ಬೆಂಗಳೂರು: ಪರಿಶಿಷ್ಟ ಜಾತಿಗಳಲ್ಲಿ ಆಂತರಿಕ ಮೀಸಲಾತಿ ಒದಗಿಸುವ ಗುರಿಯನ್ನು ಹೊಂದಿರುವ ನ್ಯಾಯಮೂರ್ತಿ ಎಚ್ ಎನ್ ನಾಗಮೋಹನ್ ದಾಸ್ ಆಯೋಗದ ವರದಿಯನ್ನು ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು 'ಅವೈಜ್ಞಾನಿಕ' ಎಂದು ಕರೆದಿದ್ದಾರೆ.
ಆಯೋಗದ ವರದಿಯನ್ನು ಆಧರಿಸಿದ ಆಂತರಿಕ ಮೀಸಲಾತಿಯ ಕುರಿತು ಮಂಗಳವಾರ ವಿಧಾನ ಪರಿಷತ್ತಿನಲ್ಲಿ ಚರ್ಚೆಯ ವೇಳೆ ಮಾತನಾಡಿರುವ ಅವರು, ನಾಗಮೋಹನ್ ದಾಸ್ ಆಯೋಗದ ವರದಿಯು ಜಾತಿಗಳನ್ನುಎ, ಬಿ, ಸಿ, ಡಿ ಮತ್ತು ಇ ಎಂದು ಐದು ವರ್ಗಗಳಾಗಿ ವಿಂಗಡಿಸಿದೆ. ಆದಿ ಕರ್ನಾಟಕ, ಆದಿ ಆಂಧ್ರ ಮತ್ತು ಆದಿ ದ್ರಾವಿಡ ಜಾತಿಗಳಲ್ಲದಿದ್ದರೂ ಅವುಗಳನ್ನು ಜಾತಿಗಳೆಂದು ಪರಿಗಣಿಸಿದೆ. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಎಸ್‌ಸಿ ಮೀಸಲಾತಿಯನ್ನು ಶೇಕಡಾ 15 ರಿಂದ 17 ಕ್ಕೆ ಹೆಚ್ಚಿಸಿದ್ದರು, ಎಸ್‌ಸಿಗಳನ್ನು 4 ಗುಂಪುಗಳಾಗಿ (ಎ, ಬಿ, ಸಿ ಮತ್ತು ಡಿ) ವಿಂಗಡಿಸಿದ್ದರು. ಎಸ್‌ಸಿ (ಎಡ) ಶೇ.6, ಎಸ್‌ಸಿ (ಬಲ) ಶೇ.5.5, ಸ್ಪೃಶ್ಯ ಶೇ.4.5 ಮತ್ತು ಇತರರಿಗೆ ಶೇ.1 ನೀಡಿದ್ದರು. ಆಯೋಗದ ವರದಿಯಲ್ಲಿ ಕೋಟ್ಯಂತರ ರೂಪಾಯಿಗಳನ್ನು ವ್ಯರ್ಥ ಮಾಡದೆ ಅದನ್ನು ಜಾರಿಗೆ ತರಬೇಕಿತ್ತು" ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದ ಬಳಿಕ ವರದಿಯನ್ನು ಜಾರಿಗೆ ತರುವುದಾಗಿ ಭರವಸೆ ನೀಡಿತ್ತು. ಆದರೆ, ಅಧಿಕಾರಕ್ಕೆ ಬಂದು 2 ವರ್ಷವಾದರೂ ಆಂತರಿಕ ಮೀಸಲಾತಿಯನ್ನು ಜಾರಿಗೊಳಿಸುವಲ್ಲಿ ವಿಳಂಬ ಮಾಡುತ್ತಿದೆ. ಸುಪ್ರೀಂ ಕೋರ್ಟ್ ರಾಜ್ಯಗಳಿಗೆ ಆಂತರಿಕ ಮೀಸಲಾತಿ ನೀಡಲು ಅನುಮತಿ ನೀಡಿದ ನಂತರವೂ ಜಾರಿ ಮಾಡಿಲ್ಲ. ಹರಿಯಾಣ, ಪಂಜಾಬ್ ಮತ್ತು ಆಂಧ್ರಪ್ರದೇಶಗಳಲ್ಲಿ ಈಗಾಗಲೇ ಮೀಸಲಾತಿ ನೀಡಿದೆ.
ಅನೇಕ ಎಸ್‌ಸಿಗಳನ್ನು ಸಮೀಕ್ಷೆಯಿಂದ ಹೊರಗಿಡಲಾಗಿದೆ. ಆಯೋಗದ ಪ್ರಾಯೋಗಿಕ ದತ್ತಾಂಶವು ಸರಿಯಾಗಿಲ್ಲ. ಎಸ್‌ಸಿ ಸಮೀಕ್ಷೆಯು 'ವಂಶಾವಳಿ'ಯನ್ನು ಆಧರಿಸಿರಬೇಕು. ಎಸ್‌ಸಿ ಸಮುದಾಯಗಳಿಗೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿದರು