ಬೆಂಗಳೂರು: ಶಿಗ್ಗಾಂವಿ, ಚನ್ನಪಟ್ಟಣ, ಸಂಡೂರು ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಈಗಾಗಲೇ ದಿನಾಂಕ ಘೋಷಣೆಯಾಗಿದ್ದು, ಈ ನಡುವಲ್ಲೇ ಮೂರೂ ಕ್ಷೇತ್ರಗಳಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಈ ಮಧ್ಯೆ ಶಿಗ್ಗಾಂವಿ ಕ್ಷೇತ್ರದಿಂದ ಪುತ್ರನನ್ನು ನಿಲ್ಲಿಸುವ ಉತ್ಸುಕತೆ ನನಗಿಲ್ಲ ಎಂದು ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅವರು ಬುಧವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತಾಡಿದ ಅವರು, ನನ್ನ ಮಗನನ್ನ ಚುನಾವಣೆಗೆ ನಿಲ್ಲಿಸುವ ಪ್ರಸ್ತಾವನೆಯೇ ಇಲ್ಲ. ಶಿಗ್ಗಾಂವಿ ಕ್ಷೇತ್ರದ ಬಗ್ಗೆ ಈಗಾಗಲೇ 2-3 ಬಾರಿ ಚರ್ಚೆಯಾಗಿದೆ. ಮುಂದಿನ ಎರಡು ಮೂರು ದಿನದಲ್ಲಿ ಮತ್ತೆ ಚರ್ಚಿಸಿ ಅಭ್ಯರ್ಥಿ ಪಟ್ಟಿಯನ್ನು ಹೈಕಮಾಂಡ್ ಗೆ ಕಳುಹಿಸುತ್ತೇವೆ. ಎಂಪಿ ಚುನಾವಣೆ ಬಳಿಕ ನನ್ನ ಮಗ ಕ್ಷೇತ್ರದಲ್ಲಿ ಓಡಾಟ ನಡೆಸಿಲ್ಲ. ಶಿಗ್ಗಾಂವಿ ಕ್ಷೇತ್ರಕ್ಕೆ ಮುರುಗೇಶ್ ನಿರಾಣಿ ಹೆಸರು ಕೇಳಿ ಬರುತ್ತಿದೆ. ಒಂದು ಬಾರಿ ಮುರುಗೇಶ್ ನಿರಾಣಿ ನನ್ನನ್ನು ಭೇಟಿ ಮಾಡಿದ್ದರು. ನೀವೆಲ್ಲಾ ಒಪ್ಪಿದರೆ ಸ್ಪರ್ಧಿಸುವೆ ಎಂದಿದ್ದಾರೆ. ಎಲ್ಲವನ್ನೂ ಹೈಕಮಾಂಡ್ ಜೊತೆ ಚರ್ಚಿಸಿ ತೀರ್ಮಾನಿಸುತ್ತೇವೆ ಎಂದು ಹೇಳಿದರು.
ಶಿಗ್ಗಾವಿಯಲ್ಲಿ ನನ್ನ ಮಗನ ಸ್ಪರ್ಧೆ ಬಗ್ಗೆ ನನಗೆ ಇಚ್ಛೆ ಇಲ್ಲ. ಪ್ರಸ್ತಾವವನ್ನೂ ಇಟ್ಟಿಲ್ಲ. ಕೋರ್ ಕಮಿಟಿ ಸಭೆಯಲ್ಲಿ ಪ್ರಸ್ತಾಪ ಆಗಿದ್ದು, ಆ ಸಭೆಯಲ್ಲಿ ನಾನು ಹಾಜರಿರಲಿಲ್ಲ. ನನ್ನ ಜೊತೆ ಚರ್ಚಿಸಿ ತೀರ್ಮಾನಿಸುವುದಾಗಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರು ಹೇಳಿದ್ದಾರೆ. ಶಿಗ್ಗಾವಿ ನಾನು ಪ್ರತಿನಿಧಿಸುವ ಕ್ಷೇತ್ರ ಆಗಿರುವುದರಿಂದ ನನ್ನ ಮೇಲೆ ಹೆಚ್ಚು ಜವಾಬ್ದಾರಿ ಇದೆ. ನಮ್ಮ ಪಕ್ಷದ ಉಸ್ತುವಾರಿ ಕಾರ್ಯದರ್ಶಿ ರಾಧಾ ಮೋಹನ್ ಅಗರವಾಲ್ ಅವರು ಕ್ಷೇತ್ರಕ್ಕೆ ಭೇಟಿ ನೀಡಿ, ಸ್ಥಳೀಯರ ಜೊತೆ ಸಭೆ ನಡೆಸಿ ಅಭಿಪ್ರಾಯ ಪಡೆದಿದ್ದಾರೆ. ನಾನು ಸ್ಪರ್ಧೆ ಮಾಡಿದಾಗ ಸಿಕ್ಕ ಸುಮಾರು 36 ಸಾವಿರ ಗೆಲುವಿನ ಅಂತರ ಈ ಬಾರಿಯೂ ಸಿಗುವ ನಂಬಿಕೆ ಇದೆ ಎಂದು ತಿಳಿಸಿದರು.
ಇದೇ ವೇಳೆ ಯೋಗೇಶ್ವರ್ ಕುರಿತ ಪ್ರಶ್ನೆಗೆ ಉತ್ತರಿಸಿ, ನಾವು ಐದಾರು ಜನ ಬಿಜೆಪಿ ಮುಖಂಡರು ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಸಿ.ಪಿ. ಯೋಗೇಶ್ವರ್ ಸ್ಪರ್ಧೆಯ ಬಗ್ಗೆ ಅವರಿಗೆ ಕೇಳಿದ್ದೇವೆ. ಕುಮಾರಸ್ವಾಮಿ ಅವರು ನಮ್ಮ ಪಕ್ಷದ ಹೈಕಮಾಂಡ್ ಜೊತೆ ಚರ್ಚೆ ಮಾಡುವುದಾಗಿ ಹೇಳಿದ್ದರು. ಚನ್ನಪಟ್ಟಣ ಕ್ಷೇತ್ರದ ಟಿಕೆಟನ್ನು ನಮ್ಮ ಪಕ್ಷದ ಹೈಕಮಾಂಡ್ ಹಾಗೂ ಕುಮಾರಸ್ವಾಮಿಯವರು ಸೇರಿ ತೀರ್ಮಾನ ಮಾಡುತ್ತಾರೆ ಎಂದು ಹೇಳಿದರು.
ಸಂಡೂರು ಎಸ್ಟಿ ಮೀಸಲು ಕ್ಷೇತ್ರವಾಗಿದ್ದು, ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಯಾವುದೇ ಅಕ್ರಮ ಆಗಿಲ್ಲ ಎಂದು ಮಾಜಿ ಸಚಿವ ನಾಗೇಂದ್ರ ಹೇಳುತ್ತಾರೆ. ಆದರೆ, ಮುಖ್ಯಮಂತ್ರಿಗಳು 187 ಕೋಟಿಯಲ್ಲಿ 89 ಕೋಟಿ ರೂ. ಅವ್ಯವಹಾರವಾಗಿದೆ ಅದನ್ನು ವಾಪಸ್ ಪಡೆಯುವುದಾಗಿ ಹೇಳಿದ್ದಾರೆ. ಹಾಗಿದ್ದರೆ ಯಾರದು ಸತ್ಯ ಎಂದು ಪ್ರಶ್ನಿಸಿದರು.
ಅವ್ಯವಹಾರ ಆಗದಿದ್ದರೆ ಇಡಿಯವರು ಯಾಕೆ ಕ್ರಮ ಕೈಗೊಂಡರು. ಇಡೀ ರಾಜ್ಯದ ಜನರು ಈ ಸರ್ಕಾರದ ವಿರುದ್ದ ಆಕ್ರೋಶಗೊಂಡಿದ್ದಾರೆ. ನಮ್ಮಮತ ಪಡೆದ ಸರ್ಕಾರ ನಮ್ಮ ಜನರಿಗೆ ದ್ರೋಹ ಮಾಡುತ್ತಿದೆ ಎಂದು ಎಸ್ಟಿ ಜನಾಂಗ ಆಕ್ರೋಶಗೊಂಡಿದೆ. ಅದರ ಪರಿಣಾಮ ಸಂಡೂರು ಉಪ ಚುನಾವಣೆಯ ಮೇಲೆ ಆಗುತ್ತದೆ. ಮುಡಾದಲ್ಲಿ ಯಾವುದೇ ತಪ್ಪುಗಳಾಗಿಲ್ಲ, ಕಾನೂನು ಉಲ್ಲಂಘನೆ ಯಾಗಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದರು. ಅವರೇ ಸೈಟ್ ವಾಪಸ್ಸು ಕೊಟ್ಟರು. ಮುಡಾ ಅವ್ಯವಹಾರ ತನಿಖೆ ನಡೆಯುವ ಸಂದರ್ಭದಲ್ಲಿ ನಾನು ತಪ್ಪು ಮಾಡಿಲ್ಲ ರಾಜೀನಾಮೆ ಕೊಡಲ್ಲ ಅಂತ ಸಿಎಂ ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಈಗ ಮುಡಾ ಅಧ್ಯಕ್ಷರಿಂದ ರಾಜೀನಾಮೆ ಕೊಡಿಸಿದ್ದಾರೆ. ಇದರ ಅರ್ಥ ಅಲ್ಲಿ ಅವ್ಯವಹಾರ ಆಗಿದೆ, ಇದರ ಜವಾಬ್ದಾರಿ ಇವರು ಹೊರಬೇಕು ಎಂದು ತಾನೇ, ಯಾರು ರಾಜಿನಾಮೆ ಕೊಡಬೇಕು ಅನ್ನುವ ಕಾರಣಕ್ಕೆ ಮರೀಗೌಡ ರಾಜೀನಾಮೆ ಕೊಡಿಸಿದ್ದಾರೆಂದು ಹೇಳಿದರು