ಬೆಂಗಳೂರು: ರಾಹುಲ್ ಗಾಂಧಿ ಅವರು ಕರ್ನಾಟಕದಿಂದ ಬಿಹಾರದವರೆಗೆ ಧ್ವನಿ ಎತ್ತಿರುವ ವಿಚಾರದ ಬಗ್ಗೆ ಇಡೀ ದೇಶವೇ ಚರ್ಚಿಸುತ್ತಿದೆ. ಅವರ ನೇತೃತ್ವದಲ್ಲಿ ಬಿಹಾರದಲ್ಲಿ ನಡೆಯುತ್ತಿರುವ 'ವೋಟ್ ಅಧಿಕಾರ ಯಾತ್ರೆ' ದೇಶದ ಪಾಲಿಗೆ ಗೇಮ್ ಚೇಂಜರ್ ಆಗಲಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಭಾನುವಾರ ಹೇಳಿದರು.
ರಾಹುಲ್ ಗಾಂಧಿ ನೇತೃತ್ವದಲ್ಲಿ ಬಿಹಾರದಲ್ಲಿ ನಡೆಯುತ್ತಿರುವ ‘ಮತ ಅಧಿಕಾರ ಯಾತ್ರೆ'ಯಲ್ಲಿ ಭಾಗವಹಿಸಿರುವ ಅವರು, ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದರು.
ಬಿಹಾರದಲ್ಲಿ ನಡೆದ ಯಾತ್ರೆ ದೇಶದ ಪಾಲಿಗೆ ದೊಡ್ಡ ಗೇಮ್ ಚೇಂಜರ್ ಆಗಲಿದೆ. ರಾಹುಲ್ ಗಾಂಧಿ ಅವರು ತಮಗಾಗಿ ಈ ಹೋರಾಟ ಮಾಡುತ್ತಿಲ್ಲ. ಸಂವಿಧಾನದತ್ತವಾಗಿ ದೇಶದ ಜನಸಾಮಾನ್ಯರಿಗೆ ಸಿಕ್ಕಿರುವ ಹಕ್ಕಿನ ರಕ್ಷಣೆಗೆ ಹೋರಾಡುತ್ತಿದ್ದಾರೆ. ಕರ್ನಾಟಕದಲ್ಲಿ ಏನಾಗಿದೆ ಎನ್ನುವುದು ನನಗೆ ಗೊತ್ತಿದೆ. ಮತದಾರರು ತಮ್ಮ ಹಕ್ಕನ್ನು ಪಡೆಯಲು ಅವಕಾಶ ಮಾಡಿಕೊಟ್ಟಿರುವ ಸುಪ್ರೀಂ ಕೋರ್ಟ್ ಬಗ್ಗೆ ಹೆಮ್ಮೆ ಇದೆ ಎಂದು ಹೇಳಿದರು.
ಬಿಹಾರದ ಜನ ಬದಲಾವಣೆ ಬಯಸಿದ್ದಾರೆ. ಇಲ್ಲಿನ ಯುವಕರು ಕೂಡ ಬೀದಿಗಿಳಿದು ಮಹಾಘಟಬಂಧನಕ್ಕೆ ಬೆಂಬಲ ನೀಡುತ್ತಿದ್ದಾರೆ. ನಮ್ಮ ಮಹಾಘಟಬಂಧನ ನೀಡಿರುವ ಗ್ಯಾರಂಟಿಗಳು ಜನರಿಗೆ ನೆರವಾಗಲಿದ್ದು, ನಾವು ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತೇವೆ. ಕಳೆದ ಬಾರಿ ಮಹಾಘಟಬಂಧನ ಅಲ್ಪಅಂತರದಲ್ಲಿ ಸೋತಿತ್ತು. ಈ ಬಾರಿ ಗೆದ್ದೇ ಗೆಲ್ಲುತ್ತೇವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದೇ ವೇಳೆ ಕರ್ನಾಟಕದಿಂದ ಪ್ರಾರಂಭವಾದ ರಾಹುಲ್ ಅವರ ರ್ಯಾಲಿಯ ಬಗ್ಗೆ ವಿವರಿಸಿದ ಅವರು, ಬಿಹಾರದ ಯುವಕರು ತೋರಿಸಿದ ಪ್ರತಿಕ್ರಿಯೆ ಅದ್ಭುತವಾಗಿದೆ ಎಂದು ಹೇಳಿದರು.
ಬಿಹಾರದ ಯುವಕರಿಗೆ ಬದಲಾವಣೆ ಬೇಕು ಮತ್ತು ಆ ಬದಲಾವಣೆ ಮಹಾಘಟ ಬಂಧನಕ್ಕಾಗಿ ಆಗಿದೆ... ಕರ್ನಾಟಕದಲ್ಲಿಯೂ ಈ ರೀತಿಯ ಪ್ರತಿಕ್ರಿಯೆಯನ್ನು ನೋಡಲಿಲ್ಲ. ಬಿಹಾರದ ಯುವಕರಿಗೆ ನಾನು ಧನ್ಯವಾದ ಹೇಳುತ್ತೇನೆ. ಕಳೆದ ಬಾರಿ, ಇಂಡಿಯಾ ಕೂಡ ಕ್ಷಣಾರ್ಧದಲ್ಲಿ ಅವಕಾಶವನ್ನು ಕಳೆದುಕೊಂಡಿತು, ಆದರೆ, ಈ ಬಾರಿ ನಾವು ಸರ್ಕಾರ ರಚಿಸುತ್ತೇವೆ ಎಂದು ತಿಳಿಸಿದರು.