ಬೆಂಗಳೂರು: ಕೆಎಸ್‌ಆರ್‌ಟಿಸಿ ಆದಾಯದಲ್ಲಿ ಗಣನೀಯ ವೃದ್ಧಿಯಾದರೂ ಸಾರಿಗೆ ಸಂಸ್ಥೆಗಳಿಗೆ ಶಕ್ತಿ ತುಂಬಲು ಸಾಧ್ಯವಾಗಿಲ್ಲದಿರುವುದು ತಮ್ಮ ಸರ್ಕಾರದ ಕೊಡುಗೆ ಎಂದು ಬಿಜೆಪಿಗೆ ಕಾಂಗ್ರೆಸ್ ತಿರುಗೇಟು ನೀಡಿದೆ.
ಲಾಭದಲ್ಲಿರುವ ಕೆಎಸ್‌ಆರ್‌ಟಿಸಿ ಬಸ್ಸುಗಳ ಅವಸ್ಥೆ ಒಮ್ಮೆ ನೋಡಿ ವಿಡಿಯೋ ಹಾಕಿ, ಬಿಜೆಪಿ ವ್ಯಂಗ್ಯವಾಡಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ತಿರುಗೇಟು ನೀಡಿದೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್, ಪ್ರಸಕ್ತ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಸಾರಿಗೆ ಸಂಸ್ಥೆಗಳಲ್ಲಿ ಹತ್ತು ಹಲವು ಕಾರ್ಮಿಕ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೆ ತರಲಾಗಿದೆ. ಕಳೆದ ಏಳೆಂಟು ವರ್ಷಗಳಿಂದ ಬಾಕಿ ಉಳಿದಿದ್ದ 1000ಕ್ಕೂ ಅಧಿಕ ಮೃತ ಅವಲಂಬಿತ ಕುಟುಂಬಗಳಿಗೆ ಅನುಕಂಪ ಆಧಾರದಲ್ಲಿ ಹುದ್ದೆ ನೀಡಲಾಗಿದೆ. ಕಳೆದ 5 ವರ್ಷದಲ್ಲಿ ತಮ್ಮ ಸರ್ಕಾರ ಸಂಪೂರ್ಣ ನಿಲ್ಲಿಸಿದ್ದ ಪ್ರಕ್ರಿಯೆ ಇದು. ತಮ್ಮ ಸರ್ಕಾರವು ಬಿಟ್ಟು ಹೋಗಿದ್ದ ರೂ.5900 ಕೋಟಿ ನಷ್ಟದಿಂದ ಹೊಣೆಗಾರಿಕೆ ಬಾಕಿಗಳಾದ ಡೀಸೆಲ್ ಹಣ, ಸಿಬ್ಬಂದಿಗಳ ಭವಿಷ್ಯ ನಿಧಿ, ಖರೀದಿ ಸಾಮಾಗ್ರಿಗಳ ಹಣ ಸೇರಿ ಎಲ್ಲಾ ಬಾಕಿ ಗಳನ್ನು ತೀರಿಸುವ ಹೊಣೆಗಾರಿಕೆ ಹೊತ್ತುಕೊಂಡು ನಾವು ಸಂಸ್ಥೆಗಳನ್ನು ಮುನ್ನಡೆಸಬೇಕಾಗಿದೆ.
ಬಿಜೆಪಿ ಸರ್ಕಾರದ ಆಡಳಿತದ 5 ವರ್ಷಗಳಲ್ಲಿ ಸಾರಿಗೆ ಸಂಸ್ಥೆಗಳಲ್ಲಿ 13888 ಹುದ್ದೆಗಳು ಖಾಲಿ ಇದ್ದರೂ (ನಿವೃತ್ತಿ ಇನ್ನಿತರೆ ಕಾರಣಗಳಿಂದ) ಒಂದೇ ಒಂದು ನೇಮಕಾತಿ ಮಾಡಿಲ್ಲ. ನಮ್ಮ ಸರ್ಕಾರ ಬಂದ ಕೂಡಲೇ 9000 ಹುದ್ದೆಗಳ ನೇಮಕಾತಿಗೆ ಅನುಮೋದನೆ ನೀಡಿದ್ದು, ಈಗಾಗಲೇ 5800 ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆಗಳು ವಿವಿಧ ಹಂತದಲ್ಲಿವೆ. ಬಿಜೆಪಿ ಅವಧಿಯಲ್ಲಿ ಸಾರಿಗೆ ಸಂಸ್ಥೆಯ ಸಿಬ್ಬಂದಿಗಳಿಗೆ ತಿಂಗಳ ವೇತನ ಪೂರ್ಣ ಪಾವತಿಯಾಗದೆ, ಅರ್ಧವೇತನ, ಕೆಲವೊಮ್ಮೆ ಆ ವೇತನವೂ ತಿಂಗಳ ಕೊನೆಯವರೆಗೂ, ಒಮ್ಮೊಮ್ಮೆ ಮುಂದಿನ ತಿಂಗಳವರೆಗೂ ಪಾವತಿಯಾಗುತ್ತಿತ್ತು ಈ ಬಗ್ಗೆ ತಮಗೆ ಮಾಹಿತಿ ಇಲ್ಲವೇ? ನಮ್ಮ ಸರ್ಕಾರ ಬಂದ ಮೇಲೆ ನಿಗದಿತ ದಿನಾಂಕದಂದು ನೌಕರರಿಗೆ ವೇತನ ಪಾವತಿಯಾಗುತ್ತಿದೆ.
ಬಿಜೆಪಿ ಟ್ಟೀಟ್ ಮಾಡುವುದರಲ್ಲಿ ತಮ್ಮ ಎದೆಗಾರಿಕೆ ತೋರಿಸುವುದನ್ನು ಬಿಟ್ಟು, ಸಾರಿಗೆ ಸಂಸ್ಥೆಗಳಿಗೆ ಕಳೆದ 5 ವರ್ಷದ ತಮ್ಮ ಅಧಿಕಾರಾವಧಿಯಲ್ಲಿ ಯಾವ ಮಹೋನ್ನತ ಸಾಧನೆ ಮಾಡಿದ್ದೀರ ಎಂದು ತಿಳಿಸಿ. ತಮ್ಮ ಒಂದೊಂದು ಟ್ಟೀಟ್‌ಗೂ ಅಂಕಿ ಅಂಶ ಸಮೇತ ಪ್ರತ್ಯುತ್ತರ ನೀಡಿದಾಗ ತಮ್ಮಿಂದ ಯಾವುದೇ ಪ್ರತಿಕ್ರಿಯೆ ಬರುವುದಿಲ್ಲ ಯಾಕೆ?
ಯಾಕೆಂದರೆ ಸಾರಿಗೆ ಸಂಸ್ಥೆಗಳನ್ನು ಅಧೋಗತಿ ತಂದು ನಿಲ್ಲಿಸಿರುವುದು ತಮ್ಮ ಅಧಿಕಾರಾವಧಿಯಲ್ಲಿ ಎಂಬ ಕಟುವಾದ ಸತ್ಯ ನಿಮಗೆ ತಿಳಿದಿದೆ. ನಮ್ಮ ಸರ್ಕಾರದ 'ಶಕ್ತಿ ಯೋಜನೆ'ಯಿಂದ ಸಾರಿಗೆ ಸಂಸ್ಥೆಗಳ ಆದಾಯದಲ್ಲಿ ಗಣನೀಯ ವೃದ್ಧಿಯಾದರೂ ಸಾರಿಗೆ ಸಂಸ್ಥೆಗಳಿಗೆ ಶಕ್ತಿ ತುಂಬಲು ಸಾಧ್ಯವಾಗಿಲ್ಲದಿರುವುದು ತಮ್ಮ ಸರ್ಕಾರದ ಕೊಡುಗೆ ಎಂದು ತಿರುಗೇಟು ನೀಡಿದೆ.
ಈ ನಡುವೆ ಪ್ರಿಯಾಂಕ್ ಖರ್ಗೆಯವರನ್ನು ಟ್ರೋಲ್ ಮಿನಿಸ್ಟರ್ ಎಂದು ಪೋಸ್ಟ್ ಮಾಡಿರುವುದಕ್ಕೂ ಬಿಜೆಪಿ ವಿರುದ್ಧ ಕಾಂಗ್ರೆಸ್ ಕಿಡಿಕಾರಿದೆ.
ಒಂದು ರಾಜಕೀಯ ಪಕ್ಷದ ಸಾಮಾಜಿಕ ಜಾಲತಾಣದ ಖಾತೆಗೆ ಇರಬೇಕಾದ ಘನತೆ, ಸಭ್ಯ ಭಾಷೆ, ನೈತಿಕತೆ ಯಾವುದೂ ಇಲ್ಲದೆ #Trollpage ನಂತೆ ವರ್ತಿಸುತ್ತಿದೆ. ಸುಳ್ಳು ಹೇಳುವುದಕ್ಕೆ ಪ್ರಿಯಾಂಕ್ ಖರ್ಗೆ ಅವರು ಮೋದಿಯವರ ಗರಡಿಯಲ್ಲಿ ಪಳಗಿಲ್ಲ, ಪ್ರಿಯಾಂಕ್ ಖರ್ಗೆಯವರು ಗಂಗಾಕಲ್ಯಾಣ ಹಗರಣದ ಬಗ್ಗೆ ಮಾತಾಡಿದಾಗ ಸುಳ್ಳು ಎಂದಿರಿ, ನಂತರ ಸತ್ಯ ಹೊರಬಂತು. ಪಿಎಸ್ಐ ಹಗರಣವನ್ನು ಬಯಲಿಗೆಳೆದಾಗ ಸುಳ್ಳು ಎಂದಿರಿ, ಸತ್ಯ ಜಗತ್ತಿಗೆ ತಿಳಿಯಿತು. ಬಿಟ್ ಕಾಯಿನ್ ಹಗರಣ ತೆರೆದಿಟ್ಟಾಗ ಸುಳ್ಳು ಎಂದಿರಿ, ಸತ್ಯ ಜಗಜ್ಜಾಹೀರಾಯ್ತು. ಸುಳ್ಳು ಬಿಜೆಪಿಯವರ ಮನೆದೇವರೇ ಹೊರತು ನಮಗಲ್ಲ ಎಂದು ತಿರುಗೇಟು ನೀಡಿದೆ.