ರಾಜಕೀಯ

Lok Sabha election 2024: ಮೈಸೂರು-ಕೊಡಗು ಕ್ಷೇತ್ರದಲ್ಲಿ 25 ವರ್ಷಗಳ ನಂತರ ರಾಜಕೀಯ ಭೂಮಿಕೆಗೆ ಒಡೆಯರ್ ಕುಟುಂಬ!

Sumana Upadhyaya

ಮೈಸೂರು: ಅರಮನೆಗಳ ನಗರಿ ಮೈಸೂರು ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದ್ದು, ಎರಡು ದಶಕಗಳ ನಂತರ ರಾಜಮನೆತನದ ಒಡೆಯರ್ ಕುಟುಂಬ ರಾಜಕೀಯ ಮುಖ್ಯ ಭೂಮಿಕೆಗೆ ಬರುತ್ತಿರುವುದು ರಾಜಕೀಯ ಪಂಡಿತರ ಕುತೂಹಲಕ್ಕೆ ಕಾರಣವಾಗಿದೆ.

ಮೈಸೂರು ರಾಜಮನೆತನದ ವಂಶಸ್ಥರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮತ್ತು ಕಾಂಗ್ರೆಸ್ ನಾಯಕ ಎಂ ಲಕ್ಷ್ಮಣ -- ರಾಜಮನೆತನ ಮತ್ತು ಸಾಮಾನ್ಯರ ನಡುವಿನ ಚುನಾವಣಾ ಹೋರಾಟವು ಸಾಮಾಜಿಕ ಮತ್ತು ರಾಜಕೀಯ ಗಣಿತದ ಲೆಕ್ಕಾಚಾರ ಮಾಡುತ್ತಿದೆ.

ಎರಡು ಬಾರಿ ಸಂಸದರಾಗಿದ್ದ ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ನಿರಾಕರಿಸಿ ಸಾಂಸ್ಕೃತಿಕ ಜಿಲ್ಲೆಯಲ್ಲಿ ರಾಜಕೀಯ ತಂತ್ರಗಾರಿಕೆಯನ್ನು ಮರುರಚಿಸುವ ಉದ್ದೇಶದಿಂದ 32 ವರ್ಷದ ಯದುವೀರ್ ಅವರನ್ನು ರಾಜಕೀಯ ಅಂಗಳಕ್ಕೆ ಕರೆತರುವಲ್ಲಿ ಮನವೊಲಿಸುವಲ್ಲಿ ಬಿಜೆಪಿ ಯಶಸ್ವಿಯಾಗಿದೆ.

ಜಿಲ್ಲೆಯ ಪ್ರಬಲವಾದ ಒಕ್ಕಲಿಗ ಸಮುದಾಯವು ಹಿಂದಿನ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಂಬಲಿಸಿದೆ ಎಂದು ಅರಿತುಕೊಂಡ ಕಾಂಗ್ರೆಸ್ ಈ ಬಾರಿ 47 ವರ್ಷಗಳ ಒಕ್ಕಲಿಗ ಸಮುದಾಯದ ಎಂ.ಲಕ್ಷ್ಮಣ ಅವರನ್ನು ಕಣಕ್ಕಿಳಿಸುವ ಮೂಲಕ ಸಮುದಾಯ ಒಲೈಕೆಗೆ ಮುಂದಾಗಿದೆ.

ಕಾಂಗ್ರೆಸ್ ಈಗಾಗಲೇ ಅಲ್ಪಸಂಖ್ಯಾತರು, ದಲಿತರು, ಕುರುಬರು ಮತ್ತು ಸೂಕ್ಷ್ಮ ಹಿಂದುಳಿದ ಸಮುದಾಯಗಳ ಬೆಂಬಲವನ್ನು ಹೊಂದಿದೆ. ಇದು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕೂಡ ಸಾಬೀತಾಗಿದೆ. ಬಿಜೆಪಿಯ ಭದ್ರಕೋಟೆಯಾಗಿರುವ ಕೊಡಗು ಜಿಲ್ಲೆಯಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದ್ದು, ಹಿಂದಿನ ಚುನಾವಣೆಯಲ್ಲಿ ಪಕ್ಷಕ್ಕೆ ಭಾರೀ ಮುನ್ನಡೆ ತಂದುಕೊಟ್ಟಿದ್ದರಿಂದ ಈ ಬಾರಿಯ ಮೈಸೂರು-ಕೊಡಗು ಲೋಕಸಭಾ ಚುನಾವಣೆ ಕದನ ಕುತೂಹಲ ಕೆರಳಿಸಿದೆ.

ಪ್ರತಿಪಕ್ಷಗಳನ್ನು ಸಮರ್ಥವಾಗಿ ಎದುರಿಸಲು, ತಾನು ರಾಜಮನೆತನದವರಾಗಿದ್ದರೂ ಜನಸಾಮಾನ್ಯರಂತೆ ಎಂದು ಹೇಳಿಕೊಳ್ಳುತ್ತಿರುವ ಯದುವೀರ್ ಒಡೆಯರ್, ಕಾಂಗ್ರೆಸ್ ಅವರ ರಾಜಮನೆತನದ ಹಿನ್ನೆಲೆ ಜನಸಾಮಾನ್ಯರಿಂದ ಅಂತರ ಇರುವ ವಿಷಯವನ್ನೇ ಚುನಾವಣೆಯಲ್ಲಿ ಪ್ರಮುಖ ಅಸ್ತ್ರವಾಗಿ ಬಳಸಿಕೊಳ್ಳಲು ನೋಡುತ್ತಿದೆ.

ಆದರೆ ಮೈಸೂರಿನಲ್ಲಿ ಪ್ರಬಲ ಅಸ್ತಿತ್ವ ಹೊಂದಿರುವ, ಎರಡು ವಿಧಾನಸಭಾ ಸ್ಥಾನಗಳನ್ನು ಗೆದ್ದು ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಎರಡನೇ ಸ್ಥಾನ ಪಡೆದಿರುವ ಜೆಡಿಎಸ್‌ನೊಂದಿಗೆ ಈ ಬಾರಿ ಬಿಜೆಪಿ ಮೈತ್ರಿ ಮಾಡಿಕೊಂಡಿರುವುದು ಕಾಂಗ್ರೆಸ್ ನ್ನು ಕಂಗೆಡಿಸಿರುವುದು ಸುಳ್ಳಲ್ಲ. ಎರಡೂ ಪಕ್ಷಗಳ ಕಾರ್ಯಕರ್ತರ ನಡುವೆ ಉತ್ತಮ ಹೊಂದಾಣಿಕೆ ಮತ್ತು ಮತಗಳ ವರ್ಗಾವಣೆಯು ಕಾಂಗ್ರೆಸ್‌ನ ನಾಯಕರ ಚಿಂತೆಯನ್ನು ಹೆಚ್ಚಿಸಿದೆ.

ಒಕ್ಕಲಿಗ ಮತ ನಿರ್ಣಾಯಕ: ಮೈಸೂರು-ಕೊಡಗು ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಐದರಲ್ಲಿ ಗೆದ್ದಿರುವ ಕಾಂಗ್ರೆಸ್, ಒಕ್ಕಲಿಗ ಮತಗಳ ಜೊತೆ ಆಟವಾಡುತ್ತಿದೆ. ಒಕ್ಕಲಿಗ ಸಮುದಾಯದ ಮತಗಳು ತಮ್ಮ ಪರವಾಗಿ ಸಿಗಲು ಸಾಕಷ್ಟು ಪ್ರಯತ್ನ ಮಾಡುತ್ತಿದೆ.

ಇತ್ತೀಚೆಗೆ ಖಾಸಗಿ ರೆಸಾರ್ಟ್‌ನಲ್ಲಿ ಬಿಡುವಿನ ವೇಳೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರಣಿ ಸಭೆ ನಡೆಸಿ ಕಾಂಗ್ರೆಸ್ ನಿಷ್ಠಾವಂತ ಕಾರ್ಯಕರ್ತ ಲಕ್ಷ್ಮಣ ಅವರನ್ನು ಗೆಲ್ಲಿಸುವಂತೆ ಮನವಿ ಮಾಡಿದರು. ರಾಜಮನೆತನದ ಅಭ್ಯರ್ಥಿಯ ಮೇಲೆ ಆಕ್ರಮಣಕಾರಿಯಾಗಿ ಅವರನ್ನು ಗುರಿಯಾಗಿಸಿಕೊಂಡು ದಾಳಿ ಮಾಡಬೇಡಿ ಎಂದು ಅವರು ಪಕ್ಷದ ನಾಯಕರಿಗೆ ಸಲಹೆ ನೀಡಿದ್ದಾರೆ, “ಪ್ರಜಾಪ್ರಭುತ್ವದಲ್ಲಿ ರಾಜರಿಲ್ಲ. ಯದುವೀರ್ ಕೇವಲ ಬಿಜೆಪಿ ಅಭ್ಯರ್ಥಿ, ಹಾಗೆಂದು ಯದುವೀರ್ ಅವರನ್ನು ಗುರಿಯಾಗಿಸಿ ವಾಗ್ದಾಳಿ ನಡೆಸಿದರೆ ಅದನ್ನು ಬಿಜೆಪಿ ರಾಜಕೀಯ ಲಾಭ ಮಾಡಿಕೊಳ್ಳುವ ಸಾಧ್ಯತೆ ಇದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಕಾಂಗ್ರೆಸ್ ನ್ನು ಎದುರಿಸಲು ಬಿಜೆಪಿಯು ಒಕ್ಕಲಿಗರು ಮತ್ತು ಎಸ್‌ಟಿಗಳ ಸಮಾವೇಶಗಳನ್ನು ನಡೆಸಿದೆ. ಈ ಮಧ್ಯೆ ಯದುವೀರ್ ಒಡೆಯರ್ ಅವರು ಧಾರಾಳವಾಗಿ ಜನರು ಮತ್ತು ಕಾರ್ಯಕರ್ತರೊಂದಿಗೆ ಬೆರೆಯಲು ಪ್ರಯತ್ನಿಸುತ್ತಿರುವುದು ನಾಯಕ ಸಮುದಾಯ, ದಲಿತರು ಮತ್ತು ಇತರ ಮತದಾರರಲ್ಲಿ ಹುಮ್ಮಸ್ಸು ಮೂಡಿಸಿದೆ. ನಗರದ ಸರ್ವಾಂಗೀಣ ಅಭಿವೃದ್ಧಿಗೆ ಎಲ್ಲ ಧರ್ಮ, ಪಂಗಡದ ಜನರನ್ನು ಕರೆದುಕೊಂಡು ಹೋಗುವುದಾಗಿಯೂ ಅವರು ಘೋಷಿಸಿದ್ದಾರೆ.

SCROLL FOR NEXT