ಸುಮಲತಾ ಅಂಬರೀಷ್
ಸುಮಲತಾ ಅಂಬರೀಷ್ 
ರಾಜಕೀಯ

ಮಂಡ್ಯ ಲೋಕಸಭೆ ಕ್ಷೇತ್ರ ಹಂಚಿಕೆ ಬಿಕ್ಕಟ್ಟು: ಬಿಜೆಪಿ ಟಿಕೆಟ್ ಗಾಗಿ ಸುಮಲತಾ ಪಟ್ಟು; ದಳಪತಿಗಳು ಸೈಲೆಂಟ್- ಏನಿದರ ಗುಟ್ಟು?

Shilpa D

ಮಂಡ್ಯ: ಮಂಡ್ಯ ಲೋಕಸಭೆ ಟಿಕೆಟ್ ಹಂಚಿಕೆ ಸಂಬಂಧ ಸ್ವತಂತ್ರ ಸಂಸದೆ ಸುಮಲತಾ ಹಾಗೂ ಜೆಡಿಎಸ್ ನಾಯಕರು ಬಿಜೆಪಿ ಹೈಕಮಾಂಡ್ ನಿರ್ಧಾರಕ್ಕೆ ಎದುರು ನೋಡುತ್ತಿದ್ದಾರೆ.

ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಬಯಸುವುದಾಗಿ ಬಿಜೆಪಿ ಹೈಕಮಾಂಡ್ ಗೆ ತಿಳಿಸಿದೆ, ಬಹುಭಾಷಾ ನಟಿ-ರಾಜಕಾರಣಿ ಸುಮಲತಾ ಕೂಡ ತಮ್ಮ ರಾಷ್ಟ್ರೀಯ ಪಕ್ಷದ ಟಿಕೆಟ್‌ನಲ್ಲಿ ಸ್ಪರ್ಧಿಸಲು ಬಯಸಿದ್ದಾರೆ.

ಬೆಂಗಳೂರು ಮತ್ತು ಮೈಸೂರು ನಡುವೆ ಇರುವ ಈ ಕ್ಷೇತ್ರದಲ್ಲಿ ಜೆಡಿ(ಎಸ್) ಪ್ರಾಬಲ್ಯವಿದೆ. ಮಂಡ್ಯ ಕ್ಷೇತ್ರದಲ್ಲಿ ಬಹುತೇಕ ಒಕ್ಕಲಿಗ ಸಮುದಾಯದ ಪ್ರಾಬಲ್ಯ ಹೊಂದಿದೆ. ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ನೇತೃತ್ವದ ಪಕ್ಷವು ಈಗಾಗಲೇ ಅಭ್ಯರ್ಥಿಯನ್ನು ನಿರ್ಧರಿಸಲು ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ಹಲವು ಸುತ್ತಿನ ಸಭೆಗಳನ್ನು ನಡೆಸಿದೆ.

2019 ರಲ್ಲಿ, 'ಸಕ್ಕರೆ ನಾಡು' ಮಂಡ್ಯದಲ್ಲಿ ಕಾಂಗ್ರೆಸ್-ಜೆಡಿ (ಎಸ್) ಮೈತ್ರಿಕೂಟದ ಜಂಟಿ ಅಭ್ಯರ್ಥಿಯಾಗಿದ್ದ ಅಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಅವರನ್ನು ಸುಮಲತಾ ಸೋಲಿಸಿದ್ದರು. ಮಂಡ್ಯ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವಿನ ಪೈಪೋಟಿಗೆ ಹೆಸರುವಾಸಿಯಾಗಿದೆ. ಬಿಜೆಪಿ ಕೂಡ ಇಲ್ಲಿ ಕಾಲಿಡಲು ಹಲವು ವರ್ಷಗಳಿಂದ ಪ್ರಯತ್ನ ನಡೆಸುತ್ತಿದೆ.

ಸುಮಲತಾ ಅವರು 2019 ರಲ್ಲಿ ತಮ್ಮ ಪತಿ ಮತ್ತು ಜನಪ್ರಿಯ ಚಲನಚಿತ್ರ ನಟ ಎಂ ಹೆಚ್ ಅಂಬರೀಶ್ ನಿಧನದ ನಂತರ ರಾಜಕೀಯಕ್ಕೆ ಬಂದು ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಆ ಚುನಾವಣೆಯಲ್ಲಿ ದೇವೇಗೌಡರ ಮೊಮ್ಮಗ ಜೆಡಿಎಸ್‌ನ ನಿಖಿಲ್ ಕುಮಾರಸ್ವಾಮಿ ಅವರನ್ನು 1,25,876 ಮತಗಳ ಅಂತರದಿಂದ ಸೋಲಿಸಿದ್ದರು.

ಆದರೆ, ಈ ಬಾರಿ ಮಂಡ್ಯ ಕ್ಷೇತ್ರವನ್ನು ಬಿಜೆಪಿ ತನ್ನ ಮೈತ್ರಿಕೂಟಕ್ಕೆ ಬಿಟ್ಟುಕೊಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ, ಸುಮಲತಾ ಅವರಿಗೆ ಟಿಕೆಟ್ ನೀಡುವಂತೆ ಅನೇಕ ಸ್ಥಳೀಯ ನಾಯಕರು ಬೆಂಬಲಿಸಿದ್ದಾರೆ ಜೊತೆಗೆ ಜೆಡಿಎಸ್‌ಗೆ ಸ್ಥಾನ ನೀಡುವ ಕ್ರಮವನ್ನು ವಿರೋಧಿಸಿದ್ದಾರೆ.

ಮಂಡ್ಯದಿಂದ ಕುಮಾರಸ್ವಾಮಿ ಸ್ಪರ್ಧಿಸುವಂತೆ ಒತ್ತಡವಿದ್ದರೂ ಮಾಜಿ ಸಚಿವ ಹಾಗೂ ಮಾಜಿ ಸಂಸದ ಸಿ.ಎಸ್.ಪುಟ್ಟರಾಜು ಅವರಿಗೆ ಟಿಕೆಟ್ ಸಿಗಬಹುದು ಎಂದು ಪಕ್ಷದ ಮೂಲಗಳು ತಿಳಿಸಿವೆ. ಮಂಡ್ಯ ಟಿಕೆಟ್ ಯಾರಿಗೆ ಎಂಬ ಬಗ್ಗೆ ಹೆಚ್ಚು ಪ್ರತಿಕ್ರಿಯಿಸಲು ಬಯಸದ ಕುಮಾರಸ್ವಾಮಿ, ಬಿಜೆಪಿ ಹೈಕಮಾಂಡ್ ನಿರ್ಧಾರ ಪ್ರಕಟಿಸುತ್ತದೆ ಎಂದು ಹೇಳಿ ಸುಮ್ಮನಾಗಿದ್ದಾರೆ.

ಸುಮಲತಾ ಕೂಡ ಬಿಜೆಪಿ ಕೇಂದ್ರ ನಾಯಕತ್ವದಲ್ಲಿ ವಿಶ್ವಾಸವಿಟ್ಟು ಮಂಡ್ಯದಿಂದ ಟಿಕೆಟ್ ಪಡೆಯುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಸೇರಿದಂತೆ ಪಕ್ಷದ ವರಿಷ್ಠರನ್ನು ಭೇಟಿ ಮಾಡಿದ್ದರು. ಬಿಜೆಪಿ ಹೈಕಮಾಂಡ್ ಹೇಳಬೇಕು, ಅವರೇ ನಿರ್ಧಾರ ತೆಗೆದುಕೊಳ್ಳಬೇಕು, ಮಂಡ್ಯ ಬಿಡುವುದಿಲ್ಲ ಎಂಬ ನನ್ನ ನಿರ್ಧಾರ ಯಾವಾಗಲೂ ಬಲವಾಗಿರುತ್ತದೆ ಎಂದು ಸುಮಲತಾ ಹೇಳಿದ್ದಾರೆ.

ಬಿಜೆಪಿ ಟಿಕೆಟ್ ನಿರಾಕರಿಸಿದರೂ ಸ್ಪರ್ಧಿಸುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಸುಮಲತಾ ಒಂದೆರಡು ಅಥವಾ ಗರಿಷ್ಠ ಒಂದು ವಾರ ಕಾಯಿರಿ, ಎಲ್ಲವೂ ನಿಮ್ಮ ಮುಂದೆ ಬರಲಿದೆ, ಆಮೇಲೆ ಮಾತನಾಡೋಣ, ಬಿಜೆಪಿ ಸಂಸದೆಯಾಗಬೇಕೆಂಬುದು ನನ್ನ ಆಸೆ ಎಂದರು. ಬಿಜೆಪಿ, ಮಂಡ್ಯ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟರೆ, ಕಾಂಗ್ರೆಸ್ ಟಿಕೆಟ್ ನಿರಾಕರಿಸಿ ಜೆಡಿಎಸ್‌ಗೆ ನೀಡಿದ ನಂತರ 2019 ರಲ್ಲಿ ಮಾಡಿದಂತೆ ಸುಮಲತಾ ಮತ್ತೊಮ್ಮೆ ಸ್ವತಂತ್ರವಾಗಿ ಸ್ಪರ್ಧಿಸುತ್ತಾರೆಯೇ ಎಂದು ನೋಡಬೇಕು.

SCROLL FOR NEXT