ಬೆಂಗಳೂರು: ರಾಷ್ಟ್ರ ರಾಜಧಾನಿ ನವದೆಹಲಿಗೆ ತೆರಳಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೈಕಮಾಂಡ್ ನಾಯಕರೊಂದಿಗೆ ಮಾತುಕತೆ ನಡೆಸಿದ್ದು, ಈ ಮಾತುಕೆತ ಕುರಿತು ರಾಜ್ಯ ನಾಯಕರಲ್ಲಿ ಕುತೂಹಲ ಹೆಚ್ಚಾಗಿದೆ.
ರಾಹುಲ್ ಹಾಗೂ ಇತರ ಹೈಕಮಾಂಡ್ ನಾಯಕರ ಜತೆ ಸಿದ್ದರಾಮಯ್ಯ ನಡೆಸಿದ ಮಾತುಕತೆಯ ಬಗ್ಗೆ ತಿಳಿದುಕೊಳ್ಳಲು ಕೈಪಡೆಯ ನಾಯಕರು ಉತ್ಸುಕರಾಗಿದ್ದಾರೆ.
ಇದರಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಪ್ತ ಸಚಿವರು ಒಬ್ಬೊಬ್ಬರಾಗಿಯೇ ಭೇಟಿ ನೀಡಿ ಕುತೂಹಲ ತಣಿಸಿಕೊಳ್ಳುತ್ತಿದ್ದರೆ, ಮುಖ್ಯಮಂತ್ರಿಗಳು ಮಾಹಿತಿ ಹಂಚಿಕೊಳ್ಳುತ್ತಿದ್ದಾರೆಂದು ತಿಳಿದುಬಂದಿದೆ.
ಸಿಎಂ ಅಧಿಕೃತ ನಿವಾಸ ‘ಕಾವೇರಿ’ಗೆ ಶುಕ್ರವಾರ ರಾತ್ರಿಯೇ ಸತೀಶ್ ಜಾರಕಿಹೊಳಿ, ಎಚ್.ಸಿ.ಮಹದೇವಪ್ಪ, ಸಚಿವ ರಾಜಣ್ಣ ಧಾವಿಸಿ, ಸಿದ್ದರಾಮಯ್ಯ ಅವರಿಂದ ಮಾಹಿತಿ ಪಡೆದುಕೊಂಡಿದ್ದರೆ, ಶನಿವಾರ ಪರಮೇಶ್ವರ್ ಅವರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ್ದಾರೆ.
ಇದಲ್ಲದೆ, ಭಾನುವಾರ ಬೆಂಗಳೂರಿಗೆ ಆಗಮಿಸಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರನ್ನೂ ಕೆಲ ನಾಯಕರು ಸೌಜನ್ಯದ ನೆಪದಲ್ಲಿ ಭೇಟಿಯಾಗಿ ಔಪಚಾರಿಕ ಮಾತುಕತೆ ನಡೆಸಿದ್ದಾರೆ,
ಸಂಪುಟ ಪುನಾರಚನೆ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಹಾಗೂ ಹನಿಟ್ರ್ಯಾಪ್ ಯತ್ನದ ಬಗ್ಗೆ ರಾಹುಲ್ ಅವರ ಪ್ರತಿಕ್ರಿಯೆ ಕುರಿತು ನಾಯಕರು ಕುತೂಹಲದಲ್ಲಿದ್ದಾರೆಂದು ಮೂಲಗಳು ತಿಳಿಸಿವೆ,