ಜೆಪಿ ನಡ್ಡಾ
ಜೆಪಿ ನಡ್ಡಾ 
ರಾಜಕೀಯ

'ಪಾಕ್ ಪರ ಘೋಷಣೆ': ಕಾಂಗ್ರೆಸ್ ನಾಯಕರು ನೆರೆ ದೇಶದ ಪ್ರತಿನಿಧಿಗಳೇ? ಜೆಪಿ ನಡ್ಡಾ ವಾಗ್ದಾಳಿ

Ramyashree GN

ಚಿಕ್ಕೋಡಿ: 'ಪಾಕಿಸ್ತಾನ ಪರ ಘೋಷಣೆ' ವಿಚಾರದಲ್ಲಿ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಮತ್ತು ನಾಯಕರನ್ನು ಗುರಿಯಾಗಿಸಿಕೊಂಡ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಕಾಂಗ್ರೆಸ್ ನಾಯಕರು ಪಾಕಿಸ್ತಾನದ ಭಾಷೆಯನ್ನು ಮಾತನಾಡಲು ಪಕ್ಷವನ್ನು ನಡೆಸುತ್ತಿದ್ದಾರೆಯೇ ಮತ್ತು ಅವರು ಭಾರತದಲ್ಲಿ ನೆರೆಯ ದೇಶದ ಪ್ರತಿನಿಧಿಗಳಾಗಿದ್ದಾರೆಯೇ ಎಂದು ಮಂಗಳವಾರ ಪ್ರಶ್ನಿಸಿದ್ದಾರೆ.

ಫೆಬ್ರುವರಿ 27 ರಂದು ರಾಜ್ಯಸಭೆಯ ಫಲಿತಾಂಶ ಪ್ರಕಟವಾದ ನಂತರ ಕಾಂಗ್ರೆಸ್​ ಅಭ್ಯರ್ಥಿ ನಾಸಿರ್ ಹುಸೇನ್ ಗೆಲುವು ಸಾಧಿಸಿದ್ದರು. ಈ ಖುಷಿಯಲ್ಲಿ ಅವರ ಬೆಂಬಲಿಗರು ವಿಧಾನಸೌಧದ ಹೊರಗಡೆ ನಡೆಸಿದ ಸಂಭ್ರಮಾಚರಣೆ ವೇಳೆ ಆರೋಪಿಗಳು 'ಪಾಕಿಸ್ತಾನ ಜಿಂದಾಬಾದ್' ಘೋಷಣೆಗಳನ್ನು ಕೂಗಿದ್ದರು ಎಂಬ ಆರೋಪಗಳು ಕೇಳಿಬಂದಿವೆ.

ಘಟನೆಯ ಉದ್ದೇಶಿತ ವಿಡಿಯೋವನ್ನು ಸುದ್ದಿ ವಾಹಿನಿಗಳು ಪ್ರಸಾರ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಎಫ್‌ಎಸ್‌ಎಲ್ ವರದಿಯು ಪಾಕ್ ಪರ ಘೋಷಣೆಗಳನ್ನು ಕೂಗಲಾಗಿದೆ ಎಂದು ದೃಢಪಡಿಸಿದ ನಂತರ ಸೋಮವಾರ ಪೊಲೀಸರು ಘಟನೆಗೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಿದ್ದಾರೆ.

ಇಲ್ಲಿ ಬೂತ್ ಮಟ್ಟದ ಪಕ್ಷದ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ನಡ್ಡಾ, 'ವಿಧಾನಸಭಾ ಚುನಾವಣೆಯ ಫಲಿತಾಂಶಗಳು ನಮ್ಮ ಪರವಾಗಿ ಬಂದಿಲ್ಲ. ಆದರೆ, ಅವರು ಆಯ್ಕೆ ಮಾಡಿದ ಸರ್ಕಾರವು ತಮಗೆ ಹೇಗೆ ಮೋಸ ಮಾಡುತ್ತಿದೆ ಮತ್ತು ದಾರಿ ತಪ್ಪಿಸುತ್ತಿದೆ ಮತ್ತು ತಮ್ಮ ಹಿತಾಸಕ್ತಿಗಾಗಿ ಜನರ ಹಿತಾಸಕ್ತಿಗಳನ್ನು ಹೇಗೆ ಲೂಟಿ ಮಾಡಿದೆ ಎಂಬುದನ್ನು ಇಷ್ಟೊತ್ತಿಗೆ ಕರ್ನಾಟಕದ ಜನರು ಅರಿತುಕೊಂಡಿರಬಹುದು. ಕರ್ನಾಟಕದಲ್ಲಿ ಏನಾದರೂ ಉಚಿತವಾಗಿ ಲಭ್ಯವಿದ್ದರೆ ಅದು ಭಯೋತ್ಪಾದನೆಯಾಗಿದ್ದು, ಭಯೋತ್ಪಾದಕರಿಗೆ ಪ್ರೋತ್ಸಾಹ ಸಿಗುತ್ತಿದೆ' ಎಂದು ಆರೋಪಿಸಿದರು.

'ಎಂತಹ ಪರಿಸ್ಥಿತಿ ಬಂದಿದೆ, ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆಗಳು ಮೊಳಗಿದವು, ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಮೂಕಪ್ರೇಕ್ಷಕರಾಗಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಇದೇ ಕರ್ನಾಟಕದವರಲ್ಲವೇ? ಖರ್ಗೆ ಅವರ ಪಕ್ಕದಲ್ಲಿ ಕುಳಿತ ರಾಜ್ಯಸಭಾ ಸದಸ್ಯರ ಗೆಲುವಿನ ಸಂಭ್ರಮಾಚರಣೆಯಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆಗಳನ್ನು ಕೂಗಲಾಗಿದೆ' ಎಂದು ಅವರು ಹೇಳಿದರು.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ 'ಭಾರತ್ ಜೋಡೋ ಯಾತ್ರೆ'ಯನ್ನು ಉಲ್ಲೇಖಿಸಿದ ನಡ್ಡಾ, 'ಇದು ನೀವು ಭಾರತವನ್ನು ಒಗ್ಗೂಡಿಸುವ ವಿಧಾನವೇ? ನಿಮ್ಮ ಸಂಸದರು ಚುನಾವಣೆಯಲ್ಲಿ ಗೆಲ್ಲುತ್ತಾರೆ ಮತ್ತು ಅವರ ವಿಜಯದ ಸಂಭ್ರಮಾಚರಣೆ ಸಮಯದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆಗಳು ಮೊಳಗಿದವು. ನೀವು ಯಾರನ್ನು ಪ್ರತಿನಿಧಿಸುತ್ತಿದ್ದೀರಿ? ಖರ್ಗೆ ಜೀ ಏಕೆ ಮೌನವಾಗಿದ್ದೀರಿ? ರಾಷ್ಟ್ರವು ತಿಳಿದುಕೊಳ್ಳಲು ಬಯಸುತ್ತಿದೆ, ಕರ್ನಾಟಕದ ಜನರು ಕೇಳುತ್ತಿದ್ದಾರೆ’ ಎಂದು ಪ್ರಶ್ನಿಸಿದರು.

'ನೀವು ಪಾಕಿಸ್ತಾನಕ್ಕೆ ಸಹಾಯ ಮಾಡಲು ಹುಟ್ಟಿದ್ದೀರಾ? ನೀವು ಪಾಕಿಸ್ತಾನದ ಭಾಷೆಯನ್ನು ಮಾತನಾಡಲು ಪಕ್ಷವನ್ನು ನಡೆಸುತ್ತಿದ್ದೀರಾ? ನೀವು ಭಾರತದಲ್ಲಿ ಪಾಕಿಸ್ತಾನದ ಪ್ರತಿನಿಧಿಗಳೇ? ಎಂಬುದು ನನಗೆ ತಿಳಿಯಬೇಕು, ಈ ಪ್ರಶ್ನೆಗಳಇಗೆ ಉತ್ತರಗಳು ಬೇಕಾಗಿವೆ' ಎಂದು ಅವರು ಪ್ರಶ್ನಿಸಿದರು.

ಬಿಜೆಪಿ ಕರ್ನಾಟಕ ಉಸ್ತುವಾರಿ ರಾಧಾಮೋಹನ್ ದಾಸ್ ಅಗರವಾಲ್, ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ಸೇರಿದಂತೆ ಇತರರು ಉಪಸ್ಥಿತರಿದ್ದರು.

SCROLL FOR NEXT