ಸಿದ್ದರಾಮಯ್ಯ  
ರಾಜಕೀಯ

ಬಾಲಿಶ-ಅಸಂಬದ್ಧ ಹೇಳಿಕೆಗಳಿಂದ ವರ್ಲ್ಡ್ ಫೇಮಸ್ ಆಗಿಬಿಟ್ಟಿರಿ, ಪಾಕಿಸ್ತಾನಕ್ಕೆ ಭೇಟಿ ಕೊಟ್ಟರೆ ರಾಜಾತಿಥ್ಯ ಗ್ಯಾರೆಂಟಿ..!

ಪಾಕಿಸ್ತಾನದ ಮೇಲೆ ಯುದ್ಧ ಮಾಡುವ ಅನಿವಾರ್ಯತೆ ಇಲ್ಲ ಎಂಬ ಹೇಳಿಕೆ ಪಾಕಿಸ್ತಾನ ಸುದ್ದಿ ವಾಹಿನಿಗಳಲ್ಲಿ ಹರಿದಾಡುತ್ತಿದ್ದು, ಯುದ್ಧದ ವಿಚಾರದಲ್ಲಿ ಭಾರತದಲ್ಲಿ ಆಂತರಿಕ ಭಿನ್ನಮತ ಶುರುವಾಗಿದೆ ಎಂದು ಸುದ್ದಿ ಪ್ರಕಟವಾಗುತ್ತಿವೆ.

ಬೆಂಗಳೂರು: ತಮ್ಮ ಬಾಲಿಶ, ಅಸಂಬದ್ಧ ಹೇಳಿಕೆಗಳಿಂದ ಈಗ ರಾತ್ರೋರಾತ್ರಿ ಪಾಕಿಸ್ತಾನದಲ್ಲಿ ವರ್ಲ್ಡ್ ಫೇಮಸ್ ಆಗಿಬಿಟ್ಟಿದ್ದೀರಿ. ಮುಂದೆಂದಾದರೂ ಪಾಕಿಸ್ತಾನಕ್ಕೆ ಭೇಟಿ ಕೊಟ್ಟರೆ ತಮಗೆ ರಾಜಾತಿಥ್ಯ ಗ್ಯಾರೆಂಟಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಕಿಡಿಕಾರಿದೆ.

ಪಾಕಿಸ್ತಾನದ ಮೇಲೆ ಯುದ್ಧ ಮಾಡುವ ಅನಿವಾರ್ಯತೆ ಇಲ್ಲ ಎಂಬ ಹೇಳಿಕೆ ಪಾಕಿಸ್ತಾನ ಸುದ್ದಿ ವಾಹಿನಿಗಳಲ್ಲಿ ಹರಿದಾಡುತ್ತಿದ್ದು, ಯುದ್ಧದ ವಿಚಾರದಲ್ಲಿ ಭಾರತದಲ್ಲಿ ಆಂತರಿಕ ಭಿನ್ನಮತ ಶುರುವಾಗಿದೆ ಎಂದು ಸುದ್ದಿ ಪ್ರಕಟವಾಗುತ್ತಿವೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ತೀವ್ರವಾಗಿ ಕಿಡಿಕಾರಿದೆ.

ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಪ್ರತಿಕ್ರಿಯಿಸಿ, "ಪಾಕಿಸ್ತಾನ ರತ್ನ" ಸಿಎಂ ಸಿದ್ದರಾಮಯ್ಯ ಅವರೇ, ತಮ್ಮ ಬಾಲಿಶ, ಅಸಂಬದ್ಧ ಹೇಳಿಕೆಗಳಿಂದ ಈಗ ರಾತ್ರೋರಾತ್ರಿ ಪಾಕಿಸ್ತಾನದಲ್ಲಿ ವರ್ಲ್ಡ್ ಫೇಮಸ್ ಆಗಿಬಿಟ್ಟಿದ್ದೀರಿ. ತಮಗೆ ಅಭಿನಂದನೆಗಳು. ಮುಂದೆಂದಾದರೂ ತಾವು ಪಾಕಿಸ್ತಾನಕ್ಕೆ ಭೇಟಿ ಕೊಟ್ಟರೆ ತಮಗೆ ರಾಜಾತಿಥ್ಯ ಗ್ಯಾರೆಂಟಿ ಎಂದು ವ್ಯಂಗ್ಯವಾಡಿದ್ದಾರೆ.

ಪಾಕಿಸ್ತಾನದ ಪರ ವಕಾಲತ್ತು ವಹಿಸಿದ ಮಹಾನ್ ಶಾಂತಿದೂತ ಎಂದು ಪಾಕಿಸ್ತಾನ ಸರ್ಕಾರ ತಮಗೆ ಅಲ್ಲಿನ ಅತ್ಯುನ್ನತ ನಾಗರೀಕ ಪ್ರಶಸ್ತಿಯಾದ ನಿಶಾನ್-ಎ-ಪಾಕಿಸ್ತಾನ ಪ್ರಶಸ್ತಿ ಕೊಟ್ಟು ಸನ್ಮಾನ ಮಾಡಿದರೂ ಅಚ್ಚರಿಯಿಲ್ಲ. ದೇಶ ಅತ್ಯಂತ ಸೂಕ್ಷ್ಮ ಪರಿಸ್ಥಿತಿ ಎದುರಿಸುತ್ತಿರುವಾಗ ಗಡಿಯಲ್ಲಿ ಯುದ್ಧದ ಕಾರ್ಮೋಡ ಕವಿದಿರುವಾಗ ಈ ರೀತಿ ಶತ್ರುರಾಷ್ಟ್ರದ ಕೈಗೊಂಬೆಯಂತೆ ವರ್ತಿಸುತ್ತದ್ದೀರಲ್ಲ, ನಿಮ್ಮಂತಹವರು ಸಾರ್ವಜನಿಕ ಬದುಕಿನಲ್ಲಿ ಇರುವುದೇ ನಮ್ಮ ದೇಶದ ಅತ್ಯಂತ ದೊಡ್ಡ ದುರಂತ ಎಂದು ಕಿಡಿಕಾರಿದ್ದಾರೆ.

ಪ್ರಹ್ಲಾದ್ ಜೋಶಿಯವರು ಪ್ರತಿಕ್ರಿಯೆ ನೀಡಿ, ಇಡೀ‌ ವಿಶ್ವವೇ‌ ಭಾರತಕ್ಕೆ ಸಾಂತ್ವನ ಹೇಳುತ್ತಿದೆ. ಭಯೋತ್ಪಾದಕರಿಗೆ ಅವರಿಗೆ ಅರ್ಥವಾಗುವ ಹಾಗೆಯೇ ಪಾಠ ಕಲಿಸಲು ಭಾರತಕ್ಕೆ ಬಹುತೇಕ ‌ದೇಶಗಳು ಹೇಳುತ್ತಿವೆ. ಈ ಮಧ್ಯೆ ಭಯೋತ್ಪಾದಕ ಚಟುವಟಿಕೆಯಲ್ಲಿ ತೊಡಗಿರುವವರನ್ನು ಶಿಕ್ಷಿಸುವುದು ಬೇಡ ನಮ್ಮ ಭದ್ರತೆಯನ್ನು ಬಲಪಡಿಸಿ ಎಂದು ಹೇಳುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮಾತು ಖಂಡನೀಯ. ಪಹಲ್ಗಾಮ್ ನಲ್ಲಿ ನಡೆದ ಉಗ್ರರ ದಾಳಿಯನ್ನು ಇಡೀ ವಿಶ್ವವೇ ಖಂಡಿಸುತ್ತಿದೆ. ಅದರೆ ಕಾಂಗ್ರೆಸ್ಸಿನ ನಾಯಕರಿಗೆ ವಾಸ್ತವ ಸ್ಥಿತಿ ಅರಿಯದೆ ದೇಶದ ಬಗ್ಗೆ ಸಡಿಲ ಮಾತನಾಡುವುದು ಅಭ್ಯಾಸವಾಗಿಬಿಟ್ಟಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಪ್ರತಿಕ್ರಿಯಿಸಿ, ಇಡೀ ದೇಶವೇ ಕಾಶ್ಮೀರದಲ್ಲಿ ನಡೆದ ಹಿಂದೂಗಳ ಹತ್ಯೆಗೆ ಮಮ್ಮಲ ಮರುಗುತ್ತಿದೆ. ಪಾಕಿಸ್ತಾನದ ಚಿತಾವಣೆ ಹಾಗೂ ಪಿತೂರಿಯ ಮುಖವಾಡಗಳೆನಿಸಿದ ರಣಹೇಡಿ ಉಗ್ರರ ಪೈಶಾಚಿಕ ವರ್ತನೆಯಿಂದ ಶತಕೋಟಿ ಭಾರತೀಯರು ಆಕ್ರೋಶಭರಿತರಾಗಿದ್ದಾರೆ. ಇಂತಹ ಸಮಯದಲ್ಲಿ ಭಾರತದ ಏಕತೆಗೆ ದನಿಗೂಡಿಸಬೇಕಾದ ಕಾಂಗ್ರೆಸ್ಸಿಗರು ‘ಮೊಸರಲ್ಲಿ ಕಲ್ಲು ಹುಡುಕುವ ಕೀಳು ರಾಜಕೀಯ ಅಭಿರುಚಿಯ ಹೇಳಿಕೆಗಳನ್ನು ನೀಡುತ್ತಿರುವುದು ದುರ್ದೈವದ ಸಂಗತಿ ಎಂದು ಕಿಡಿಕಾರಿದ್ದಾರೆ.

ಒಬ್ಬರು ಭದ್ರತಾ ವೈಫಲ್ಯವೆಂದು ಟೀಕಿಸುವುದು, ಮತ್ತೊಬ್ಬರು ಆರ್ಟಿಕಲ್‌ 370 ರದ್ದುಪಡಿಸಿದ ಪರಿಣಾಮ ಎಂದು ಹೇಳುವುದು, ರಾಜ್ಯದ ಸಚಿವರೊಬ್ಬರು ಬಿಜೆಪಿ ಮುಸ್ಲಿಮರನ್ನು ದ್ವೇಷಿಸಿದ್ದೇ ಘಟನೆಗೆ ಕಾರಣ ಎಂಬ ಅರ್ಥದಲ್ಲಿ ದ್ವೇಷ ಬಿತ್ತುವ ಬೇಜವಾಬ್ದಾರಿತನದ ಬಾಲಿಶ ಹೇಳಿಕೆ ನೀಡುವುದು ಮುಂದುವರೆದಿದೆ. ಇದು ಭಾರತದ ಏಕತೆ ಹಾಗೂ ಸುರಕ್ಷತೆಗೆ ಭಂಗ ತರುವ ನಡವಳಿಕೆಯಲ್ಲದೇ ಬೇರೇನೂ ಅಲ್ಲ.

ಉಗ್ರರಿಗೆ ಆಶ್ರಯ ತಾಣವಾಗಿರುವ ಪಾಕಿಸ್ತಾನದ ವಿರುದ್ಧ ಭಾರತ ತನ್ನ ಸುರಕ್ಷತೆಗಾಗಿ ದಿಟ್ಟ ಹೆಜ್ಜೆ ಇಡಲು ಹೊರಟಿರುವ ಕ್ರಮವನ್ನು‘ತಾವು ಯುದ್ಧದ ಪರ ಅಲ್ಲ’ ಎಂದು ಸಿದ್ದರಾಮಯ್ಯನವರು ಹೇಳುವ ಮೂಲಕ ಪಲಾಯನ ವಾದಿ ನಿಲುವು ಪ್ರಕಟಿಸಿ ಭಾರತೀಯ ಸೈನಿಕರ ನೈತಿಕ ಸ್ಥೈರ್ಯ ಕುಗ್ಗಿಸಲು ಹೊರಟಿದ್ದಾರೆ.

ಭಾರತ ಎಂದೂ ಯುದ್ಧ ದಾಹವನ್ನು ಪ್ರದರ್ಶಿಸಿಲ್ಲ, ಇತಿಹಾಸವನ್ನು ಅವಲೋಕಿಸಿದಾಗಲೆಲ್ಲ ಪಾಕಿಸ್ಥಾನ ಕಾಲು ಕೆರೆದು ಭಾರತವನ್ನು ಕೆಣಕಿದ ಪರಿಣಾಮವೇ ಯುದ್ಧ ನಡೆದಿದೆ. ಅದು ಸ್ವಾತಂತ್ರ್ಯಾನಂತರದ ಪಾಕಿಸ್ತಾನ ಯುದ್ದಗಳಿಂದಿಡಿದು ಎರಡೂ ರಾಷ್ಟ್ರಗಳ ನಡುವೆ ಸ್ನೇಹದ ಬೆಸುಗೆ ಬೆಸೆಯಲು ಹೊರಟ ಅಜಾತ ಶತ್ರು ನೇತಾರನೆಂದೇ ಬಣ್ಣಿಸಲ್ಪಟ್ಟ ಅಂದಿನ ಪ್ರಧಾನಿ ವಾಜಪೇಯಿ ಅವರ ನಂಬಿಕೆಗೆ ದ್ರೋಹವೆಸಗಿ ಕಾರ್ಗಿಲ್‌ ಯುದ್ಧ ನಡೆದ ಘಟನೆಯಾಗಬಹುದು, ಉದ್ದಕ್ಕೂ ಪಾಕಿಸ್ತಾನ ಭಾರತವನ್ನು ಕೆಣಕುತ್ತಾ ಬಂದಿದೆ ಆಕ್ರಮಣ ಮಾಡಲು ಬಂದು ಪೆಟ್ಟನ್ನೂ ತಿಂದು ಹಿಮ್ಮೆಟ್ಟಿದೆ, ಸೋಲಿನ ರುಚಿಯನ್ನೂ ಅನುಭವಸಿದೆ.

ಈ ಹಿಂದೆ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರ ಅವಧಿಯಲ್ಲಿ ಪಾಕಿಸ್ತಾನದ ವಿರುದ್ಧ ನಡೆದ ಯುದ್ಧದ ಸಮಯದಲ್ಲಿ ಪಾಕ್‌ ಆಕ್ರಮಿತ ಕಾಶ್ಮೀರವನ್ನು ಮರುವಶ ಪಡೆಸಿಕೊಳ್ಳುವ ಅವಕಾಶವಿತ್ತು.

ಆದರೆ ಆ ನಿಟ್ಟಿನಲ್ಲಿ ಇಂದಿರಾ ಗಾಂಧಿಯವರು ಬದ್ಧತೆ-ದಿಟ್ಟತೆ ತೋರದಿರುವುದು ಇತಿಹಾಸದ ಪುಟಗಳಲ್ಲಿ ಕಪ್ಪು ಚುಕ್ಕೆಯಾಗಿ ಉಳಿದಿರುವುದನ್ನು ಮುಖ್ಯಮಂತ್ರಿಗಳು ಒಮ್ಮೆ ನೋಡಿಕೊಳ್ಳಲಿ. ಮುಖ್ಯಮಂತ್ರಿಗಳ ಪ್ರಕಾರ ಎಷ್ಟೇ ನಮಗೆ ಉಪಟಳ ನೀಡಿದರೂ, ನಮ್ಮ ಜನರ ಮಾರಣಹೋಮ ಆದರೂ, ನಮ್ಮ ಸೈನಿಕರು ಸಾಲು ಸಾಲಾಗಿ ಪ್ರಾಣ ತೆತ್ತರೂ ಭಾರತ ಯುದ್ಧ ಮಾಡದೇ ಶಾಂತಿ ಮಂತ್ರ ಪಠಿಸಬೇಕೇ? ಯುದ್ಧ ಭಾರತದ ಆದ್ಯತೆಯಲ್ಲ ಎಂಬುದು ಎಷ್ಟು ಮುಖ್ಯವೋ ರಾಷ್ಟ್ರದ ಸುರಕ್ಷತೆ, ಭಾರತೀಯರ ಅಮೂಲ್ಯ ಜೀವಗಳ ರಕ್ಷಣೆ ಅದಕ್ಕಿಂತಲೂ ಮುಖ್ಯ ಎಂಬುದು ಕೇಂದ್ರ ಸರ್ಕಾರದ ಪರಮ ಧ್ಯೇಯವಾಗಿದೆ, ಇದಕ್ಕೆ ಸಮಗ್ರ ಭಾರತೀಯರೆಲ್ಲರ ಒಕ್ಕೊರಲಿನ ಬೆಂಬಲವೂ ದೇಶಾದ್ಯಂತ ಮೊಳಗುತ್ತಿದೆ.

ಈ ನಿಟ್ಟಿನಲ್ಲಿ ಪ್ರಾಣ ತೆತ್ತ ಅಮಾಯಕ ಜೀವಗಳ ಆತ್ಮಕ್ಕೆ ಶಾಂತಿ ನೀಡಲು, ನೊಂದ ಕುಟುಂಬಗಳಿಗೆ ನ್ಯಾಯ ಒದಗಿಸಲು, ಮುಂದೆಂದೂ ಭಾರತ ಹಾಗೂ ಭಾರತೀಯರ ಮೇಲೆ ಚಿತಾವಣೆ, ಆಕ್ರಮಣಗಳು ನಡೆಯದಿರಲು ಭಾರತ ಸರ್ಕಾರ ತೆಗೆದುಕೊಳ್ಳುವ ಯಾವುದೇ ನಿರ್ಧಾರವನ್ನು ಬೆಂಬಲಿಸಬೇಕಾಗಿರುವುದು ಅಪ್ಪಟ ದೇಶಪ್ರೇಮಿ ಮುಖ್ಯಮಂತ್ರಿಗಳ ಆದ್ಯತೆಯಾಗಬೇಕಾಗಿರುವುದು ಕರುನಾಡಿನ ಜನರ ನಿರೀಕ್ಷೆ ಹಾಗೂ ಒತ್ತಾಯವಾಗಿದೆ. ಇದನ್ನು ಮಾನ್ಯ ಮುಖ್ಯಮಂತ್ರಿಗಳು ಅರ್ಥಮಾಡಿಕೊಂಡು ದೇಶದ ಸುರಕ್ಷತೆಯ ವಿಷಯದಲ್ಲಿ ರಾಜಕೀಯ ಪ್ರೇರಿತ ಟೊಳ್ಳು ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸಲಿ ಎಂದು ಹೇಳಿದ್ದಾರೆ.

ಈ ನಡುವೆ ಸಿದ್ದರಾಮಯ್ಯ ಅವರ ಹೇಳಿಕೆ ವಿರುದ್ಧ ಜೆಡಿಎಸ್ ಕೂಡ ಕಿಡಿಕಾರಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಇದು ನಿಮ್ಮ ನಿಲುವೋ? ಅವರ ಪರ ಒಲವೋ? ಎಂದು ಪ್ರಶ್ನಿಸಿದೆ.

ಶಾಂತಿಪ್ರಿಯ ಭಾರತದಲ್ಲಿ ರಕ್ತದೋಕುಳಿ ಹರಿಸಿರುವ ಪಾಕಿಸ್ತಾನದ ಉಗ್ರರನ್ನು ಬುಡಸಮೇತ ಕಿತ್ತುಹಾಕಬೇಕು. ಭಯೋತ್ಪಾದನೆ ನಿಗ್ರಹದಲ್ಲಿ ಕೇಂದ್ರ ಸರ್ಕಾರ ತೆಗೆದುಕೊಳ್ಳುವ ತೀರ್ಮಾನಗಳಿಗೆ ಎಲ್ಲರೂ ಬದ್ಧರಾಗಿದ್ದೇವೆ, ನಾವು ಬೆಂಬಲಿಸುತ್ತೇವೆ ಎಂದು ಕಾಂಗ್ರೆಸ್ ಸ್ಪಷ್ಟಪಡಿಸಿದೆ. ಆದರೆ ನೀವ್ಯಾಕೆ ಹೀಗೆ ರಿವರ್ಸ್‌ ರಾಮಯ್ಯ ಎಂದು ಟೀಕಿಸಿದೆ.

ಪಾಕಿಸ್ತಾನದ ಮೇಲಿನ ನಿಮ್ಮ ಪ್ರೇಮ, ಪಾಕಿಸ್ತಾನದ ಮಾಧ್ಯಮಗಳಲ್ಲಿಯೂ ಕೊಂಡಾಡುತ್ತಿದ್ದಾರೆ. ಮನೆಗೆ ಮಾರಿ ಪರರಿಗೆ ಉಪಕಾರಿ ಎಂಬಂತೆ ಬಾಂಧವರ ಮೇಲೆ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಸರ್ಕಾರದ ತುಷ್ಟೀಕರಣ ರಾಜಕಾರಣ ಈಗ ಉಗ್ರ ಪೋಷಕ ಪಾಕಿಸ್ತಾನ, ಭಾರತದ ವಿರುದ್ಧವೇ ಧ್ವನಿ ಎತ್ತುವಂತೆ ಮಾಡಿದೆ. ಸಿದ್ದರಾಮಯ್ಯ ಅವರೇ ಮುಂದೆ ನಿಮಗೆ ಪಾಕಿಸ್ತಾನ ಸರ್ಕಾರ ಗೋಲ್ಡನ್ ವಿಸಾ ಕೊಟ್ಟು, ಅಲ್ಲಿನ ಪೌರತ್ವ ನೀಡಿ ಸನ್ಮಾನಿಸಿದರೂ ಆಶ್ಚರ್ಯವಿಲ್ಲ. ಕಾಶ್ಮೀರದಲ್ಲಿ ಹಿಂದೂಗಳ ನರಮೇಧ ನಡೆಸಿದ ಪಾಪಿ ಪಾಕಿಸ್ತಾನದ ಮತಾಂಧ ಉಗ್ರರಿಗೆ ಮಿಡಿಯುತ್ತಿರುವ ಕಾಂಗ್ರೆಸ್ ಪಕ್ಷದ ನಾಯಕರ ಹೃದಯಗಳು, ಭಾರತೀಯರಿಗೆ ಹೃದಯವನ್ನು ಘಾಸಿಗೊಳಿಸುತ್ತಿದೆ ಎಂದು ಹೇಳಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT