ಬೆಳಗಾವಿ: ಆಡಳಿತ ಮತ್ತು ರಾಜಕೀಯದಲ್ಲಿ ದೆಹಲಿ ಭೇಟಿ ಸಾಮಾನ್ಯವಾಗಿರುತ್ತದೆ. ಇದಕ್ಕೆ ಮಹತ್ವ ನೀಡುವ ಅಗತ್ಯವಿಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿಯವರು ಮಂಗಳವಾರ ಹೇಳಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದ ಕೆಲಸದ ನಿಮಿತ್ತ ದೆಹಲಿಗೆ ಭೇಟಿ ನೀಡುವುದು ಸಾಮಾನ್ಯ ಭೇಟಿ ವೇಳೆ ಸಾಂಸ್ಥಿಕ ವಿಷಯಗಳ ಕುರಿತು ಕುರಿತು ಚರ್ಚೆಗಳನ್ನು ನಡೆಸಲಾಗುತ್ತದೆ. ಅದರಲ್ಲಿ ವಿಶೇಷವಾದದ್ದು ಏನೂ ಇರುವುದಿಲ್ಲ ಎಂದು ಹೇಳಿದರು.
ಕರ್ನಾಟಕ 7 ಕೋಟಿ ಜನಸಂಖ್ಯೆ ಮತ್ತು ಸುಮಾರು 4 ಲಕ್ಷ ಕೋಟಿ ರೂ. ಬಜೆಟ್ ಹೊಂದಿರುವ ದೊಡ್ಡ ರಾಜ್ಯವಾಗಿದೆ. ಸರ್ಕಾರದಲ್ಲಿ ಎರಡು ಪ್ರಮುಖ ಸಚಿವಾಲಯಗಳನ್ನು ನಿರ್ವಹಿಸುತ್ತಿರುವಾಗ ಹಾಗೂ ಪಕ್ಷ ಸಂಘಟನೆಯ ನೇತೃತ್ವ ವಹಿಸಿರುವಾಗ ಅಗತ್ಯ ಬಿದ್ದಾಗಲೆಲ್ಲಾ ದೆಹಲಿಗೆ ಪ್ರಯಾಣಿಸುವುದು ಅನಿವಾರ್ಯವಾಗುತ್ತದೆ ಎಂದು ತಿಳಿಸಿದರು.
ಇದೇ ವೇಳೆ ರಾಹುಲ್ ಗಾಂಧಿಗೆ ರಾಜಣ್ಣ ಅವರು ಬರೆದಿರುವ ಪತ್ರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ರಾಜಣ್ಣ ಅವರು ದೆಹಲಿಗೆ ಹೋಗಿ ಹೈಕಮಾಂಡ್ ಭೇಟಿ ಮಾಡಿ, ಅಭಿಪ್ರಾಯ ವ್ಯಕ್ತಪಡಿಸುವಂತೆ ಮೊದಲೇ ಸೂಚಿಸಿದ್ದೆವು. ಆವರು ಪತ್ರ ಬರೆಯುವ ನಿರ್ಧಾರ ಕೈಗೊಂಡಿದ್ದಾರೆಂದು ಹೇಳಿದರು.
ರಾಜಣ್ಣ ಮತ್ತು ಶಿವಕುಮಾರ್ ನಡುವಿನ ಭೇಟಿ ಕುರಿತು ಹುಟ್ಟಿಕೊಂಡಿರುವ ಉಹಾಪೋಹ ಕುರಿತ ಪ್ರಶ್ನೆಗೆ ಉತ್ತರಿಸಿ, ಪಕ್ಷದ ನಾಯಕರು ಪರಸ್ಪರ ಭೇಟಿಯಾಗುವುದರಲ್ಲಿ ಯಾವುದೇ ತಪ್ಪಿಲ್ಲ. ರಾಜಕೀಯದಲ್ಲಿ ಶೀತಲ ಸಮರ ಸಾಮಾನ್ಯ, ಆದರೆ ನಾವೆಲ್ಲರೂ ಒಂದೇ ಪಕ್ಷಕ್ಕೆ ಸೇರಿದವರು. ರಾಜಣ್ಣ ಶಿವಕುಮಾರ್ ಅವರನ್ನು ಭೇಟಿಯಾದರೆ ಯಾವುದೇ ಸಮಸ್ಯೆ ಇಲ್ಲ ಎಂದರು.
ಕುರ್ಚಿ ಕದನ ಕುರಿತು ಹೈಕಮಾಂಡ್ ಮೌನ ಕುರಿತ ಪ್ರಶ್ನೆಗೆ ಉತ್ತರಿಸಿ, ಈ ವಿಚಾರ ತಾನಾಗೇ ಇತ್ಯರ್ಥವಾಗಲಿದೆ. ಅಂತಿಮ ಹಂತಕದಲ್ಲಿ ಹೈಕಮಾಂಡ್ ನಿರ್ಧಾರ ಕೈಗೊಳ್ಳುತ್ತದೆ. ಇದೀಗ ಈ ವಿಚಾರ ಇಲ್ಲಿಗೆ ಮುಕ್ತಾಯಗೊಳ್ಳುತ್ತದೆ ಎಂದು ಭಾವಿಸುತ್ತೇನೆಂದು ತಿಳಿಸಿದರು.
ಹೈಕಮಾಂಡ್ ಬೆಂಬಲ ಕುರಿತ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿ, ಅಧಿಕಾರ ವಹಿಸಿಕೊಳ್ಳುವ ಸಮಯದಲ್ಲಿ, ಎರಡೂವರೆ ವರ್ಷಗಳ ಅವಧಿಯ ಬಗ್ಗೆ ಯಾವುದೇ ನಿರ್ಧಾರವಿರಲಿಲ್ಲ. ಹೀಗಾಗಿ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರೆಯುವುದಾಗಿ ಸಿದ್ದರಾಮಯ್ಯ ಅವರು ದೃಢವಾದ ಧ್ವನಿಯಲ್ಲಿ ಹೇಳಿದ್ದಾರೆ. ಈ ಹೇಳಿಕೆ ಬೇರ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದರು.
ಡಿಕೆ.ಶಿವಕುಮಾರ್ ದೆಹಲಿ ಭೇಟಿ ಕುರಿತು ಮಾತನಾಡಿ, ಶಿವಕುಮಾರ್ ಅವರು ರಾಹುಲ್ ಗಾಂಧಿ ಭೇಟಿ ಮಾಡಿರುವ ಕುರಿತು ತಿಳಿದಿಲ್ಲ. ದೆಹಲಿ ಭೇಟಿ ವೇಳೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಹುದ್ದೆಯ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ಅಂತಹ ಚರ್ಚೆಗಳು ನಡೆದರೆ, ನಾನೇ ತಿಳಿಸುತ್ತೇನೆ ಎಂದು ಹೇಳಿದರು.
ಡಿ.27ರಂದು ಸಿಡಬ್ಲ್ಯೂಸಿ ಮೀಟಿಂಗ್ ಇದೆ, ಆ ಸಭೆಗೆ ಸಿಎಂ ಮತ್ತು ಡಿಸಿಎಂಗೆ ಆಹ್ವಾನ ಇದ್ದರೆ ಮಾತ್ರ ಹೋಗುತ್ತಾರೆ. ಆಹ್ವಾನ ಇಲ್ಲದೆ ಹೋಗಲ್ಲ. ಡಿ.ಕೆ. ಶಿವಕುಮಾರ್ ಎರಡೆರಡು ಜವಾಬ್ದಾರಿಯಲ್ಲಿದ್ದಾರೆ. ಒಂದೆಡೆ ಇಲಾಖೆ, ಮತ್ತೊಂದೆಡೆ ಕೆಪಿಸಿಸಿ ಅಧ್ಯಕ್ಷರಾಗಿದ್ದಾರೆ. ಹೀಗಾಗಿ ಅವರು ದೆಹಲಿಗೆ ಹೋಗೋದು ಸಾಮಾನ್ಯ. ಅದರಲ್ಲೂ ನಮ್ಮದು ದೊಡ್ಡ ರಾಜ್ಯ. 7 ಕೋಟಿ ಜನಸಂಖ್ಯೆ ಇದೆ. 4 ಲಕ್ಷ ಕೋಟಿ ರೂ. ಬಜೆಟ್ ಇದೆ. ಹೀಗಾಗಿ ದೆಹಲಿಗೆ ಹೋಗಲೇಬೇಕಾಗುತ್ತದೆ ಎಂದರು.