ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕಾರ್ಟಿಯರ್ ಕಂಪನಿ ವಾಚ್ ಧರಿಸಿದ್ದು, ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ಈ ಬಗ್ಗೆ ಮಾಹಿತಿ ನೀಡಿಲ್ಲ ಎಂದು ಬಿಜೆಪಿ ಆರೋಪಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು, ಅಫಿಡವಿಟ್‍ನಲ್ಲಿ ಡಿ.ಕೆ.ಶಿವಕುಮಾರ್ ಅವರು ಒಂದು ರೋಲೆಕ್ಸ್ ವಾಚ್ ಬೆಲೆಯನ್ನು ರೂ.9 ಲಕ್ಷ, ಹ್ಯುಬ್ಲೋ ವಾಚ್ ಬೆಲೆಯನ್ನು ರೂ.23,90,246 ಎಂದು ನಮೂದಿಸಿದ್ದಾರೆ. ಅವರಿಬ್ಬರ ಕೈಯಲ್ಲಿ ಇರುವ ಸಾಂಟೋಸ್ ಕಾರ್ಟಿಯರ್ ಕಂಪನಿಯ ವಾಚ್ ದರ ರೂ.43 ಲಕ್ಷ ಇದೆ. ತೆರಿಗೆ ಸೇರಿ ರೂ47 ಲಕ್ಷ ಆಗುತ್ತದೆ. ಈ ವಾಚ್‌ನ ಮಾಹಿತಿ ಅಫಿಡವಿಟ್‌ನಲ್ಲಿ ಇಲ್ಲ. ಇದು ಕಳವು ಮಾಡಿದ ವಾಚ್ ಇರಬಹುದೇ? ಖರೀದಿಸಿದ್ದರೆ ಈ ಬಗ್ಗೆ ದಾಖಲೆ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ನೀವೇ ಹೇಳಿಕೊಂಡಂತೆ ನೀವು ತೋರಿಸುತ್ತಿರುವ ಹಾಗೂ ನಿಮ್ಮ ಮಣಿಕಟ್ಟಿನಲ್ಲಿ ಮಿಂಚುತ್ತಿರುವ “ಕಾರ್ಟಿಯರ್” ವಾಚ್ 7–8 ವರ್ಷ ಹಳೆಯದು. ಆದರೆ ನಿಮ್ಮ 2018 ಮತ್ತು 2023ರ ಚುನಾವಣಾ ಅಫಿಡವಿಟ್‌ಗಳಲ್ಲಿ ನೀವು ಈ “ಕಾರ್ಟಿಯರ್” ವಾಚ್ ಬಗ್ಗೆ ಎಲ್ಲಿಯೂ ಉಲ್ಲೇಖ ಮಾಡಿಲ್ಲ. 2018: ರೂ. 9 ಲಕ್ಷ ಮೌಲ್ಯದ ರೋಲೆಕ್ಸ್ ವಾಚ್, 2023: ರೂ. 9 ಲಕ್ಷದ ರೋಲೆಕ್ಸ್ ಹಾಗೂ ರೂ. 23,90,246 ಮೌಲ್ಯದ ಹ್ಯೂಬ್ಲಾಟ್ ವಾಚ್ ಇರುವುದಾಗಿ ಅಫಿಡವಿಟ್‌ನಲ್ಲಿ ಉಲ್ಲೇಖಿಸಲಾಗಿದೆ.
ಹಾಗಾದರೆ ಈಗ ನೀವು ತೋರಿಸುತ್ತಿರುವ "ಕಾರ್ಟಿಯರ್" ವಾಚ್ 7–8 ವರ್ಷ ಹಳೆಯದು ಎಂತಾಗಿದ್ದರೆ — 2018 ರ ಚುನಾವಣೆಯಲ್ಲೇ ಅದರ ವಿವರವನ್ನು ಘೋಷಿಸಬೇಕಿತ್ತು ಅಲ್ಲವೆ? 2023 ರ ಚುನಾವಣೆಯಲ್ಲೂ ಅದನ್ನು ಘೋಷಿಸಿಲ್ಲ. ಅಂದರೆ, ಚುನಾವಣಾ ಆಯೋಗಕ್ಕೆ ತಪ್ಪು ಮಾಹಿತಿ, ತಪ್ಪು ಅಫಿಡವಿಟ್ ಸಲ್ಲಿಸಿದ್ದೀರಾ? ಎಂದು ಪ್ರಶ್ನಿಸಿದ್ದಾರೆ.
ನೀವು 7–8 ವರ್ಷಗಳ ಹಿಂದೆ ಖರೀದಿಸಿದ "ಕಾರ್ಟಿಯರ್" ವಾಚ್ 2018 ಮತ್ತು 2023 ರ ಎಲೆಕ್ಷನ್ ಅಫಿಡವಿಟ್ ನಿಂದ ಎಲ್ಲಿ ಮಾಯವಾಗಿ ಹೋಗಿತ್ತು? ಅದು ಅಫಿಡವಿಟ್‌ನಲ್ಲಿ ಕಾಣಿಸದಿರುವುದು ಯಾಕೆ? ಈ ಕಾರ್ಟಿಯರ್ ವಾಚ್‌ನ ನಿಜವಾದ ಮೂಲ ಯಾವುದು? ಅದನ್ನು ನೀವು ಯಾವಾಗ, ಹೇಗೆ ಮತ್ತು ಯಾರಿಂದ ಪಡೆದಿರಿ? ಖರೀದಿಸಿದರೆ — ಹಣದ ಮೂಲವೇನು? ಚುನಾವಣಾ ಅಫಿಡವಿಟ್‌ಗಳಲ್ಲಿ ಇದನ್ನು ಯಾಕೆ ಮರೆಮಾಚಿದ್ದೀರಿ? ದಾಖಲೆಗಳು ಮತ್ತು ಬಿಲ್‌ಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸುವಿರಾ ಎಂದು ಒತ್ತಾಯಿಸಿದ್ದಾರೆ.
ಇದೇ ವೇಳೆ ಸಿದ್ದರಾಮಯ್ಯ ಕುರಿತಂತೆ ಮಾತನಾಡಿದ ಅವರು, ಸಿದ್ದರಾಮಯ್ಯ ವಾಚ್‍ಗಳ ಪ್ರಿಯರು, ಅವರ ವಾಚ್‍ಗಳು ಕೋಟ್ಯಂತರ ಮೌಲ್ಯದ್ದಾಗಿವೆ. ಲಕ್ಷಾಂತರ ಬೆಲೆಯ ಶೂ ಖರೀದಿಸಿದ್ದಾರೆ. ಒಂದೂವರೆ ವರ್ಷಗಳ ಹಿಂದೆ ಎಂಟು ವಾಚ್‌ಗಳಿದ್ದವು. ಈಗ 18ರಿಂದ 19 ವಾಚ್‌ಗಳಿವೆ ಎಂಬ ಮಾಹಿತಿ ಸಿಕ್ಕಿದೆ. ಎಲ್ಲ ವಾಚ್‌ಗಳ ಖರೀದಿಯ ಮಾಹಿತಿ ನೀಡಬೇಕು ಎಂದು ಆಗ್ರಹಿಸಿದರು.
ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಮಾತನಾಡಿ,ಕರ್ನಾಟಕದಲ್ಲಿ ಈಗ ಶೇ.63 ಕಮಿಷನ್ ಸರ್ಕಾರವಿದೆ ಎಂದು ಆರೋಪಿಸಿದರು.
ಇದೇ ವೇಳೆ ಮುಡಾ ನಿವೇಶನಗಳ ಹಂಚಿಕೆ ಮತ್ತು ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಹಣ ದುರುಪಯೋಗ ಸೇರಿದಂತೆ ರಾಜ್ಯದಲ್ಲಿ ನಡೆದಿರುವ ಹಗರಣಗಳ ಬಗ್ಗೆ ಸಿಬಿಐ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.
ಇತ್ತೀಚಿನ ಚುನಾವಣೆಗಾಗಿ ಕಾಂಗ್ರೆಸ್ ಬಿಹಾರದ ತನ್ನ ಘಟಕಕ್ಕೆ ಸುಮಾರು 300 ಕೋಟಿ ರೂ.ಗಳನ್ನು ಕಳುಹಿಸಿತ್ತು. ಬೆಳಗಾವಿ ಅಧಿವೇಶನದಲ್ಲಿ ಈ ವಿಷಯದ ಕುರಿತು ಧ್ವನಿ ಎತ್ತುತ್ತೇವೆಂದು ಹೇಳಿದರು.