ಬೆಂಗಳೂರು: ಕೇಂದ್ರ ಸಚಿವ ಕುಮಾರಸ್ವಾಮಿ ಅವರು ತಮ್ಮ ಪಕ್ಷದ ನಾಯಕರನ್ನು ಸರ್ವಪಕ್ಷ ಸಭೆಗೆ ಗೋಡಂಬಿ, ದ್ರಾಕ್ಷಿ ತಿನ್ನಲು ಕಳುಹಿಸಿದ್ದರೆ? ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಖಾರವಾಗಿ ಪ್ರಶ್ನಿಸಿದ್ದಾರೆ.
ಕಾವೇರಿ ನೀರಿನ ವಿಚಾರವಾಗಿ ಸರ್ವ ಪಕ್ಷ ಸಭೆಗೆ ಸಂಬಂಧ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಸಿನಿಮಾ ಶೈಲಿಯಲ್ಲಿ ಮಾತನಾಡುತ್ತಿದ್ದಾರೆ. ಗೋಡಂಬಿ, ದ್ರಾಕ್ಷಿ ತಿನ್ನಲು ನಾವು ಕರೆದಿದ್ದೇವಾ? ಹಾಗಿದ್ದರೆ, ಕುಮಾರಸ್ವಾಮಿಗೆ ರಾಜಕಾರಣ, ಟೀಕೆ, ಆರೋಪ, ಹಿಟ್ ಅಂಡ್ ರನ್ ಮಾಡುವುದು ಬಿಟ್ಟರೆ, ಕಾವೇರಿ ನೀರು, ನಮ್ಮ ರೈತರ ಹಿತ, ರಾಜ್ಯದ ಹಿತದ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ ಎಂದು ಕಿಡಿ ಕಾರಿದರು.
ಕುಮಾರಸ್ವಾಮಿ ಅವರು ನಿಮ್ಮ ಮೇಲೆ ವೈಯಕ್ತಿಕವಾಗಿ ದಾಳಿ ಮಾಡುತ್ತಿರುವುದೇಕೆ ಎಂದು ಕೇಳಿದಾಗ, "ಅಸೂಯೆ ಬಿಟ್ಟರೆ ಬೇರೇನೂ ಇಲ್ಲ. ಮೊದಲಿಂದಲೂ ಇದನ್ನೇ ಮಾಡಿಕೊಂಡು ಬಂದಿದ್ದಾರೆ. ಎಲ್ಲಾ ವಿಚಾರವನ್ನು ಬಹಿರಂಗವಾಗಿ ಚರ್ಚೆ ಮಾಡೋಣ ಬಾ ಎಂದು ಕರೆಯುತ್ತಿದ್ದೇನೆ. ಕಳೆದ ಬಾರಿ ಸದನದಲ್ಲಿ ಚರ್ಚೆಗೆ ಕರೆದಾಗಲೂ ಬರಲಿಲ್ಲ" ಎಂದು ತಿಳಿಸಿದರು.
ನಾನು ಯಾವುದೇ ತಪ್ಪು ಮಾಡಿಲ್ಲ:
ತಮ್ಮ ವಿರುದ್ಧದ ಸಿಬಿಐ ಪ್ರಕರಣ ರದ್ದು ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು "ಈಗಾಗಲೇ ಈ ಪ್ರಕರಣವನ್ನು ಲೋಕಾಯುಕ್ತ ಸಂಸ್ಥೆಗೆ ನೀಡಲಾಗಿದೆ. ಲೋಕಾಯುಕ್ತ ಸಂಸ್ಥೆ ತನಿಖೆ ನಡೆಸುತ್ತಿದೆ. ಆದರೂ ಸಿಬಿಐ ತಮ್ಮ ವ್ಯಾಪ್ತಿ ಮೀರಿ ಈ ಪ್ರಕರಣ ತನಿಖೆ ನಡೆಸಲು ಮುಂದಾಗಿರುವುದು ಏಕೆ ಎಂದು ಗೊತ್ತಿಲ್ಲ. ನಾನು ಯಾವುದೇ ತಪ್ಪು ಮಾಡಿಲ್ಲ. ಮುಂದಿನ ಒಂದೆರಡು ದಿನಗಳಲ್ಲಿ ಅವರ ಮುಂದೆ ಹೋಗಿ ನನ್ನ ವಿಚಾರ ತಿಳಿಸುತ್ತೇನೆ. ತನಿಖೆ ಹೆಸರಲ್ಲಿ ನನ್ನ ಜತೆ ವ್ಯವಹಾರ ಮಾಡಿದವರಿಗೆ ಕಿರುಕುಳ ನೀಡಿದ್ದಾರೆ" ಎಂದು ತಿಳಿಸಿದರು.