ಬೆಂಗಳೂರು: 2023 ರ ವಿಧಾನಸಭಾ ಚುನಾವಣೆ ಮತ್ತು 2024 ರ ಲೋಕಸಭಾ ಚುನಾವಣೆಗಳ ವೇಳೆ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಕೇವಲ ಹತ್ತು ತಿಂಗಳಲ್ಲಿ 52,000 ಮತಗಳು ರಹಸ್ಯವಾಗಿ ಸೇರ್ಪಡೆಯಾಗಿವೆ ಎಂದು ಕಾಂಗ್ರೆಸ್ ನಾಯಕ ಮನ್ಸೂರ್ ಅಲಿ ಖಾನ್ ಅವರು ಶನಿವಾರ ಆರೋಪಿಸಿದ್ದಾರೆ.
2024ರ ಲೋಕಸಭಾ ಚುನಾವಣೆಯಲ್ಲಿ ಮನ್ಸೂರ್ ಅಲಿ ಖಾನ್ ಅವರು ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಪಿಸಿ ಮೋಹನ್ ವಿರುದ್ಧ ಸ್ಪರ್ಧೆಗಿಳಿದಿದ್ದರು. ಈ ಚುನಾವಣೆಯಲ್ಲಿ ಪಿಸಿ ಮೋಹನ್ ವಿರುದ್ಧ ಸೋಲು ಕಂಡಿದ್ದರು.
ಮಹದೇವಪುರದಲ್ಲಿ ಎಣಿಕೆ ಪ್ರಾರಂಭವಾಗುವವರೆಗೂ ಮನ್ಸೂರ್ ಅಲಿ ಖಾನ್ ಖಾನ್ ಸುಮಾರು 88,000 ಮತಗಳಿಂದ ಮುನ್ನಡೆಯಲ್ಲಿದ್ದರು. ಈ ಕ್ಷೇತ್ರದಲ್ಲಿ ಮತ ಎಣಿಕೆ ಆರಂಭವಾಗುತ್ತಿದ್ದಂತೆ, ಅವರ ಮುನ್ನಡೆ ಮಾಯವಾಯಿತು. ಬಿಜೆಪಿ ಅಭ್ಯರ್ಥಿಯ ಮತಗಳ ಸಂಖ್ಯೆ ಹೆಚ್ಚಾಯಿತು. ಈ ವೇಳೆ ಎಲ್ಲೋ ಏನೋ ತಪ್ಪಾಗಿದೆ ಎಂಬ ಅನುಮಾನ ಮೂಡಿತ್ತು. ಇದೀಗ ಸತ್ಯ ಬಹಿರಂಗವಾಗಿದೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಹೇಳಿದ್ದಾರೆ.
ಒಂದು ಕೊಠಡಿಯಲ್ಲಿ 68 ಮಂದಿ ವಾಸವಿರಲು ಸಾಧ್ಯವೇ? ಇದು ಕ್ಲೆರಿಕಲ್ ದೋಷವಲ್ಲ. ಇದು ನಮ್ಮ ಪ್ರಜಾಪ್ರಭುತ್ವದ ಅಡಿಪಾಯವನ್ನೇ ಹಾಳುಮಾಡಲು ಮಾಡಿರುವ ದೊಡ್ಡ ಹಗರಣ ಎಂಬುದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ ಎಂದು ಮನ್ಸೂರ್ ಅಲಿ ಖಾನ್ ಅವರು ಹೇಳಿದ್ದಾರೆ.
ಚುನಾವಣಾ ಆಯೋಗಕ್ಕೆ ಆರ್‌ಟಿಐ ಅರ್ಜಿಗಳನ್ನು ಸಲ್ಲಿಸಿದ್ದರೂ, ಯಾವುದೇ ಪ್ರತಿಕ್ರಿಯೆಗಳು ಸಿಗಲವಿಲ್ಲ. ಆದರೆ, ನಾವು ನಮ್ಮ ಹೋರಾಟವನ್ನು ನಿಲ್ಲಿಸಲಿಲ್ಲ. ಚುನಾವಣೆಯಲ್ಲಿ ಕನಿಷ್ಟ 33,000 ಜನರು ಮೊದಲ ಬಾರಿಯ ಮತದಾರರಾಗಿದ್ದರು. ಕೆಲವರು 90 ವರ್ಷ ವಯಸ್ಸಿನವರಾಗಿದ್ದರು. ಫಾರ್ಮ್ 6 ವರ್ಗದ ಅಡಿಯಲ್ಲಿ ಮೊದಲ ಬಾರಿಗೆ ಮತದಾರರಾಗಿರುವ ಅನೇಕರು 40, 50, 60 ಮತ್ತು 70 ರ ಹರೆಯದವರಾಗಿರಲು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದ್ದಾರೆ.
ಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಮಾತನಾಡಿ, ಹಗರಣ ಬಯಲಿಗೆಳೆಯುವ ಮುನ್ನ 6 ತಿಂಗಳೂ ನೂರಾರು ಕಾರ್ಯಕರ್ತರು ಹಲವಾರು ಕ್ಷೇತ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆಂದು ಹೇಳಿದ್ದಾರೆ.