ಕರ್ನಾಟಕ ಕಾಂಗ್ರೆಸ್ ನಲ್ಲಿ ಸಿಎಂ ಹುದ್ದೆಯ ಗೊಂದಲಗಳ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇಂದು ಮಂಗಳವಾರ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸದಾಶಿವನಗರ ನಿವಾಸದಲ್ಲಿ ಉಪಾಹಾರ ಸಭೆ ಏರ್ಪಡಿಸಿದ್ದರು. ಹೈಕಮಾಂಡ್ ನಿರ್ದೇಶನದ ಮೇರೆಗೆ ಈ ಬ್ರೇಕ್ ಫಾಸ್ಟ್ ಮೀಟಿಂಗ್ ನ್ನು ಉಭಯ ನಾಯಕರು ಆಯೋಜಿಸಿದರು ಎಂದು ಮೂಲಗಳು ತಿಳಿಸಿವೆ.
ಮುಖ್ಯಮಂತ್ರಿ ಅವರನ್ನು ಇಂದು ಬೆಳಗ್ಗೆ ತಮ್ಮ ನಿವಾಸಕ್ಕೆ ಡಿ ಕೆ ಶಿವಕುಮಾರ್ ಮತ್ತು ಅವರ ಸಹೋದರ, ಮಾಜಿ ಸಂಸದ ಡಿ.ಕೆ. ಸುರೇಶ್ ಬರಮಾಡಿಕೊಂಡರು. ಇಬ್ಬರು ಉನ್ನತ ನಾಯಕರ ನಡುವಿನ ಸಿಎಂ ಹುದ್ದೆ ಭಿನ್ನಮತವನ್ನು ಶಮನಗೊಳಿಸುವ ಪಕ್ಷದ ಪ್ರಯತ್ನಗಳ ಭಾಗವಾಗಿ ನಡೆದ ಇದೇ ರೀತಿಯ ಉಪಾಹಾರ ಸಭೆಗೆ ಶಿವಕುಮಾರ್ ಸಿಎಂ ಅವರ ಅಧಿಕೃತ ನಿವಾಸಕ್ಕೆ ಹೋದ ಮೂರು ದಿನಗಳ ನಂತರ ಇಂದಿನ ಭೇಟಿ ನಡೆದಿದೆ.
ಕಾಂಗ್ರೆಸ್ ದೃಷ್ಟಿಕೋನದಡಿಯಲ್ಲಿ ಉತ್ತಮ ಆಡಳಿತ ಮತ್ತು ನಮ್ಮ ರಾಜ್ಯದ ನಿರಂತರ ಅಭಿವೃದ್ಧಿಗೆ ನಮ್ಮ ಬದ್ಧತೆಯನ್ನು ನಾವು ಪುನರುಚ್ಚರಿಸುತ್ತಿರುವುದರಿಂದ ಇಂದು ನನ್ನ ನಿವಾಸದಲ್ಲಿ ಸಿಎಂ ಅವರಿಗೆ ಉಪಾಹಾರ ಕೂಟ ಆಯೋಜಿಸಿದ್ದೆ ಎಂದು ಡಿ ಕೆ ಶಿವಕುಮಾರ್ 'ಎಕ್ಸ್' ನಲ್ಲಿ ಪೋಸ್ಟ್ ಮಾಡಿದ್ದಾರೆ.
ನಿನ್ನೆ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡುವ ವೇಳೆ ಡಿ ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ "ಸಹೋದರರಂತೆ ಕೆಲಸ ಮಾಡುತ್ತಿದ್ದೇವೆ", ಸರ್ಕಾರದ ಭರವಸೆಗಳನ್ನು ಈಡೇರಿಸಲು ಬದ್ಧರಾಗಿದ್ದೇವೆ ಎಂದು ಹೇಳಿದ್ದರು. ರಾಜ್ಯ ಕಾಂಗ್ರೆಸ್‌ನಲ್ಲಿ ಗುಂಪುಗಾರಿಕೆಯ ಬಗ್ಗೆ ತಳ್ಳಿಹಾಕಿ ಇವೆಲ್ಲ ಕೆಲವು ಮಾಧ್ಯಮಗಳು ಮತ್ತು ವಿರೋಧ ಪಕ್ಷಗಳ ಸೃಷ್ಟಿಯಷ್ಟೆ ಎಂದಿದ್ದರು.
ಕುಣಿಗಲ್ ಶಾಸಕ ಎಚ್.ಡಿ. ರಂಗನಾಥ್ (ಶಿವಕುಮಾರ್ ಅವರ ಸಂಬಂಧಿ) ಇಬ್ಬರು ನಾಯಕರೊಂದಿಗೆ ಉಪಾಹಾರ ಕೂಟಕ್ಕೆ ಸೇರಿಕೊಂಡರು. ಇಂದಿನ ಮೀಟಿಂಗ್ ನಲ್ಲಿ ಸಸ್ಯಾಹಾರ ಮತ್ತು ಮಾಂಸಾಹಾರ ಖಾದ್ಯಗಳ ಸಂಯೋಜನೆಯಿತ್ತು.
ಪಕ್ಷದ ನಾಯಕತ್ವದಿಂದ ಆರಂಭವಾದ ಕಳೆದ ಶನಿವಾರದ ಸಿಎಂ ಮನೆಯ ಮೀಟಿಂಗ್ ನಾಯಕತ್ವದ ವಿಷಯದ ಮೇಲಿನ ಬಿಕ್ಕಟ್ಟನ್ನು ನಿವಾರಿಸುವ ಗುರಿಯನ್ನು ಹೊಂದಿತ್ತು. ನಂತರ ಇಬ್ಬರೂ ನಾಯಕರು ಯಾವುದೇ ಗೊಂದಲವಿಲ್ಲ ಎಂದು ಮಾಧ್ಯಮಗಳ ಮುಂದೆ ಹೇಳಿಕೊಂಡರು. ಹೈಕಮಾಂಡ್ ನಿರ್ಧಾರಗಳಿಗೆ ಬದ್ಧರಾಗಿರುವುದಾಗಿ ಪುನರುಚ್ಚರಿಸಿದರು.
ಡಿಸೆಂಬರ್ 8 ರಂದು ಪ್ರಾರಂಭವಾಗಲಿರುವ ಬೆಳಗಾವಿ ವಿಧಾನಸಭಾ ಅಧಿವೇಶನದೊಂದಿಗೆ, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ ಎಂಬ ಸೂಚನೆಯಾಗಿ ಈ ಹೊಸ ಸ್ನೇಹಪರತೆಯ ಪ್ರದರ್ಶನವನ್ನು ತೋರಿಸಿಕೊಂಡರು.
2023 ರಲ್ಲಿ ಪಕ್ಷ ಅಧಿಕಾರ ವಹಿಸಿಕೊಂಡಾಗ ಒಪ್ಪಂದಕ್ಕೆ ಬರಲಾಗಿತ್ತು ಎಂದು ಹೇಳಲಾಗುವ "ಅಧಿಕಾರ ಹಂಚಿಕೆ" ಸೂತ್ರದ ಚರ್ಚೆಯ ನಡುವೆ, ನವೆಂಬರ್ 20 ರಂದು ಕಾಂಗ್ರೆಸ್ ಸರ್ಕಾರ ತನ್ನ ಐದು ವರ್ಷಗಳ ಅವಧಿಯ ಅರ್ಧಹಾದಿ ದಾಟಿದ ನಂತರ, ಸಂಭಾವ್ಯ ಬದಲಾವಣೆಯ ಬಗ್ಗೆ ಊಹಾಪೋಹಗಳು ಸಾಕಷ್ಟು ಎದ್ದವು.
ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರು ಉಪಾಹಾರ ಕೂಟವನ್ನು "ಒಳ್ಳೆಯ ಬೆಳವಣಿಗೆ" ಎಂದು ಬಣ್ಣಿಸಿದ್ದಾರೆ. ಏನಾದರೂ ಸಮಸ್ಯೆಗಳು ನಾಯಕರ ಮಧ್ಯೆ ಮತ್ತು ಪಕ್ಷದೊಳಗೆ ಇದ್ದರೆ ಬಗೆಹರಿಯುತ್ತದೆ ಎಂದಿದ್ದಾರೆ.
"ನಮ್ಮ ನಾಯಕರು ಮತ್ತೆ ಉಪಾಹಾರಕ್ಕಾಗಿ ಒಟ್ಟಿಗೆ ಸೇರುತ್ತಿರುವುದು ಒಳ್ಳೆಯದು. ಕಳೆದ ಒಂದು ತಿಂಗಳಿನಿಂದ ಏನೇ ನಡೆದರೂ ಶಾಂತಿಯುತ ಇತ್ಯರ್ಥವಾಗಬೇಕೆಂದು ನಾವು ಬಯಸುತ್ತೇವೆ. ಹೈಕಮಾಂಡ್ ಸೂಚಿಸಿದಂತೆ, ಅವರು ಎರಡನೇ ಬಾರಿಗೆ ಸಭೆ ಸೇರುತ್ತಿದ್ದಾರೆ. ಎಲ್ಲಾ ಸಮಸ್ಯೆಗಳು ಇತ್ಯರ್ಥವಾಗುತ್ತವೆ ಎಂದು ನಾನು ಭಾವಿಸುತ್ತೇನೆ" ಎಂದು ಇಂದು ಬೆಳಗ್ಗೆ ಸುದ್ದಿಗಾರರ ಜೊತೆ ಮಾತನಾಡುವ ವೇಳೆ ಹೇಳಿದ್ದರು.
ಇದು ಕೇವಲ ಪರಸ್ಪರ ಉಪಾಹಾರ ಸಭೆ ಹೊರತು ಬೇರೇನೂ ಅಲ್ಲ. ಸಿದ್ದರಾಮಯ್ಯ ಅವರು ಶಿವಕುಮಾರ್ ಅವರಿಗೆ ಕರೆ ಮಾಡಿದ್ದರು, ಈಗ ಶಿವಕುಮಾರ್ ಅವರು ಸಿದ್ದರಾಮಯ್ಯ ಅವರಿಗೆ ಕರೆ ಮಾಡಿ ಉಪಾಹಾರ ಕೂಟಕ್ಕೆ ಕರೆದಿದ್ದಾರೆ. ನಾವು ಇದನ್ನು ಒಳ್ಳೆಯ ಬೆಳವಣಿಗೆ ಎಂದು ನೋಡುತ್ತೇವೆ ಎಂದು ಹೇಳಿದರು.
ಉಪಾಹಾರ ಸಭೆಗೆ ಇತರ ನಾಯಕರನ್ನು ಆಹ್ವಾನಿಸದಿರುವ ಬಗ್ಗೆ ಮಾತನಾಡಿದ ಪರಮೇಶ್ವರ್, ನಾವು ಸಾಮಾನ್ಯವಾಗಿ ಸಿಎಲ್‌ಪಿ (ಕಾಂಗ್ರೆಸ್ ಶಾಸಕಾಂಗ ಪಕ್ಷ) ಸಭೆಯನ್ನು ನಡೆಸುತ್ತೇವೆ, ಅದರ ನಂತರ ಒಟ್ಟಿಗೆ ಭೋಜನ ಮಾಡಲಾಗುತ್ತದೆ. ಅದರಲ್ಲಿ ಯಾವುದೇ ತಪ್ಪಿಲ್ಲ. ಎಲ್ಲವೂ ಸರಾಗವಾಗಿ ನಡೆಯುತ್ತಿದೆ ಎಂದರು.
ಕೆಲವು ವರ್ಗಗಳಿಂದ ತಮ್ಮನ್ನು ಮುಖ್ಯಮಂತ್ರಿಯಾಗಿ ನೋಡಬೇಕೆಂಬ ಬೇಡಿಕೆಗೆ ಸಂಬಂಧಿಸಿದಂತೆ ಪರಮೇಶ್ವರ್, ವಿಭಿನ್ನ ಜನರು ವಿಭಿನ್ನ ಆಕಾಂಕ್ಷೆಗಳನ್ನು ಹೊಂದಿರುತ್ತಾರೆ. ಅದು ತಪ್ಪೆಂದು ನಾನು ಭಾವಿಸುವುದಿಲ್ಲ. ಸ್ವಾಭಾವಿಕವಾಗಿ, ಜನರು ತಮ್ಮದೇ ಆದ ನಾಯಕರನ್ನು ಮುಖ್ಯಮಂತ್ರಿಯಾಗಿ ನೋಡಲು ಬಯಸುತ್ತಾರೆ, ಸಮಯ ಬಂದಾಗ ತಮ್ಮ ಆಕಾಂಕ್ಷೆಗಳನ್ನು ವ್ಯಕ್ತಪಡಿಸುತ್ತಾರೆ ಎಂದರು.