ಬೆಂಗಳೂರು: ವಾಲ್ಮೀಕಿ ನಿಗಮದಲ್ಲಿ ನಡೆದಿರುವ ಬಹುಕೋಟಿ ಅಕ್ರಮಗಳ ಕುರಿತು ಜಾರಿ ನಿರ್ದೇಶನಾಲಯದ (ಇಡಿ) ತನಿಖೆಯ ಹಳಿತಪ್ಪಿಸಲು ರಾಜ್ಯ ಸರ್ಕಾರ ಯತ್ನಿಸುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಬುಧವಾರ ಆರೋಪಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಾಲ್ಮೀಕಿ ನಿಗಮದಲ್ಲಿನ ಹಗರಣದ ಹಣವನ್ನು ಬೇರೆ ರಾಜ್ಯಗಳಿಗೆ ವರ್ಗಾವಣೆ ಮಾಡಲಾಗಿದ್ದು, ಇಡಿ ಪ್ರಕರಣದ ತನಿಖೆ ನಡೆಸುತ್ತಿದೆ. ಇದೀಗ ಹಗರಣ ಬಯಲಾದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆತಂಕಗೊಂಡಿದ್ದಾರೆಂದು ಹೇಳಿದರು.
ಇದೀಗ ಸರ್ಕಾರ ಇಡಿ ತನಿಖೆಯ ಹಳಿತಪ್ಪಿಸು ಯತ್ನ ನಡೆಸುತ್ತಿದೆ. ಇದು ಅಪರಾಧ. ಸಿಎಂ ಪ್ರಾಮಾಣಿಕರಾಗಿದ್ದರೆ ಇಡಿ ತನಿಖೆಗೆ ಸಹಕರಿಸಬೇಕು, ಆದರೆ, ಅವರ ನೇತೃತ್ವದಲ್ಲೇ ಕಾಂಗ್ರೆಸ್ ಮುಖಂಡರು ಇಡಿ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಮೂಲಕ ತನಿಖೆ ಹಾದಿ ತಪ್ಪಿಸಲು ಯತ್ನ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಹಗರಣದಲ್ಲಿ ಮಾಜಿ ಸಚಿವ ನಾಗೇಂದ್ರ ಮಾತ್ರವಲ್ಲ, ಕಾಂಗ್ರೆಸ್‌ನ ಹಲವು ಹಿರಿಯ ನಾಯಕರೂ ಭಾಗಿಯಾಗಿದ್ದು, ಅವರು ಕೂಡ ಕ್ರಮ ಎದುರಿಸಬೇಕಾಗುತ್ತದೆ. ವಾಲ್ಮೀಕಿ ನಿಗಮ ಹಗರಣ ಮತ್ತು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ನಿವೇಶನ ಹಂಚಿಕೆಯಲ್ಲಿ ನಡೆದಿರುವ ಅಕ್ರಮಗಳ ವಿರುದ್ಧ ಬಿಜೆಪಿ ಹೋರಾಟ ಮುಂದುವರಿಸಲಿದೆ ಇದೇ ವೇಳೆ ಪುನರುಚ್ಛರಿಸಿದರು.