ರಾಜಕೀಯ

ಡಿಕೆ ಸುರೇಶ್ ಬೆದರಿಕೆಗೆ ಜಗ್ಗುವವರಲ್ಲ, ಹೇಗೆ ಎದುರಿಸಬೇಕು ಅಂತ ನಮಗೆ ಗೊತ್ತು: ಡಿಕೆಶಿ

Lingaraj Badiger

ಬೆಂಗಳೂರು: ತಮ್ಮ ಸಹೋದರ ಹಾಗೂ ಸಂಸದ ಡಿ.ಕೆ.ಸುರೇಶ್ ಅವರು ಬೆದರಿಕೆಗೆ ಹೆದರುವ ವ್ಯಕ್ತಿಯಲ್ಲ ಮತ್ತು ಅಂತಹ ಎಲ್ಲಾ ಬೆದರಿಕೆಗಳನ್ನು 'ಸೂಕ್ತವಾಗಿ' ನಿಭಾಯಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಶನಿವಾರ ಹೇಳಿದ್ದಾರೆ.

ಇಂದು ಕಾಂಗ್ರೆಸ್ ಪ್ರಣಾಳಿಕೆ ಸಮಿತಿ ಸಭೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಕೆ ಸುರೇಶ್ ಬೆದರಿಕೆಗೆ ಹೆದರುವವರಲ್ಲ. ಬೆದರಿಕೆಗಳನ್ನು ಹೇಗೆ ಎದುರಿಸಬೇಕೆಂದು ನಮಗೆ ತಿಳಿದಿದೆ ಮತ್ತು ನಾವು ಈ ಹಿಂದೆ ಇಂತಹ ಹಲವು ಬೆದರಿಕೆಗಳನ್ನು ಎದುರಿಸಿದ್ದೇವೆ ಎಂದರು.

ಡಿ.ಕೆ.ಸುರೇಶ್ ವಿರುದ್ಧದ ಹೇಳಿಕೆಗೆ ಕ್ಷಮೆ ಕೇಳುವುದಿಲ್ಲ ಎಂದ ಬಿಜೆಪಿ ನಾಯಕ ಈಶ್ವರಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಶಿವಕುಮಾರ್, ಕ್ಷಮೆಯಾಚಿಸುವಂತೆ ಯಾರೂ ಕೇಳುತ್ತಿಲ್ಲ. ಪ್ರತಿ ಕಾರ್ಯಕ್ಕೂ ಅದರದ್ದೆಯಾದ ಪರಿಣಾಮ ಇದೆ. ಒಮ್ಮೆ ವಿಧಾನಸಭೆಯಲ್ಲಿ ನನ್ನ ಅಪ್ಪನ ಬಗ್ಗೆ ಮಾತನಾಡಿದ್ದರು. ಆಮೇಲೆ ಏನಾಯ್ತು ಅನ್ನೋದು ಎಲ್ಲರಿಗೂ ಗೊತ್ತು. ಇವತ್ತು ಈಶ್ವರಪ್ಪ ಎಲ್ಲಿದ್ದಾರೆ. ಡಿ.ಕೆ.ಸುರೇಶ್ ಗುಂಡು ಹಾರಿಸಲು ಈಶ್ವರಪ್ಪ ಬಯಸಿದ್ದರೆ ಅದನ್ನು ಮಾಡಲಿ ಬಿಡಿ. ಆದರೆ ಅಂತಹ ಬೆದರಿಕೆಗಳಿಗೆ ಹೆದರುವುದಿಲ್ಲ. ನಾವು ರಾಜಕೀಯದಲ್ಲಿ ಬಹಳ ಹಿಂದಿನಿಂದಲೂ ಇದ್ದೇವೆ ಮತ್ತು ಅಂತಹ ಬೆದರಿಕೆಗಳನ್ನು ಹೇಗೆ ಎದುರಿಸಬೇಕೆಂದು ನಮಗೆ ಗೊತ್ತಿದೆ ಎಂದರು.

"ಕಾಂಗ್ರೆಸ್ ಪ್ರಣಾಳಿಕೆ ಸಮಿತಿಯ ಸಭೆ ಇಂದು ನಡೆಯುತ್ತಿದೆ. ಮುಖ್ಯಮಂತ್ರಿಯೂ ಸಮಿತಿಯ ಸದಸ್ಯರಾಗಿದ್ದಾರೆ ಮತ್ತು ಸಮಿತಿ ಹಲವು ಸಭೆಗಳನ್ನು ನಡೆಸಿದೆ. ಜನರಿಂದ ಮತ್ತು ಸಂಸ್ಥೆಗಳಿಂದ ಸಲಹೆಗಳನ್ನು ಪಡೆಯುವುದು ಇಂದಿನ ಸಭೆಯ ಉದ್ದೇಶ ಎಂದು ಡಿಕೆಶಿ ಹೇಳಿದ್ದಾರೆ.

SCROLL FOR NEXT