ಆರ್ ಅಶೋಕ್ 
ರಾಜಕೀಯ

ಇತರ ರಾಜ್ಯಗಳ ಮತ ವಂಚನೆ ಬಗ್ಗೆ ಮಾತಾಡುತ್ತಿಲ್ಲವೇಕೆ? ಗಾಂಧಿ ಕುಟುಂಬದ ಇತಿಹಾಸವೇ ಅಕ್ರಮ: ರಾಹುಲ್ ವಿರುದ್ಧ BJP ವಾಗ್ದಾಳಿ

ಸಮೀಕ್ಷೆಯ ಪ್ರಕಾರ ಬಿಜೆಪಿಗೆ 150 ಸ್ಥಾನ ಬರಬೇಕಿತ್ತು. ಆದರೆ ಬಂದಿದ್ದು 60 ಸ್ಥಾನ. ಹಾಗಾದರೆ ಕಾಂಗ್ರೆಸ್ ಕೂಡ ಕಳ್ಳೋಟಿನ ಮೂಲಕವೇ ಗೆದ್ದಿದೆ ಅಲ್ಲವೇ?

ಬೆಂಗಳೂರು: ಮತಗಳ್ಳತನ ಕುರಿತು ಭಾರತೀಯ ಚುನಾವಣಾ ಆಯೋಗದ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ತೀವ್ರವಾಗಿ ಕಿಡಿಕಾರಿದೆ.

ರಾಹುಲ್ ಗಾಂಧಿ ಆರೋಪ ಕುರಿತು ಪ್ರತಿಕ್ರಿಯೆ ನೀಡಿರುವ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್ ಅಶೋಕ ಅವರು, ಬಿಜೆಪಿಯೇತರ ರಾಜ್ಯಗಳಲ್ಲಿನ ಚುನಾವಣಾ ವಂಚನೆ ಬಗ್ಗೆ ಏಕೆ ಪ್ರಶ್ನಿಸುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.

ಸಮೀಕ್ಷೆಯ ಪ್ರಕಾರ ಬಿಜೆಪಿಗೆ 150 ಸ್ಥಾನ ಬರಬೇಕಿತ್ತು. ಆದರೆ ಬಂದಿದ್ದು 60 ಸ್ಥಾನ. ಹಾಗಾದರೆ ಕಾಂಗ್ರೆಸ್ ಕೂಡ ಕಳ್ಳೋಟಿನ ಮೂಲಕವೇ ಗೆದ್ದಿದೆ ಅಲ್ಲವೇ? ಎಂದು ಆಕ್ರೋಶ ವ್ಯಕ್ತಪಡಿಸಿದರು.

ಚುನಾವಣಾ ಆಯೋಗದ ಬಗ್ಗೆ ಇಲ್ಲಸಲ್ಲದ ಆರೋಪ ಮಾಡುತ್ತಿರುವ ರಾಹುಲ್ ಗಾಂಧಿ ಅವರು ನಮ್ಮ ದೇಶದ ಪ್ರಜಾಪ್ರಭುತ್ವಕ್ಕೆ ಕಳಂಕ ತರುವ ಪ್ರಯತ್ನ ಮಾಡುತ್ತಿದ್ದಾರೆ. ಜನಾದೇಶಕ್ಕೆ ತಲೆಬಾಗದೆ ತಮ್ಮ ಸತತ ಸೋಲುಗಳಿಗೆ ಸಬೂಬು ಹುಡುಕುವ ಹತಾಶ ಪ್ರಯತ್ನ ಮಾಡುತ್ತಿದ್ದಾರೆ. ಇದು ಮತದಾರರಿಗೆ ಕಾಂಗ್ರೆಸ್ ಪಕ್ಷ ಮಾಡುತ್ತಿರುವ ಅವಮಾನ ಎಂದು ಕಿಡಿಕಾರಿದ್ದಾರೆ.

ರಾಹುಲ್ ಗಾಂಧಿ ಆಟಂ ಬಾಂಬ್ ಸಿಡಿಸುತ್ತೇನ ಎಂದು ಘೋಷಿಸಿದ್ದರು. ಆದರೆ, ಅದು ಟುಸ್ ಪಟಾಕಿಯಾಗಿದೆ. ದೀಪಾವಳಿಗೆ ತಂದು ಉಳಿದಿದ್ದ ಕಳೆದ ವರ್ಷದ ಪಟಾಕಿ ಸಿಡಿಸಿ ನಗೆಪಟಾಲಿಗೆ ಗುರಿಯಾಗಿದ್ದಾರೆ. ಚುನಾವಣೆಯಲ್ಲಿ ಪ್ರತಿ ಬೂತ್‌ಗೆ ಬಿಎಲ್‌ಎಗಳನ್ನು (ಬೂತ್ ಲೆವೆಲ್ ಏಜೆಂಟ್) ಕಾಂಗ್ರೆಸ್ ನೀಡಿದೆ. ಅವರನ್ನು ಕೆಪಿಸಿಸಿ ಅಧ್ಯಕ್ಷರೇ ನೇಮಿಸಿದ್ದಾರೆ. ಮತದಾರರ ಪಟ್ಟಿಯಲ್ಲಿ ಸತ್ತವರ ಹೆಸರು ತೆಗೆದುಹಾಕುವುದು, ಹೊಸಬರನ್ನು ಸೇರಿಸುವುದು ಮೊದಲಾದ ಕೆಲಸವನ್ನು ಬಿಎಲ್‌ಎ ಮಾಡಬೇಕು. ಇಂತಹ ಬಿಎಲ್‌ಎಗಳನ್ನು ನೇಮಿಸಿದ ಕಾಂಗ್ರೆಸ್ ಏನು ತಪ್ಪು ಮಾಡಿಲ್ಲವೇ? ಎಂದು ಪ್ರಶ್ನಿಸಿದರು.

ಡಿ.ಕೆ.ಶಿವಕುಮಾರ್ ಬಳಿಯೇ ಮತದಾರರ ಪಟ್ಟಿ ಇದ್ದಾಗ, ಆಗಲೇ ಅಕ್ರಮದ ಬಗ್ಗೆ ದೂರು ನೀಡಬೇಕಿತ್ತು. ಇದರಲ್ಲಿ ಪ್ರಧಾನಿ ಪಾತ್ರ ಹೇಗೆ ಬರಲು ಸಾಧ್ಯ? ಬಿಜೆಪಿ ನಾಯಕರ ಪಾತ್ರವೇ ಇಲ್ಲ. ಪಂಚಾಯಿತಿ ಕಾರ್ಯದರ್ಶಿ, ಅಂಚೆಯವರು, ತೆರಿಗೆ ಸಂಗ್ರಹ ಮಾಡುವವರು, ಆರೋಗ್ಯ ಸಿಬ್ಬಂದಿ ಹೀಗೆ ಇವರೆಲ್ಲರೂ ಮತದಾರರ ಪಟ್ಟಿಗೆ ತಯಾರಿಯಲ್ಲಿ ಭಾಗವಹಿಸುತ್ತಾರೆ. ಇವರೆಲ್ಲರೂ ಬಿಜೆಪಿಯವರಾ? ಪಟ್ಟಿಗೆ ಅಕ್ರಮವಾಗಿ ಹೆಸರನ್ನು ಬಿಜೆಪಿಯವರು ಹೇಗೆ ಸೇರಿಸಲು ಸಾಧ್ಯ? ಎಂದು ಕೇಳಿದರು.

ಕೆಲ ರಾಜ್ಯಗಳಲ್ಲಿ ಕಾಂಗ್ರೆಸ್ ನಾಯಕರು ಬೋಗಸ್ ವೋಟ್‌ಗಳ ಅಕ್ರಮ ಮಾಡಿದ್ದಕ್ಕೆ ಬಂಧಿತರಾಗಿದ್ದಾರೆ. ಬೆಂಗಳೂರಿನ ಗಾಂಧಿನಗರದ ಒಂದು ಚಿಕ್ಕ ಮನೆಯಲ್ಲಿ 18 ಮುಸ್ಲಿಂ ಮತದಾರರಿದ್ದಾರೆ. ಒಂದೇ ಮನೆಯಲ್ಲಿ ಇಷ್ಟೊಂದು ವೋಟು ಇರಲು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದರು.

ಸರ್ವಜ್ಞನಗರ ಕ್ಷೇತ್ರದ ನಾಗವಾರ ವಾರ್ಡ್‌ನಲ್ಲಿ ಕಾಂಗ್ರೆಸ್ ಶಾಸಕರಿಗಿಂತಲೂ ಸಂಸದರಿಗೆ 5,965 ಹೆಚ್ಚುವರಿ ಮತ ಸಿಕ್ಕಿದೆ. ಹಾಗಾದರೆ ಕಾಂಗ್ರೆಸ್‌ಗೆ ಹೆಚ್ಚು ಮತ ಸಿಕ್ಕಿದ್ದು ಹೇಗೆ? ಎಚ್‌ಬಿಆರ್ ಲೇಔಟ್‌ನಲ್ಲಿ ಶಾಸಕರಿಗಿಂತಲೂ ಸಂಸದರಿಗೆ 3,646 ಮತ ಹೆಚ್ಚಾಗಿ ಸಿಕ್ಕಿದೆ. ಕಾಡುಗೊಂಡನಹಳ್ಳಿಯಲ್ಲಿ 3432 ಹೆಚ್ಚು ಮತ ಸಿಕ್ಕಿದೆ. ಹಾಗಾದರೆ ಇವೆಲ್ಲವನ್ನೂ ಸೇರಿಸಿದ್ದು ಯಾರು? ಸೋತ ಕೂಡಲೇ ಚುನಾವಣಾ ಆಯೋಗ ಸರಿ ಇಲ್ಲ ಎನ್ನುವುದು ಸರಿಯಲ್ಲ ಎಂದರು.

ವಿಧಾನಸಭಾ ಚುನಾವಣೆ ಬಳಿಕ, ಲೋಕಸಭಾ ಚುನಾವಣೆ ನಡೆಯಿತು. ಒಂದೇ ವರ್ಷದಲ್ಲಿ ಕೆಲವು ಹೊಸ ಮತದಾರರು ಬಂದಿದ್ದಾರೆ. ಪದ್ಮನಾಭನಗರದಲ್ಲಿ 57 ಸಾವಿರ ಮತ ನನಗೆ ಬಂದಿದೆ. ಇನ್ನೂ 20 ಸಾವಿರ ಬರಬೇಕಿತ್ತು. ಆದರೆ ಬೇರೆ ಕಡೆಯಿಂದ ಮುಸ್ಲಿಮರನ್ನು ತಂದು ಇಲ್ಲಿಗೆ ಸೇರಿಸಿದ್ದಾರೆ ಎಂದು ದೂರಿದರು.

ಕಂದಾಯ ಇಲಾಖೆ ಎಲ್ಲ ಚುನಾವಣೆ ನಡೆಸುತ್ತದೆ. ಎಲ್ಲರೂ ಕಾಂಗ್ರೆಸ್ ಸರ್ಕಾರದವರೇ ಆಗಿರುವಾಗ ಅಕ್ರಮವಾಗಲು ಹೇಗೆ ಸಾಧ್ಯ? ಈ ಹಿಂದೆ ಕಾಂಗ್ರೆಸ್ ಎಲ್ಲ ಕಡೆ ಅಧಿಕಾರದಲ್ಲಿದ್ದಾಗ ಕಳ್ಳ ಮತದಾನ ಸಾಮಾನ್ಯವಾಗಿತ್ತು. ಮತ ಪೆಟ್ಟಿಗೆಗಳನ್ನು ಎತ್ತಿಕೊಂಡು ಹೋಗುತ್ತಿದ್ದರು. ಪೂಲನ್ ದೇವಿಯಂತಹ ಡಕಾಯಿತರ ಆಡಳಿತವೇ ಎಲ್ಲ ಕಡೆ ನಡೆಯುತ್ತಿತ್ತು. ಅಂತಹ ಚುನಾವಣೆ ರಾಹುಲ್ ಗಾಂಧಿಗೆ ಈಗ ಬೇಕೆನೋ ಎಂದು ವ್ಯಂಗ್ಯವಾಡಿದರು.

ಚುನಾವಣೆಯಲ್ಲಿ ಸೋತಾಗ ಕಾಂಗ್ರೆಸ್ ಚುನಾವಣಾ ಆಯೋಗವನ್ನು ದೂಷಿಸದೆ. ಗೆದ್ದಾಗ, ಚುನಾವಣಾ ಆಯೋಗವು ಉತ್ತಮ ಕೆಲಸ ಮಾಡಿದೆ ಎಂದು ಅವರು ಭಾವಿಸುತ್ತಾರೆ. ಇಂದಿರಾಗಾಂಧಿ ಚುನಾವಣಾ ಅಕ್ರಮ ಮಾಡಿ ಗೆದ್ದು ಅನರ್ಹರಾಗಿದ್ದರು. ಅದೇ ರೀತಿ ನರೇಂದ್ರ ಮೋದಿಗೆ ಆಗಿಲ್ಲ. ಗಾಂಧಿ ಕುಟುಂಬದ ಇತಿಹಾಸವೇ ಅಕ್ರಮ. ಚುನಾವಣೆಯಲ್ಲಿ ಅಕ್ರಮ ಮಾಡಿಯೇ ಎಲ್ಲರೂ ಗೆದ್ದಿದ್ದಾರೆ ಎಂದು ಆರೋಪಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

H1B ವೀಸಾ ಪ್ರಕ್ರಿಯೆಯಲ್ಲಿ ಗಮನಾರ್ಹ ಬದಲಾವಣೆಯಾಗುತ್ತದೆ: ಅಮೆರಿಕ ವಾಣಿಜ್ಯ ಕಾರ್ಯದರ್ಶಿ ಲುಟ್ನಿಕ್

ಗಾಜಾ ಸಂಘರ್ಷ ಕೊನೆಗೆ ಡೊನಾಲ್ಡ್ ಟ್ರಂಪ್ 20 ಅಂಶಗಳ ಯೋಜನೆ: ಪ್ರಧಾನಿ ಮೋದಿ ಸ್ವಾಗತ

ಪುರುಷರ Asia Cup ಹೈಡ್ರಾಮಾ: ಮಹಿಳಾ ವಿಶ್ವಕಪ್ ನಲ್ಲಿ ಏನಾಗುತ್ತದೆ,ಅ.5ರ ಪಂದ್ಯ ಮೇಲೆ ಎಲ್ಲರ ಚಿತ್ತ

ನೆತನ್ಯಾಹು-ಟ್ರಂಪ್ ಗಾಜಾ ಶಾಂತಿ ಒಪ್ಪಂದ ಘೋಷಣೆ: ಹಂತ ಹಂತವಾಗಿ ಹಿಂದೆ ಸರಿಯಲಿರುವ ಇಸ್ರೇಲ್

ಕಲ್ಯಾಣ ಕರ್ನಾಟಕದಲ್ಲಿ ಭಾರೀ ಪ್ರವಾಹ: ಹಾನಿ ಬಗ್ಗೆ ಕುರಿತು ಇಂದು ಸಿಎಂ ವೈಮಾನಿಕ ಸಮೀಕ್ಷೆ

SCROLL FOR NEXT