ಪ್ರಹ್ಲಾದ್ ಜೋಶಿ 
ರಾಜಕೀಯ

ಮುಡಾ ಹಗರಣ: ಏನೂ ಮಾಡಿಲ್ಲವೆಂದಾದರೆ ಡಿಸಿ ವರ್ಗಾವಣೆ ಮಾಡಿದ್ದು ಏಕೆ?: ಸಿಎಂ ಸಿದ್ದರಾಮಯ್ಯಗೆ ಜೋಶಿ ಪ್ರಶ್ನೆ

ಇದು ಸ್ವಂತಕ್ಕೆ ಲಾಭ ಮಾಡಿಕೊಳ್ಳಲು ಮಾಡಿರುವ ಬಹುದೊಡ್ಡ ಹಗರಣ ಇದಾಗಿದ್ದು, ಇದರ ತನಿಖೆಯ ಹೊಣೆಯನ್ನು ಸಿಬಿಐಗೆ ಕೊಡಬೇಕು. ಸಿದ್ದರಾಮಯ್ಯ ಏನೂ ಮಾಡಿಲ್ಲ ಎಂದಾದರೆ ಸಿಬಿಐ ತನಿಖೆಗೆ ಕೊಡಲಿ ಎಂದು ಪ್ರಹ್ಲಾದ್ ಜೋಶಿಯವರು ಆಗ್ರಹಿಸಿದ್ದಾರೆ.

ಬೆಂಗಳೂರು: ಏನೂ ಮಾಡಿಲ್ಲವೆಂದಾದರೆ ಜಿಲ್ಲಾಧಿಕಾರಿಯನ್ನೇಕೆ ವರ್ಗಾವಣೆ ಮಾಡಿದಿರಿ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪ್ರಶ್ನೆ ಮಾಡಿದ್ದಾರೆ.

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಹ್ಲಾದ್ ಜೋಶಿಯವರು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

ಮುಡಾ ಹಗರಣದಲ್ಲಿ ಬಹಳ ದೊಡ್ಡ ಪ್ರಮಾಣದ ಭ್ರಷ್ಟಾಚಾರ ಆಗಿದೆ. ಮೇಲ್ನೋಟಕ್ಕೆ ಇದು ಸ್ಪಷ್ಟವಾಗಿದೆ. 2017 ರಲ್ಲಿ ಈ ನಿರ್ಣಯಗಳಾಗಿವೆ. ಸಿದ್ದರಾಮಯ್ಯ ಗಮನದಲ್ಲಿ ಇದ್ದೇ ಆಗಿರುವ ಬಹುದೊಡ್ಡ ಹಗರಣ ಎಂದು ಆರೋಪಿಸಿದರು.

ಈ ಹಗರಣದಲ್ಲಿ 4 ಸಾವಿರ ಕೋಟಿ ಅಕ್ರಮ ಎಸಗಿರುವ ಬಗ್ಗೆ ಆರೋಪಗಳಿವೆ. ಬಿಜೆಪಿ ಕಾಲದಲ್ಲಿ ಕೊಟ್ಟಿದ್ದು ಎನ್ನುತ್ತಾರೆ. ಈ ಎಲ್ಲಾ ಅವ್ಯವಹಾರ ಆಗಿದ್ದು 2013 ರಿಂದ 2018 ರವರೆಗೆ. ನೀವು ಏನೂ ಮಾಡಿಲ್ಲ ಎಂದಾದರೆ ಜಿಲ್ಲಾಧಿಕಾರಿನ್ನು ಯಾಕೆ ವರ್ಗಾವಣೆ ಮಾಡಿದ್ದೀರಿ? ಅವ್ಯವಹಾರ ನಡೆಯುತ್ತಿದೆ ಎಂದು ಡಿಸಿ ಪತ್ರ ಬರೆದಿದ್ದರು. ಕಳೆದ ಒಂದು ವರ್ಷದಲ್ಲಿ 15 ಕ್ಕೂ ಹೆಚ್ಚು ಪತ್ರ ಬರೆದಿದ್ದಾರೆ. ಅದರಲ್ಲಿ ಸಿದ್ದರಾಮಯ್ಯ ಹಾಗೂ ಮಗ ಜಮೀನು ವಶಪಡಿಸಿಕೊಂಡಿದ್ದಾರೆ.

ಇದು ಸ್ವಂತಕ್ಕೆ ಲಾಭ ಮಾಡಿಕೊಳ್ಳಲು ಮಾಡಿರುವ ಬಹುದೊಡ್ಡ ಹಗರಣ. ಇದರ ತನಿಖೆಯ ಹೊಣೆಯನ್ನು ಸಿಬಿಐಗೆ ಕೊಡಬೇಕು. ಸಿದ್ದರಾಮಯ್ಯ ಏನೂ ಮಾಡಿಲ್ಲ ಎಂದಾದರೆ ಸಿಬಿಐ ತನಿಖೆಗೆ ಕೊಡಲಿ ಎಂದು ಅವರು ಆಗ್ರಹಿಸಿದರು.

ಬಿಜೆಪಿಯದ್ದು 40 ಪರ್ಸೆಂಟ್ ಸರ್ಕಾರ ಎಂದರು. ಅದಕ್ಕೆ ಯಾವ ದಾಖಲೆಯೂ ಇಲ್ಲ. ನ್ಯಾಯಾಲಯದಲ್ಲಿ ಮಾನಹಾನಿ ಕೇಸ್ ಹಾಕಲಾಗಿತ್ತು. ಅದಕ್ಕೆ ವಾರೆಂಟ್ ತಗೆದುಕೊಂಡಿದ್ದಾರೆ. ಇದೀಗ ಎರಡು ಹಗರಣಗಳಲ್ಲಿ ಮುಖ್ಯಮಂತ್ರಿಯದ್ದೇ ಪಾತ್ರ ಇದೆ ಎಂದು ಟೀಕಿಸಿದರು.

ಒಂದು ಕಡೆ ವಾಲ್ಮೀಕಿ ಹಗರಣ, ಮತ್ತೊಂದು ಕಡೆ ಮುಡಾ ಹಗರಣ. ವಾಲ್ಮೀಕಿ ಹಗರಣ ಮುಚ್ಚಿ ಹಾಕಲು ಎಸ್ಐಟಿಯವರು ಕೆಲವರನ್ನು ಬಂಧಿಸಿದ್ದಾರೆ. ಅವರಿಗೆ ಅವಕಾಶ ಕೊಟ್ಟು ನೋಟಿಸ್ ಕೊಟ್ಟಿದ್ದಾರೆ. ನಾಗೇಂದ್ರ ಅವರಿಗೆ ಶುಕ್ರವಾರ ನೋಟಿಸ್ ಕೊಟ್ಟಿದ್ದಾರೆ. ಎಲ್ಲವನ್ನೂ ಮುಚ್ಚಿ ಹಾಕಲು ಷಡ್ಯಂತ್ರ ನಡೆದಿದೆ. ಸಿದ್ದರಾಮಯ್ಯ ಸರ್ಕಾರ ಒಂದು ಕಡುಭ್ರಷ್ಟ ಸರ್ಕಾರ ಎಂದು ಕಿಡಿಕಾರಿದರು.

ಸಿದ್ದರಾಮಯ್ಯ ಸರ್ಕಾರದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಇಲ್ಲ. ಬೋಗಸ್ ಗ್ಯಾರಂಟಿ ಹೆಸರಲ್ಲಿ ಯಾವ ಕೆಲಸಗಳೂ ನಡೆಯುತ್ತಿಲ್ಲ. ದಿವಾಳಿ ಸರ್ಕಾರದಲ್ಲಿ ಲೂಟಿ ಮಾಡುವ ಕೆಲಸ ನಡೆಯುತ್ತಿದೆ. ಬಣವೆಗೆ ಬೆಂಕಿ ಹಚ್ಚಿ ಸಿಗರೇಟ್ ಹೇಗೆ ಹಚ್ಕೋಬೇಕು ಎಂಬುದನ್ನು ಇವರಿಂದ ನೋಡಿ ಕಲಿಯಬೇಕು. ದಲಿತರ ಹಣ ಗ್ಯಾರಂಟಿಗೆ ಉಪಯೋಗ ಮಾಡಿಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಬಳಿಕ ಲವ್ ಜಿಹಾದ್ ಕುರಿತು ಶ್ರೀರಾಮಸೇನೆ ಸಹಾಯವಾಣಿಗೆ ಬೆದರಿಕೆ ಕರೆ ಬಂದಿರುವ ಕುರಿತು ಪ್ರತಿಕ್ರಿಯಿಸಿ, ಈ ಸರ್ಕಾರ ಹಿಂದೂ ವಿರೋಧಿ ಸರ್ಕಾರ. ಸರ್ಕಾರ ಫೇಸ್‌ಬುಕ್‌ ಬಂದ್ ಮಾಡಿರೋದು ತಪ್ಪು. ಈ ವಿಚಾರ ನನಗೆ ಗೊತ್ತಿಲ್ಲ. ಫೇಸ್‌ಬುಕ್‌ ಬಂದ್‌ ಮಾಡಿದ್ದರೆ ಆತ್ಯಂತ ಖಂಡನೀಯ. ಬಾಂಬ್ ಬೆದರಿಕೆ ಹಾಕೋದು ಸರಿ ಅಲ್ಲ. ಹಿಂಸೆ ಯಾವತ್ತೂ ಸರಿ‌ಯಲ್ಲ. ರಾಜ್ಯ ಸರ್ಕಾರ ಈ ಬಗ್ಗೆ ತನಿಖೆ ಮಾಡಬೇಕು ಎಂದರು.

ಈ ನಡುವೆ ಆರ್ ಅಶೋಕ್ ಕೂಡ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ ಮಾಡಿರುವ ಅವರು, ರೂ. 4,000 ಕೋಟಿ ಮೌಲ್ಯದ ಬೃಹತ್ ಮುಡಾ ಹಗರಣ ಬೆಳಕಿಗೆ ಬಂದಿರುವ ಬೆನ್ನಲ್ಲೇ ಧಿಡೀರನೆ ಮೈಸೂರು ಜಿಲ್ಲಾಧಿಕಾರಿಗಳನ್ನ ವರ್ಗಾವಣೆ ಮಾಡಿರುವುದು ಮುಖ್ಯಮಂತ್ರಿಗಳ ಮೇಲೆ ಇನ್ನಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ಪದೇ ಪದೇ ಪತ್ರ ಬರೆದು ಮುಡಾ ಹಗರಣದ ಬಗ್ಗೆ ಎಚ್ಚರಿಕೆ ನೀಡಿದ್ದರೂ ಅದನ್ನ ನಿರ್ಲಕ್ಷ್ಯ ಮಾಡಿದ್ದ ಕಾಂಗ್ರೆಸ್ ಈಗ ಜಿಲ್ಲಾಧಿಕಾರಿಗಳನ್ನೇ ಎತ್ತಂಗಡಿ ಮಾಡಿದೆ.

ಸಿಎಂ ಸಿದ್ದರಾಮಯ್ಯ ನವರೇ, ಹೀಗೆ ದಿಢೀರನೆ ಜಿಲ್ಲಾಧಿಕಾರಿಗಳನ್ನ ವರ್ಗಾವಣೆ ಮಾಡುವ ಉದ್ದೇಶವೇನು? ಅದರ ಅವಶ್ಯಕತೆ ಏನಿತ್ತು? ಹಗರಣದ ಸಂಪೂರ್ಣ ಮಾಹಿತಿ ಇರುವ ಜಿಲ್ಲಾಧಿಕಾರಿಗಳನ್ನ ವರ್ಗಾವಣೆ ಮಾಡಿ ಕಡತಗಳನ್ನ ತಿರುಚುವ ಪ್ರಯತ್ನ ನಡೆಯುತ್ತಿದೆಯೇ? ಸಿಎಂ ಸಿದ್ದರಾಮಯ್ಯನವರೇ, ನಿಮ್ಮ ಆತ್ಮಸಾಕ್ಷಿ ಶುದ್ಧವಾಗಿದ್ದರೆ ಸಿಬಿಐ ತನಿಖೆಗೆ ನೀಡಲು ಯಾಕೆ ಭಯ? ಇದು ನಿಮಗೆ ಅಗ್ನಿಪರೀಕ್ಷೆ. ನೀವು ನಿಜವಾಗಿಯೂ ಪ್ರಾಮಾಣಿಕರಾಗಿದ್ದರೆ, ಮುಡಾ ಪ್ರಕರಣವನ್ನ ಸಿಬಿಐಗೆ ವಹಿಸಿ ಈ ಅಗ್ನಿಪರೀಕ್ಷೆಯಿಂದ ಹೊರಬನ್ನಿ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅಯೋಧ್ಯೆ ರಾಮ ಮಂದಿರ ನಿರ್ಮಾಣ ಪೂರ್ಣ: ರಾಮ-ಸೀತೆ ವಿವಾಹ ಪರ್ವದಂದೇ ದೇಗುಲದ ಶಿಖರದ ಮೇಲೆ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ

"Misfit For Army": ಗುರುದ್ವಾರ ಪ್ರವೇಶಿಸಲು ನಿರಾಕರಣೆ, ಕ್ರಿಶ್ಚಿಯನ್ ಸೇನಾ ಅಧಿಕಾರಿಗೆ 'ಸುಪ್ರೀಂ' ತರಾಟೆ!

ಭ್ರಷ್ಟರಿಗೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಶಾಕ್: ಏಕ ಕಾಲದಲ್ಲಿ ರಾಜ್ಯದ 10 ಕಡೆ ದಾಳಿ- ಪರಿಶೀಲನೆ

ರಾಜ್ಯ ಕಾಂಗ್ರೆಸ್ ನಲ್ಲಿ ಸಿಎಂ ಗದ್ದುಗೆ ಗುದ್ದಾಟ: 'ಹೈಕಮಾಂಡ್' ನತ್ತ ಎಲ್ಲರ ಚಿತ್ತ, ಮುಂದೇನು?

ಕೇರಳ: ರೂ. 50 ಲಕ್ಷ ಮೌಲ್ಯದ 'ಐಷಾರಾಮಿ ಬೈಕ್' ಬೇಕೆಂದು ಗಲಾಟೆ, ತಂದೆಯಿಂದ ಹಲ್ಲೆಗೊಳಗಾದ ಯುವಕ ಸಾವು!

SCROLL FOR NEXT