ನವದೆಹಲಿ: ಹೊಸ ಎನ್‌ಡಿಎ ಸರ್ಕಾರದಲ್ಲಿ ಕೃಷಿ ಖಾತೆ ವಹಿಸಿಕೊಳ್ಳುವ ಬಗ್ಗೆ ತಮ್ಮ ಪಕ್ಷ ಆಸಕ್ತಿ ಹೊಂದಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಮತ್ತು ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಬುಧವಾರ ಸುಳಿವು ನೀಡಿದ್ದಾರೆ.
ಕುಮಾರಸ್ವಾಮಿ ಅವರ ತಂದೆ ಮತ್ತು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ನೇತೃತ್ವದ ಜೆಡಿಎಸ್ ಕಳೆದ ವರ್ಷ ಎನ್‌ಡಿಎ ಸೇರಿತ್ತು.
ಒಟ್ಟು 28 ಸ್ಥಾನಗಳನ್ನು ಹೊಂದಿರುವ ಕರ್ನಾಟಕದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಒಟ್ಟಾಗಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದವು. ಬಿಜೆಪಿ 17 ಮತ್ತು ಜೆಡಿಎಸ್ ಎರಡು ಸ್ಥಾನಗಳನ್ನು ಗೆದ್ದಿದೆ.
ಸರ್ಕಾರ ರಚನೆಗೆ ಮುನ್ನ ಜೆಡಿಎಸ್‌ನ ಬೇಡಿಕೆಗಳ ಕುರಿತು ವರದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮಾಜಿ ಸಿಎಂ, "ನಮ್ಮಲ್ಲಿ ಅಂತಹ ಯಾವುದೇ ಬೇಡಿಕೆ ಇಲ್ಲ. ಬಹುಕಾಲದಿಂದ ಇರುವ ಕರ್ನಾಟಕದ ಸಮಸ್ಯೆಗಳ ಪರಿಹಾರ ನಮ್ಮ ಆದ್ಯತೆಯಾಗಿದೆ. ಪ್ರಾತಿನಿಧ್ಯ ನೀಡುವ ಬಗ್ಗೆ (ಕೇಂದ್ರದಲ್ಲಿ ಕರ್ನಾಟಕಕ್ಕೆ ಕ್ಯಾಬಿನೆಟ್ ಸ್ಥಾನ) ನರೇಂದ್ರ ಮೋದಿ ನಿರ್ಧರಿಸುತ್ತಾರೆ ಎಂದರು.
ತಾವು ಕೇಂದ್ರ ಸಚಿವ ಸ್ಥಾನದ ಆಕಾಂಕ್ಷಿಯಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಈ ಬಗ್ಗೆ ಎನ್‌ಡಿಎ ನಾಯಕತ್ವ ನಿರ್ಧರಿಸಲಿದೆ ಎಂದು ಹೇಳಿದ್ದಾರೆ.
ತಾವು ಕೃಷಿ ಸಚಿವರಾಗುತ್ತಾರೆ ಎಂಬ ಊಹಾಪೋಹಗಳ ಬಗ್ಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಇತರ ಹಲವಾರು ಜೆಡಿ(ಎಸ್) ನಾಯಕರು ಇದೇ ರೀತಿಯ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ಎನ್ ಡಿಎ ನಾಯಕತ್ವ ಏನು ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡೋಣ ಎಂದು ಹೇಳುವ ಮೂಲಕ ಅವರು ತಮ್ಮ ಪಕ್ಷದ ಆಸಕ್ತಿ ಕೃಷಿ ಇಲಾಖೆಯಲ್ಲಿದೆ ಎಂದು ಒಪ್ಪಿಕೊಂಡರು.
ನಮ್ಮ ಪಕ್ಷದ ಹಿತಾಸಕ್ತಿ ಕೃಷಿ ಇಲಾಖೆಯಲ್ಲಿದೆ. ಮೊದಲಿನಿಂದಲೂ ನಮ್ಮ ಹೋರಾಟ ರೈತ ಸಮುದಾಯಕ್ಕೆ ಒಳಿತು ಮಾಡುವತ್ತ ಸಾಗಿದೆ ಎಂದು ಇಂದಿನ ಎನ್‌ಡಿಎ ಸಭೆಯಲ್ಲಿ ಭಾಗವಹಿಸಲು ದೆಹಲಿಗೆ ಆಗಮಿಸಿದ ಕುಮಾರಸ್ವಾಮಿ ಸುದ್ದಿಗಾರರಿಗೆ ತಿಳಿಸಿದ್ದಾರೆ.