ವಿಜಯಪುರ: ಪ್ರತಿಭಟನೆ ಇರಲಿ, ಮೊದಲು ನಿಮ್ಮ ಮೇಲಿನ ಆರೋಪದಿಂದ ಹೊರಬನ್ನಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ.ವಿಜಯೇಂದ್ರ ಅವರಿಗೆ ಸಚಿವ ಎಂಬಿ.ಪಾಟೀಲ್ ಅವರು ತಿರುಗೇಟು ನೀಡಿದ್ದಾರೆ.
ಮುಡಾದಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ಪ್ರತಿಭಟನೆ ನಡೆಸಲಿದೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿಕೆ ಬೆನ್ನಲ್ಲೇ ಎಂಬಿ.ಪಾಟೀಲ್ ತಿರುಗೇಟು ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೋವಿಡ್ -19 ನಿರ್ವಹಣೆಯಲ್ಲಿ ಭಾರಿ ಭ್ರಷ್ಟಾಚಾರ ನಡೆದಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಅವರು ಆರೋಪಿ ಮಾಡಿದ್ದಾರೆ. ವಿಜಯೇಂದ್ರ ಅವರು, ಮುಡಾ ಹಗರಣದ ಬಗ್ಗೆ ಮಾತನಾಡುವ ಬದಲು ಬಿಜೆಪಿ ಕಾಲದ ಹಗರಣಗಳ ಬಗ್ಗೆ ಮಾತನಾಡಲಿ. ಕೋವಿಡ್ ಹಗರಣದ ಬಗ್ಗೆ ಮಾತನಾಡಲಿ ಕೋವಿಡ್ ಹಗರಣದ ಬಗ್ಗೆ ಯತ್ನಾಳ್ ಹೇಳಿದ್ದಾರೆ. ಯತ್ನಾಳ್ ಆರೋಪದ ಬಗ್ಗೆ ಬಿಜೆಪಿ ಉತ್ತರಿಸಲಿ ಎಂದು ಹೇಳಿದರು.
ಬಿಎಸ್ ಯಡಿಯೂರಪ್ಪ ಹಾಗೂ ಅವರ ಪುತ್ರ ವಿಜಯೇಂದ್ರ ಮಾರಿಷಸ್ ನಲ್ಲಿ 10 ಸಾವಿರ ಕೋಟಿ ರೂ. ಹಣ ಇರಿಸಿದ್ದಾರೆಂದು ಯತ್ನಾಳ್ ಆರೋಪ ಮಾಡಿದ್ದಾರೆ. ಈ ಬಗ್ಗೆ ಉತ್ತರ ನೀಡಿದ ಬಳಿಕ ವಿಜಯೇಂದ್ರ ನಮ್ಮ ಪಕ್ಷದ ವಿರುದ್ಧ ಪಾದಯಾತ್ರೆ ಹೋರಾಟ ಮಾಡಲಿ ಎಂದು ಕುಟುಕಿದರು.