ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ 
ರಾಜಕೀಯ

ಒಂದೇ ದಿನದಲ್ಲಿ ಬಿಜೆಪಿ ಖಜಾನೆಗೆ 335 ಕೋಟಿ ರೂ. ಹೇಗೆ ಬಂತು ಎಂಬುದನ್ನು ಜನತೆಗೆ ತಿಳಿಸಲಿ: ಖರ್ಗೆ ಆಗ್ರಹ

Lingaraj Badiger

ಕಲಬುರಗಿ: ಲೋಕಸಭೆ ಚುನಾವಣೆ ಘೋಷಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದ್ದು, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಜನತೆಗೆ ಹಲವು ‘ಗ್ಯಾರೆಂಟಿ’ಗಳನ್ನು ನೀಡುವುದಾಗಿ ಬುಧವಾರ ಘೋಷಿಸಿದೆ.

ಇಂದು ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ವತಿಯಿಂದ ಆಯೋಜಿಸಿದ್ದ ಕಲಬುರಗಿ ಜಿಲ್ಲೆಯ ಐದು ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶ ಉದ್ದೇಶಿಸಿ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಾರ್ವಜನಿಕರಿಗೆ ನೀಡಿದ್ದ ಎಲ್ಲ ಆಶ್ವಾಸನೆಗಳನ್ನು ನಾವು ಈಡೇರಿಸಿದ್ದೇವೆ. ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕರ್ನಾಟಕದ ಜನತೆಗೆ 5 ಭರವಸೆಗಳನ್ನು ನೀಡಲಾಗಿತ್ತು ಮತ್ತು ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಎಲ್ಲಾ ಭರವಸೆಗಳನ್ನು ಈಡೇರಿಸಿದ್ದೇವೆ ಎಂದರು.

ಕಾಂಗ್ರೆಸ್ ರೈತರು ಮತ್ತು ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಿರುವುದರಿಂದ ಕೇಂದ್ರದಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಎಂಎಸ್‌ಪಿಯನ್ನು ಕಾನೂನುಬದ್ಧಗೊಳಿಸುವ ಭರವಸೆ ನೀಡುತ್ತೇವೆ ಎಂದು ಖರ್ಗೆ ಹೇಳಿದರು.

"ಮಹಾಲಕ್ಷ್ಮಿ" ಗ್ಯಾರಂಟಿ ಯೋಜನೆ ಅಡಿ ದೇಶದ ಪ್ರತಿ ಬಡ ಕುಟುಂಬದ ಒಬ್ಬ ಮಹಿಳೆಗೆ ವಾರ್ಷಿಕವಾಗಿ 1 ಲಕ್ಷ ರೂ. ವರ್ಗಾವಣೆ ಮಾಡಲಾಗುವುದು. ಇದಲ್ಲದೆ, "ಆದಿ ಆಬಾದಿ, ಪುರ ಹಕ್" ಅಡಿಯಲ್ಲಿ ಕೇಂದ್ರ ಸರ್ಕಾರಿ ಉದ್ಯೋಗಗಳಲ್ಲಿ ಎಲ್ಲಾ ಹೊಸ ನೇಮಕಾತಿಗಳಲ್ಲಿ ಶೇಕಡಾ 50 ರಷ್ಟು ಮಹಿಳೆಯರಿಗೆ ಮೀಸಲಿಡಲಾಗುವುದು ಎಂದು ಖರ್ಗೆ ತಿಳಿಸಿದರು.

ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ನೀಡಲಾದ 5 ಭರವಸೆಗಳನ್ನು ಕರ್ನಾಟಕ ಸರ್ಕಾರ ಜಾರಿಗೊಳಿಸಿರುವುದಕ್ಕೆ ಖರ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಬಿಜೆಪಿ ನಮ್ಮ ಖಾತ್ರಿಯನ್ನು ನಕಲು ಮಾಡುತ್ತಿದೆ ಎಂದು ಕಿಡಿಕಾರಿದ ಖರ್ಗೆ, ಲೋಕಸಭೆ ಚುನಾವಣೆ ಸಂದರ್ಭದಲ್ಲಿಯೂ ನರೇಂದ್ರ ಮೋದಿ ಮತದಾರರಿಗೆ ಪ್ರತಿಯೊಬ್ಬರಿಗೂ 15 ಲಕ್ಷ ಮತ್ತು ಪ್ರತಿ ವರ್ಷ 2 ಕೋಟಿ ಉದ್ಯೋಗ ನೀಡುವುದಾಗಿ ಭರವಸೆ ನೀಡಿದರು. ಆ ಭರವಸೆಗಳು ಏನಾಯಿತು ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಅಧಿಕಾರಕ್ಕೆ ಬರುವುದನ್ನು ತಡೆಯಲು ಕೇಂದ್ರ ಸರ್ಕಾರ ತನ್ನ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡು ನಮ್ಮ ಬ್ಯಾಂಕ್ ಖಾತೆಗಳನ್ನು ವಶಪಡಿಸಿಕೊಂಡಿದೆ. ಆದರೆ ಜನರೇ ನಮ್ಮ ಸಂಪತ್ತು ಎಂದ ಖರ್ಗೆ, ಒಂದೇ ದಿನದಲ್ಲಿ ಬಿಜೆಪಿ ಖಜಾನೆಗೆ 335 ಕೋಟಿ ರೂ. ಹೇಗೆ ಬಂತು ಎಂಬುದನ್ನು ಜನತೆಗೆ ತಿಳಿಸಲಿ ಎಂದು ಆಗ್ರಹಿಸಿದರು.

SCROLL FOR NEXT