ಸಿಎಂ ಸಿದ್ದರಾಮಯ್ಯ, ಅನಂತ್ ಕುಮಾರ್ ಹೆಗಡೆ
ಸಿಎಂ ಸಿದ್ದರಾಮಯ್ಯ, ಅನಂತ್ ಕುಮಾರ್ ಹೆಗಡೆ 
ರಾಜಕೀಯ

''ಸಿದ್ರಾಮುಲ್ಲಾ ಖಾನ್'' ಎಂದ ಅನಂತ್ ಕುಮಾರ್ ಹೆಗಡೆ; ಮುಸ್ಲಿಂ ವಿರೋಧಿ ಎಂದು ಸಿಎಂ ಕಿಡಿ

Nagaraja AB

ಕಾರವಾರ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು '' ಸಿದ್ರಾಮುಲ್ಲಾ ಖಾನ್'' ಎಂದು ಕರೆದಿರುವ ಬಿಜೆಪಿ ಸಂಸದ ಅನಂತಕುಮಾರ ಹೆಗಡೆ, ಸಿದ್ದು ನೇತೃತ್ವದ ಕಾಂಗ್ರೆಸ್ ಸರ್ಕಾರದಿಂದ ಕರ್ನಾಟಕ ದಿವಾಳಿಯಾಗುತ್ತಿದೆ. ಮತ ಗಳಿಸಲು ರಾಜ್ಯವನ್ನು ಲೂಟಿ ಮಾಡಲು ಹೊರಟಿದೆ ಎಂದು ಆರೋಪಿಸಿದ್ದಾರೆ. ಹೆಗಡೆಗೆ ತಿರುಗೇಟು ನೀಡಿದ ಸಿಎಂ ಸಿದ್ದರಾಮಯ್ಯ ಬಿಜೆಪಿಯನ್ನು ಮುಸ್ಲಿಂ ವಿರೋಧಿ ಮತ್ತು ಅಲ್ಪಸಂಖ್ಯಾತರ ವಿರೋಧಿ ಎಂದು ಟೀಕಿಸಿದ್ದಾರೆ.

ಪಕ್ಷದ ಸಭೆಯೊಂದರಲ್ಲಿ ಮಾತನಾಡಿದ ಅನಂತ್ ಕುಮಾರ್ ಹೆಗಡೆ, ಮೋದಿ ಸರ್ಕಾರ ಜನರ ಅನುಕೂಲಕ್ಕಾಗಿ 370ಕ್ಕೂ ಯೋಜನೆಗಳು ಅಥವಾ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಕೃಷಿ, ತೋಟಗಾರಿಕೆ, ಕೈಗಾರಿಕೆ, ವಸತಿ, ಜನೌಷಧಿ, ಯಾವುದೇ ಆಗಲಿ, ಬಹುತೇಕ ಎಲ್ಲಾ ಕ್ಷೇತ್ರಗಳಲ್ಲಿ ಜನರ ಕಲ್ಯಾಣಕ್ಕಾಗಿ ಕಾರ್ಯಕ್ರಮ ರೂಪಿಸಿದ್ದಾರೆ. ಆದರೆ, ಸರ್ಕಾರವನ್ನು ದಿವಾಳಿಯಾಗಿಸುವ ಕಾರ್ಯಕ್ರಮ ತಂದಿಲ್ಲ. ಬದಲಿಗೆ ಅದನ್ನು ಬಲಗೊಳಿಸಿದ್ದಾರೆ. ಭಾರತವು ಇಂದು ಐದನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ ಎಂದು ಹೇಳಿದರು.

ಪ್ರಧಾನಿ ಮೋದಿ, ರಾಷ್ಟ್ರದ ಹಿತಾಸಕ್ತಿಯಲ್ಲಿ ಎಂದಿಗೂ ರಾಜಿ ಮಾಡಿಕೊಂಡಿಲ್ಲ. ಅವರ ಸರ್ಕಾರದ ಭರವಸೆಗಳು ದೇಶವನ್ನು ಬಲಿಷ್ಠಗೊಳಿಸಿದೆ. ಆದರೆ, ರಾಜ್ಯ ಸರ್ಕಾರಿ ನೌಕರರಿಗೆ ವೇತನ ಪಾವತಿ, ಅಭಿವೃದ್ಧಿ ಕಾರ್ಯಗಳಿಗೆ, ಶಾಸಕರ ನಿಧಿ ನೀಡಲು 11,000 ಕೋಟಿ ರೂ.ಗೂ ಹೆಚ್ಚು ಎಸ್‌ಸಿ/ಎಸ್‌ಟಿ ಹಣವನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ.ರಾಜ್ಯ ಸರಕಾರ ದಿವಾಳಿಯಾಗುತ್ತಿದೆ. ಮೋದಿ ಅಂತಹ ಭರವಸೆ ನೀಡಿಲ್ಲ ಎಂದರು.

ಮೋದಿ ಗ್ಯಾರಂಟಿ ಮತ್ತು ಸಿದ್ದರಾಮಯ್ಯನವರ ಗ್ಯಾರಂಟಿಗಳ ನಡುವೆ ವ್ಯತ್ಯಾಸವನ್ನು ತಿಳಿಸಿದ ಹೆಗಡೆ, ಕಾಂಗ್ರೆಸ್ ಮತ ಪಡೆಯಲು ರಾಜ್ಯವನ್ನು ಲೂಟಿ ಮಾಡಲು ಬಯಸುತ್ತಿದೆ. “ಇಂತಹ ಅಸಹ್ಯಕರ ಸರ್ಕಾರವನ್ನು ನಾನು ನೋಡಿಲ್ಲ.

ಹಲವಾರು ಕಾಂಗ್ರೆಸ್ ಮುಖ್ಯಮಂತ್ರಿಗಳನ್ನು ನೋಡಿದ್ದೇನೆ, ಜನತಾ ದಳ ಸರ್ಕಾರವನ್ನು ನೋಡಿದ್ದೇನೆ, ಆದರೆ ಇಂತಹ ಸರ್ಕಾರವನ್ನು ನೋಡಿಲ್ಲ. ತೆರಿಗೆ ಹಂಚಿಕೆ ಮತ್ತು ಕೇಂದ್ರದಿಂದ ರಾಜ್ಯಕ್ಕೆ ಅನುದಾನ ಬಗ್ಗೆ “ಸಿದ್ದರಾಮುಲ್ಲಾ ಖಾನ್” ಗೆ ಮಾತ್ರ ಸಮಸ್ಯೆಯಿದೆ. ಬೇರೆ ರಾಜ್ಯಗಳಿಗೆ ಇಲ್ಲ ಎಂದರು.

ಮತ್ತೊಂದೆಡೆ ಹೆಗಡೆ ಅವರ ಈ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಬಿಜೆಪಿ ‘ಅಲ್ಪಸಂಖ್ಯಾತ ವಿರೋಧಿ’ ಎಂದು ಹೇಳಿದರು. "ಅವರು ಸಬ್ಕಾ-ಸಾಥ್-ಸಬ್ಕಾ-ವಿಕಾಸ್ ಬಗ್ಗೆ ಮಾತನಾಡುತ್ತಾರೆ, ಆದರೆ ಅವರು ಮುಸ್ಲಿಮರನ್ನು ವಿರೋಧಿಸುತ್ತಾರೆ. ಇಲ್ಲದಿದ್ದರೆ, ಹೆಗಡೆ ನನ್ನನ್ನು ಸಿದ್ರಾಮುಲ್ಲಾ ಖಾನ್ ಎಂದು ಏಕೆ ಕರೆಯುತ್ತಾರೆ? ”ಎಂದು ಅವರು ಪ್ರಶ್ನಿಸಿದರು.

ಯಾವುದೇ ಸರ್ಕಾರಿ ಸಿಬ್ಬಂದಿ ವೇತನ ಪಾವತಿ ಮಾಡಿಲ್ಲ ಎಂಬ ಆರೋಪ ಕುರಿತು ಪ್ರತಿಕ್ರಿಯಿಸಿದ ಸಿಎಂ, ಅನಂತಕುಮಾರ್ ಹೆಗಡೆ ಸಂವಿಧಾನ ಬದಲಿಸುವ ಬಗ್ಗೆ ಮಾತನಾಡಿದ್ದಾರೆ. ಅವರು ಸಂಸದರಾಗಲು ಯೋಗ್ಯರೇ?

ಇಂತಹವರು ಇಂತಹ ಹೇಳಿಕೆ ನೀಡಿದರೆ ಅದಕ್ಕೆ ಬೆಲೆ ಏನು?’’ ಎಂದು ಪ್ರಶ್ನಿಸಿದರು. ಇನ್ನೂ ಕರ್ನಾಟಕ ಹೊರತುಪಡಿಸಿ ಬೇರೆ ಯಾವುದೇ ರಾಜ್ಯಗಳು ಕೇಂದ್ರದಿಂದ ಅನುದಾನ ವಿಚಾರವನ್ನು ಪ್ರಸ್ತಾಪಿಸಿಲ್ಲ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಕೇರಳ, ತಮಿಳುನಾಡು ಕೂಡ ಪ್ರತಿಭಟನೆ ನಡೆಸಿವೆ.‘‘ ವಿಶೇಷವಾಗಿ ದಕ್ಷಿಣದ ಎಲ್ಲಾ ರಾಜ್ಯಗಳಿಗೆ ಅನ್ಯಾಯವಾಗಿದೆ ಎಂದರು.

SCROLL FOR NEXT