿ.ವೈ.ವಿಜಯೇಂದ್ರ ಇಬ್ಬರೂ ಭ್ರಷ್ಟಾಚಾರದಲ್ಲಿ ತೊಡಗಿದ್ದರೂ ಮುಡಾ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಒತ್ತಾಯಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಸಂಸದ ವಿಎಸ್ ಉಗ್ರಪ್ಪ ವಾಗ್ದಾಳಿ ನಡೆಸಿದ್ದಾರೆ.
ಸಿದ್ದರಾಮಯ್ಯ ವಿರುದ್ಧ ಯಾವುದೇ ಪುರಾವೆಗಳಿಲ್ಲ. ಸಿಎಂ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ. ರಾಜ್ಯಪಾಲರು ಅವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಲು ಸಾಧ್ಯವಿಲ್ಲ, ಎಂದು ಹೇಳಿದರು.
ಬಿಡಿಎಯಿಂದ ಭೂ ಡಿನೋಟಿಫಿಕೇಷನ್ ಪ್ರಕರಣದಲ್ಲಿ ಯಡಿಯೂರಪ್ಪ ಮತ್ತು ಅವರ ಪುತ್ರ ಆರ್‌ಟಿಜಿಎಸ್ ಮೂಲಕ ಲಂಚ ಪಡೆದಿದ್ದಾರೆ ಎಂದು ಆರೋಪಿಸಿದ ಉಗ್ರಪ್ಪ, ಸಿದ್ದರಾಮಯ್ಯ ತಮ್ಮ ಪತ್ನಿ ಪಾರ್ವತಿ ಅವರಿಗೆ ಮುಡಾ ನಿವೇಶನ ಹಂಚಿಕೆ ಮಾಡಲು ನೇರವಾಗಿ ಅಥವಾ ಪರೋಕ್ಷವಾಗಿ ಮೇಲೆ ಪ್ರಭಾವ ಬೀರಿಲ್ಲ. ಮುಡಾದಲ್ಲಿ ದೊಡ್ಡ ಅವ್ಯವಹಾರ ನಡೆದಿದ್ದು, 220 ಎಕರೆಗೂ ಹೆಚ್ಚು ಜಮೀನು ಮಂಜೂರು ಮಾಡಲಾಗಿದೆ ಎಂದಿದ್ದಾರೆ.
ಸಂಬಂಧಿಸಿದ ಮುಡಾ ಅಧ್ಯಕ್ಷರು ಮತ್ತು ಶಾಸಕರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು. ಬಿಜೆಪಿ ಮತ್ತು ಜೆಡಿಎಸ್ ಸರ್ಕಾರವನ್ನು ಅಸ್ಥಿರಗೊಳಿಸುವ ದುರುದ್ದೇಶದಿಂದ ಪಾದಯಾತ್ರೆ ನಡೆಸುತ್ತಿವೆ. ರಾಜ್ಯಪಾಲರು ಮನಸ್ಸಿಗೆ ತೋಚಿದಂತೆ ನೋಟಿಸ್ ಜಾರಿ ಮಾಡಿ ಆತುರದ ನಿರ್ಧಾರ ಕೈಗೊಂಡಿದ್ದಾರೆ' ಎಂದು ಕೆಪಿಸಿಸಿ ಉಪಾಧ್ಯಕ್ಷ ವಿ.ಆರ್.ಸುದರ್ಶನ್ ಪ್ರತಿಕ್ರಿಯಿಸಿದ್ದಾರೆ. ದೂರು ದಾಖಲಿಸಿದವರ (ಟಿ.ಜೆ. ಅಬ್ರಹಾಂ) ಹಿನ್ನೆಲೆಯನ್ನು ರಾಜ್ಯಪಾಲರು ಪರಿಶೀಲಿಸಬೇಕಿತ್ತು. ಸಿದ್ದರಾಮಯ್ಯ ವಿರುದ್ಧ ಸಾಕಷ್ಟು ಸಾಕ್ಷ್ಯಗಳಿವೆಯೇ ಎಂಬುದನ್ನು ಅವರು ನೋಡಬೇಕಿತ್ತು' ಎಂದು ಪಕ್ಷದ ಮುಖಂಡ ಬಿ.ಎಲ್.ಶಂಕರ್ ಹೇಳಿದರು.
ಅಬ್ರಹಾಂ ಒಬ್ಬ ಬ್ಲಾಕ್‌ಮೇಲರ್ ಎಂದು ಸಿಎಂ ಸಿದ್ದರಾಮಯ್ಯ ರಾಜಕೀಯ ಸಲಹೆಗಾರ, ಆಳಂದ ಶಾಸಕ ಬಿ.ಆರ್.ಪಾಟೀಲ್ ಆರೋಪಿಸಿದ್ದಾರೆ. ಈ ಹಿಂದೆ ಸಿದ್ದರಾಮಯ್ಯ ಅವರು ಆಳಂದದಲ್ಲಿ ಮಿನಿ ವಿಧಾನಸೌಧ ನಿರ್ಮಾಣಕ್ಕೆ ಒಪ್ಪಿಗೆ ನೀಡಿದ್ದರು. ಮಿನಿ ಸೌಧವನ್ನು ಬೇರೆಡೆ ನಿರ್ಮಿಸಬೇಕು ಎಂದು ರಿಯಲ್ ಎಸ್ಟೇಟ್ ಉದ್ಯಮಿಗಳ ಜತೆಗೂಡಿ ಅಬ್ರಹಾಂ ಹೈಕೋರ್ಟ್ ಮೆಟ್ಟಿಲೇರಿದ್ದರು. ಆಳಂದದ ಬಗ್ಗೆ ನಿಮಗೆ ಯಾವ ರೀತಿಯಲ್ಲಿ ಕಾಳಜಿ ಇದೆ ಎಂದು ಪ್ರಶ್ನಿಸಿದ ನ್ಯಾಯಾಲಯ ಅವರ ಅರ್ಜಿಯನ್ನು ತಿರಸ್ಕರಿಸಿತು ಎಂದು ಪಾಟೀಲ್ ಹೇಳಿದರು.