ಹುಬ್ಬಳ್ಳಿ: ಚನ್ನಪಟ್ಟಣ ವಿಧಾನಸಭಾ ಉಪಚುನಾವಣೆಯಲ್ಲಿ ಅಭ್ಯರ್ಥಿ ಯಾರೇ ಆಗಿರಲಿ ಎನ್‌ಡಿಎ ಅಭ್ಯರ್ಥಿ ಗೆಲುವಿಗೆ ಶ್ರಮಿಸುತ್ತೇವೆಂದು ಜೆಡಿಎಸ್ ಮುಖಂಡ ನಿಖಿಲ್ ಕುಮಾರಸ್ವಾಮಿ ಅವರು ಶನಿವಾರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷ ಸಂಘಟನೆ ದೃಷ್ಟಿಯಿಂದ ರಾಜ್ಯದಲ್ಲಿ ಪ್ರವಾಸ ಮಾಡುತ್ತಿದ್ದೇನೆ.. ಶಿಗ್ಗಾಂವಿ ಹಾಗೂ ಸಂಡೂರು ಕ್ಷೇತ್ರದಲ್ಲಿ ಪ್ರವಾಸ ಕೈಗೊಂಡಿದ್ದೇವೆ. ಉಪಚುನಾವಣೆ ಹಿನ್ನೆಲೆ ಎರಡೂ ಪಕ್ಷಗಳ ಕಾರ್ಯಕರ್ತರು ಹೊಂದಾಣಿಕೆ ಮೂಲಕ ಕೈಜೋಡಿಸಬೇಕು ಎನ್ನುವುದು ಉದ್ದೇಶ. ಈಗಾಗಲೇ ಏಳು ಜಿಲ್ಲೆಗಳ ಪ್ರವಾಸ ಮಾಡಿದ್ದೇವೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಒಳ್ಳೆಯ ವಾತಾವರಣ ಸೃಷ್ಟಿಯಾಗಿತ್ತು. ಈ ಬಾರಿಯೂ ಕೂಡ ಉಪಚುನಾವಣೆಯಲ್ಲಿ ಹೊಂದಾಣಿಕೆ ಮಾಡಿಕೊಳ್ಳುವ ಉದ್ದೇಶವಿದೆ ಎಂದು ಹೇಳಿದರು.
ಚನ್ನಪಟ್ಟಣದಲ್ಲಿ ನಮ್ಮ ಕಾರ್ಯಕರ್ತರ ರಕ್ಷಣೆ ಮಾಡಬೇಕಿದೆ. ನಾನು ಎಲ್ಲೂ ಆಕಾಂಕ್ಷಿ ಎಂದು ಹೇಳಿಲ್ಲ. 1994 ರಿಂದ ದೇವೇಗೌಡರಿಂದ ಕುಮಾರಸ್ವಾಮಿವರೆಗೂ ಚನ್ನಪಟ್ಟಣದಲ್ಲಿ ಗೆಲುವು ಸಾಧಿಸಿದ್ದೇವೆ. ನಾನು ಸ್ಪರ್ಧೆ ಮಾಡುತ್ತೇನೆಂದರೂ ಒಂದು ರೀತಿ, ಸ್ಪರ್ಧೆ ಮಾಡಲ್ಲ ಎಂದರೂ ಒಂದು ರೀತಿಯಲ್ಲಿ ಚರ್ಚೆಯಾಗುತ್ತದೆ. ಹೀಗಾಗಿ ಅಭ್ಯರ್ಥಿ ಆಯ್ಕೆ ಬಗ್ಗೆ ಎನ್‌ಡಿಎ ನಾಯಕರು ತೀರ್ಮಾನ ಮಾಡುತ್ತಾರೆ.
ಈಗಾಗಲೇ ಕುಮಾರಣ್ಣ ಕಾರ್ಯಕರ್ತರೊಂದಿಗೆ ಸಭೆ ಮಾಡಿದ್ದಾರೆ. ಅತ್ತ ಸಿ.ಪಿ.ಯೋಗೇಶ್ವರ್ ಕೂಡಾ ಸಭೆ ಮಾಡಿದ್ದಾರೆ. ನಾನೂ ಕಾರ್ಯಕರ್ತರನ್ನು ಹುರಿದುಂಬಿಸುವ ಕೆಲಸ ಮಾಡಿದ್ದೇನೆ. ಎರಡು ಮೂರು ತಿಂಗಳಿಂದ ನಾನೂ ಕಾರ್ಯಕರ್ತರ ಜೊತೆ ಸೇರಿ ಚನ್ನಪಟ್ಟಣದಲ್ಲಿ ಕೆಲಸ ಮಾಡಿದ್ದೇನೆ. ಚುನಾವಣೆ ಕೆಲಸ ಕೂಡ ಚನ್ನಪಟ್ಟಣದಲ್ಲಿ ನಿರಂತರವಾಗಿ ನಡೆಯುತ್ತಿದೆ ಎಂದು ತಿಳಿಸಿದರು.
ಅಧಿಕಾರ ಪಡೆಯಬೇಕೆಂಬ ಆತುರದಲ್ಲಿ ನಾನಿಲ್ಲ. ನಮ್ಮ ಸಂಘಟನೆಯನ್ನು ಬಲಪಡಿಸಲು ಪಕ್ಷದ ಕಾರ್ಯಕರ್ತರನ್ನು ಗುರುತಿಸಿ ಸಬಲೀಕರಣಗೊಳಿಸುವುದು ನನ್ನ ಜವಾಬ್ದಾರಿಯಾಗಿದೆ, ಮುಂಬರುವ ಎರಡು ಪಕ್ಷಗಳ ನಡುವಿನ ಸಮನ್ವಯ ಸಭೆಯಲ್ಲಿ ಅಂತಿಮ ಅಭ್ಯರ್ಥಿಯನ್ನು ನಿರ್ಧರಿಸಲಾಗುವುದು ಎಂದು ಹೇಳಿದರು.