ಸಿಎಂ ಸಿದ್ದರಾಮಯ್ಯ ಭೇಟಿ ಮಾಡಿದ ಶಾಸಕ ಜನಾರ್ದನ ರೆಡ್ಡಿ
ಸಿಎಂ ಸಿದ್ದರಾಮಯ್ಯ ಭೇಟಿ ಮಾಡಿದ ಶಾಸಕ ಜನಾರ್ದನ ರೆಡ್ಡಿ 
ರಾಜಕೀಯ

ರಾಜ್ಯಸಭೆ ಚುನಾವಣೆ: ಸಿಎಂ ಭೇಟಿಯಾದ ಜನಾರ್ದನ ರೆಡ್ಡಿ; ಕಾಂಗ್ರೆಸ್ ಗೆ ಗಣಿಧಣಿ ಫಿಕ್ಸ್?

Shilpa D

ಬೆಂಗಳೂರು: ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಮಂಗಳವಾರ ನಡೆಯಲಿರುವ ಚುನಾವಣೆ ರಂಗೇರುತ್ತಿದ್ದು, ಕೆಆರ್‌ಪಿಪಿ ಶಾಸಕ ಜನಾರ್ದನ ರೆಡ್ಡಿಯವರು ದಿಢೀರ್ ಆಗಿ ಸಿಎಂ ಸಿದ್ದರಾಮಯ್ಯ ನಿವಾಸಕ್ಕೆ ತೆರಳಿ ಮಾತುಕತೆ ನಡೆಸಿದ್ದಾರೆ. ಚುನಾವಣೆ ಹೊತ್ತಿನಲ್ಲಿ ಜನಾರ್ದನ ರೆಡ್ಡಿಯವರ ನಡೆ ಕುತೂಹಲ ಮೂಡಿಸಿದೆ.

ರಾಜ್ಯ ಸಭೆ ಚುನಾವಣೆಗೆ ಇನ್ನೇನು ಒಂದೇ ದಿನ ಬಾಕಿ ಇದೆ. ಅಖಾಡದಲ್ಲಿ ಐದನೇ ಅಭ್ಯರ್ಥಿ ಕಣಕ್ಕಿಳಿದಿರುವುದು ಚುನಾವಣಾ ಕಣವನ್ನು ರಂಗೇರಿಸಿದೆ. ಈ ನಡುವೆ ಪಕ್ಷೇತರ ಅಭ್ಯರ್ಥಿಗಳಿಗೆ ಗಾಳ ಹಾಕಲು ಪ್ರಯತ್ನಗಳು ತೀವ್ರಗೊಂಡಿದೆ. ಇದರ ಬೆನ್ನಲ್ಲೇ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಶಾಸಕ ಗಾಲಿ ಜನಾರ್ದನ ರೆಡ್ಡಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿರುವುದು ಕುತೂಹಲ ಕೆರಳಿಸಿದೆ.

ರಾಜ್ಯ ಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮೂವರನ್ನು ಹಾಗೂ ಬಿಜೆಪಿ ಓರ್ವ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಈ ನಡುವೆ ಮೈತ್ರಿ ಅಭ್ಯರ್ಥಿಯಾಗಿ ಕುಪೇಂದ್ರ ರೆಡ್ಡಿ ಕಣಕ್ಕೆ ಇಳಿದಿದ್ದಾರೆ. ಮೈತ್ರಿ ಅಭ್ಯರ್ಥಿಯನ್ನು ಗೆಲ್ಲಿಸಲು ಬಿಜೆಪಿ ಹಾಗೂ ಜೆಡಿಎಸ್ ನಾಯಕರು ನಾನಾ ರೀತಿಯ ಪ್ರಯತ್ನ ನಡೆಸುತ್ತಿದ್ದಾರೆ. ಅದರಲ್ಲೂ ಪಕ್ಷೇತರ ಅಭ್ಯರ್ಥಿಗಳು ಆಪರೇಷನ್ ಪಟ್ಟಿಯಲ್ಲಿದ್ದಾರೆ. ಈ ನಡುವೆ ಪಕ್ಷೇತರರನ್ನು ಸೆಳೆಯುವ ಪ್ರಯತ್ನವನ್ನು ನಾವೂ ನಡೆಸುತ್ತೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಪರೋಕ್ಷವಾಗಿ ಹೇಳಿದ್ದರು. ಇದರ ಬೆನ್ನಲ್ಲೇ ಜನಾರ್ದನ ರೆಡ್ಡಿ ಅವರು ಸಿಎಂ ಡಿಸಿಎಂ ಅವರನ್ನು ಭೇಟಿ ಮಾಡಿದ್ದು ಚರ್ಚೆಗೆ ಗ್ರಾಸವಾಗಿದೆ.

ಇನ್ನು ಭೇಟಿ ಕುರಿತಾಗಿ ವಿಧಾನಸೌಧದಲ್ಲಿ ಮಾತನಾಡಿದ ಅವರು, ‌ಐತಿಹಾಸಿಕ ಆನೆಗೊಂದಿ ಉತ್ಸವವನ್ನ ವೈಭವದಿಂದ ಆಚರಿಸಲು ಜಿಲ್ಲಾಡಳಿತ ನಿರ್ಧಾರ ಮಾಡಿದೆ. ಮಾರ್ಚ್ ತಿಂಗಳಲ್ಲಿ ವೈಭವದಿಂದ ಆಚರಿಸಲಾಗುತ್ತೆ. ಈ ಸಂಬಂಧ ಸಿಎಂ,‌ಡಿಸಿಎಂಗೆ ಆಹ್ವಾನ ನೀಡಲು ಹೋಗಿದ್ದೆ ಎಂದರು.

ಭೇಟಿ ಸಂದರ್ಭದಲ್ಲಿ ರಾಜ್ಯಸಭೆ ಚುನಾವಣೆಯ ಬಗ್ಗೆ ಚರ್ಚೆ ನಡೆದಿದ್ಯಾ ಎಂಬ ಪ್ರಶ್ನೆಗೆ, ರಾಜ್ಯಸಭಾ ಚುನಾವಣೆಗೆ ಎಲ್ಲರೂ ಮನವಿ ಮಾಡಿದ್ದಾರೆ. ಸಿಎಂ, ಡಿಸಿಎಂ ಆದಿಯಾಗಿ ಎಲ್ಲ ಪಕ್ಷದವ್ರು ಮನವಿ ಮಾಡಿದ್ದಾರೆ.‌ನಾನು ಇನ್ನು ಏನೂ ತೀರ್ಮಾನ ಮಾಡಿಲ್ಲ ಎಂದರು.

SCROLL FOR NEXT