ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದಲ್ಲಿ ಅಕ್ರಮವಾಗಿ ಸೈಟ್ ಪಡೆದ ಆರೋಪ ಎದುರಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವುದನ್ನು ಖಂಡಿಸಿ ಕಾಂಗ್ರೆಸ್ ಆಗಸ್ಟ್ 19 ರಂದು ರಾಜ್ಯಾದ್ಯಂತ ಪ್ರತಿಭಟನೆ ಕರೆ ನೀಡಿದೆ.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು, ಸಂವಿಧಾನ ವಿರೋಧಿಯಾಗಿ ರಾಜ್ಯಪಾಲರು ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಪ್ರಾಸಿಕ್ಯೂಷನ್ಗೆ ನೀಡಿರುವ ಅನುಮತಿ ಖಂಡಿಸಿ ಆಗಸ್ಟ್ 19ರ ಸೋಮವಾರದಂದು ಬೆಳಗ್ಗೆ 11 ಗಂಟೆಗೆ ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಂಡಿದ್ದು, ಪಕ್ಷದ ಎಲ್ಲಾ ಕಾರ್ಯಕರ್ತರು, ನಾಯಕರು ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.
ರಾಜ್ಯಪಾಲರ ಅಸಂವಿಧಾನಿಕ ನಡೆಯನ್ನು ಖಂಡಿಸಿ ರಾಷ್ಟ್ರಪತಿಗಳಿಗೆ ನೇರವಾಗಿ ಇ-ಮೈಲ್ ಮೂಲಕ (presidentofindia@rb.nic.in) ಹಾಗೂ ಸಂಬಂಧಪಟ್ಟ ಜಿಲ್ಲಾಧಿಕಾರಿಗಳ ಮೂಲಕ ಜ್ಞಾಪನಾ ಪತ್ರವನ್ನು (Memorandum) ನೀಡಬೇಕು ಎಂದು ಸೂಚಿಸಲಾಗಿದೆ.
ಪ್ರತಿಭಟನೆ ನಡೆಯುವ ಸ್ಥಳಕ್ಕೆ ಕನಿಷ್ಠ ಅರ್ಧ ಕಿಲೋಮೀಟರ್ ಪಾದಯಾತ್ರೆ ಮೂಲಕ ಹೋಗಿ ಪ್ರತಿಭಟನೆ ಆರಂಭಿಸಬೇಕು. ಪ್ರತಿಭಟನೆಯಲ್ಲಿ ಎಲ್ಲಾ ಸಂಬಂಧಪಟ್ಟ ಸಚಿವರು, ಸಂಸದರು, ಶಾಸಕರು, ಮಾಜಿ ಸಚಿವರು, ಮಾಜಿ ಶಾಸಕರು, ಕೆಪಿಸಿಸಿ ಪದಾಧಿಕಾರಿಗಳು, ಕೆಪಿಸಿಸಿ ಸದಸ್ಯರು, ಡಿಸಿಸಿ, ಬಿಸಿಸಿ ಪದಾಧಿಕಾರಿಗಳು, ಮುಂಚೂಣಿ ಘಟಕ/ಸೆಲ್/ವಿಭಾಗಗಳ ಅಧ್ಯಕ್ಷರು/ಪದಾಧಿಕಾರಿಗಳು, ಸ್ಥಳೀಯ ಸಂಸ್ಥೆಗಳ ಸದಸ್ಯರು, ವಾರ್ಡ್, ಪಂಚಾಯಿತಿ ಹಾಗೂ ಬೂತ್ ಮಟ್ಟದ ಕಾರ್ಯಕರ್ತರು ಹಾಗೂ ಇತರ ಎಲ್ಲ ಸ್ಥಳೀಯ ಮುಖಂಡರುಗಳು ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಸೂಚನೆ ನೀಡಲಾಗಿದೆ.
ರಾಜ್ಯಪಾಲರ ನಡೆಯನ್ನು ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಕಾಂಗ್ರೆಸ್ ಭವನದ ಮುಂದೆ ಇಂದು ಸಹ ಪ್ರತಿಭಟನೆ ನಡೆಸಿದರು.