ಬೆಂಗಳೂರು: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಕಣ ರಂಗೇರಿದೆ. ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಯಾರು ಆಯ್ಕೆಯಾಗುತ್ತಾರೆ ಎಂಬುದು ತೀವ್ರ ಕುತೂಹಲ ಮೂಡಿಸಿದ್ದು, ಇಂದೇ ಅಭ್ಯರ್ಥಿಯ ಹೆಸರು ಘೋಷಣೆಯಾಗುವ ಸಾಧ್ಯತೆಯಿದೆ.
ಚನ್ನಪಟ್ಟಣ ಜೆಡಿಎಸ್ ಕ್ಷೇತ್ರ. ಅವರಿಗೆ ಯಾರು ಬೇಕೋ ಅವರ ಹೆಸರು ಘೋಷಣೆ ಮಾಡ್ತಾರೆ ಎಂದು ಮಾಜಿ ಸಿಎಂ ಹಾಗೂ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಇಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಚನ್ನಪಟ್ಟಣದಲ್ಲಿ ಜೆಡಿಎಸ್‌ನವರು ಯಾರಿಗೆ ಬೇಕೋ ಅವರಿಗೆ ಟಿಕೆಟ್ ನೀಡುತ್ತಾರೆ. ಈಗಾಗಲೇ ಅಮಿತ್ ಶಾ ಅವರೂ ಚೆನ್ನಪಟ್ಟಣದಲ್ಲಿ ಜೆಡಿಎಸ್‌ನವ್ರು ಘೋಷಣೆ ಮಾಡ್ತಾರೆ ಅಂದಿದ್ದಾರೆ. ಚೆನ್ನಪಟ್ಟಣ ಜೆಡಿಎಸ್ ಕ್ಷೇತ್ರ, ಅವರಿಗೆ ಯಾರು ಬೇಕೋ ಅವರ ಹೆಸರು ಘೋಷಣೆ ಮಾಡಿಕೊಳ್ಳಲಿ ಎಂದರು.
ಬಿಜೆಪಿಯಿಂದ ಎರಡು ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಿಸಲಾಗಿದೆ. ಚನ್ನಪಟ್ಟಣದಲ್ಲಿ ಜೆಡಿಎಸ್‌ನವ್ರು ಅನೌನ್ಸ್ ಮಾಡಿಕೊಳ್ಳಬಹುದು ಎಂದು ಅಮಿತ್ ಶಾ ಹೇಳಿದ್ದಾರೆ. ಹೀಗಾಗಿ ಚನ್ನಪಟ್ಟಣದಲ್ಲಿ ಜೆಡಿಎಸ್‌ನವರೇ ಘೋಷಣೆ ಮಾಡ್ತಾರೆ. ಎರಡೂ ಪಕ್ಷಗಳೂ ಸೇರಿ ಮೂರೂ ಕ್ಷೇತ್ರ ಗೆಲ್ಲೋದಿಕ್ಕೆ ನಿರ್ಧಾರ ಆಗಿದೆ ಎಂದರು.
ಸಿ.ಪಿ.ಯೋಗೇಶ್ವರ್ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತಾರೆ. ಅಂತಿಮವಾಗಿ ಹೈಕಮಾಂಡ್ ಏನು ಹೇಳುತ್ತೋ ಅದರಂತೆ ಆಗಲಿದೆ. ಜೆಡಿಎಸ್ ಚಿಹ್ನೆಯಡಿ ಬಿಜೆಪಿಯವರು ನಿಲ್ಲುವ ಯೋಚನೆ ಇಲ್ಲ ಎಂದು ಸ್ಪಷ್ಟಪಡಿಸಿದರು.