ಬೆಂಗಳೂರು: ಉತ್ತರ ಕರ್ನಾಟಕದ ಅಭಿವೃದ್ಧಿಯನ್ನು ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ನಿರ್ಲಕ್ಷಿಸಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ನಾಯಕ ಆರ್. ಅಶೋಕ್ ಅವರು ಬುಧವಾರ ಆರೋಪಿಸಿದ್ದಾರೆ.
ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಇತ್ತೀಚಿನ ವಿಧಾನಸಭಾ ಅಧಿವೇಶನದಲ್ಲೇ ಉತ್ತರ ಕರ್ನಾಟಕದ ಕಾಂಗ್ರೆಸ್ ಶಾಸಕರೇ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆ ಭಾಗದಲ್ಲಿ ಯಾವುದೇ ಅಭಿವೃದ್ಧಿ ಆಗಿಲ್ಲ ಎಂದು ಕೆಲವು ಕಾಂಗ್ರೆಸ್ ಶಾಸಕರು ಪ್ರತ್ಯೇಕ ರಾಜ್ಯದ ಬೇಡಿಕೆಯನ್ನೂ ಮುಂದಿಟ್ಟಿದ್ದಾರೆಂದು ಹೇಳಿದರು.
ಸಿದ್ದರಾಮಯ್ಯ ಅವರು ಇದುವರೆಗೆ ದಾಖಲೆಯ 16 ರಾಜ್ಯ ಬಜೆಟ್‌ಗಳನ್ನು ಮಂಡಿಸಿದ್ದಾರೆ. ಆದರೂ ಉತ್ತರ ಕರ್ನಾಟಕ ಅಭಿವೃದ್ಧಿಯಾಗಿಲ್ಲ ಎಂದಾದರೆ ಅದು ಸಂಪೂರ್ಣವಾಗಿ ಅವರ ವೈಫಲ್ಯ. ಮುಂದಿನ ಬಜೆಟ್‌ನ್ನು ಮತ್ತೊಬ್ಬರಿಗೆ ಮಂಡಿಸಲು ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.
ಬೆಳಗಾವಿಯಲ್ಲಿ ನಡೆದ ಇತ್ತೀಚಿನ ಚಳಿಗಾಲದ ಅಧಿವೇಶನದಲ್ಲಿ ಹಲವು ವಿಷಯಗಳನ್ನು ಪ್ರಸ್ತಾಪಿಸಿದ್ದೇವೆ. ದ್ವೇಷ ಭಾಷಣ ವಿರೋಧಿ ಮಸೂದೆಗೆ ಸಂಬಂಧಿಸಿದಂತೆ ಸ್ಪೀಕರ್ ಯು.ಟಿ. ಖಾದರ್ ಚರ್ಚೆಗೆ ಸಮರ್ಪಕ ಅವಕಾಶ ನೀಡದೆ ಮಸೂದೆ ಅಂಗೀಕರಿಸಿದ್ದಾರೆ. ವಿಪಕ್ಷ ಸದಸ್ಯರು ಸದನದ ಮಧ್ಯಭಾಗದಲ್ಲಿದ್ದಾಗಲೇ ಮಸೂದೆ ಅಂಗೀಕರಿಸಲಾಯಿತು. ನಾನು ಮಾತು ಪೂರ್ಣಗೊಳಿಸಲು ಅವಕಾಶ ನೀಡಲಾಗಲಿಲ್ಲ ಎಂದು ಆರೋಪಿಸಿದರು.
ಮಾನವ-ವನ್ಯಜೀವಿ ಸಂಘರ್ಷ ಕುರಿತು ಮಾತನಾಡಿ, ಕಳೆದ ಎರಡೂವರೆ ವರ್ಷಗಳಲ್ಲಿ 206ಕ್ಕೂ ಹೆಚ್ಚು ಆನೆಗಳು ಮೃತಪಟ್ಟಿವೆ. 25 ವರ್ಷಗಳಲ್ಲಿ 500 ಆನೆಗಳನ್ನು ಕೊಂದಿದ್ದ ವೀರಪ್ಪನ್‌ಗಿಂತಲೂ ಈ ಸರ್ಕಾರ ಕೆಟ್ಟದಾಗಿ ಕಾಣುತ್ತಿದೆ ಎಂದು ಟೀಕಿಸಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಮಾತನಾಡಿ, ಬಾಜಪೆ, ಕಿನ್ನಿಗೋಳಿ, ಮಾನ್ಕಿ ಹಾಗೂ ಬಸೇಟಿಹಳ್ಳಿ ಪಟ್ಟಣ ಪಂಚಾಯತಿ ಜೊತೆಗೆ ದೊಡ್ಡಬಳ್ಳಾಪುರ ಮತ್ತು ತೂರ್ವಿಹಾಳದ ವಾರ್ಡ್ ಉಪಚುನಾವಣೆಗಳಲ್ಲಿ ಬಿಜೆಪಿ ಸಾಧಿಸಿದ ಭರ್ಜರಿ ಗೆಲುವು ಕಾಂಗ್ರೆಸ್ ಸರ್ಕಾರದ ವಿಫಲ ಆಡಳಿತದ ವಿರುದ್ಧ ಜನರ ಸ್ಪಷ್ಟ ಸಂದೇಶವಾಗಿದೆ ಎಂದು ಹೇಳಿದರು.
ಭಟ್ಕಳದಲ್ಲೂ ಆಡಳಿತ ಪಕ್ಷವನ್ನು ಮತದಾರರು ತಿರಸ್ಕರಿಸಿರುವುದು ರಾಜ್ಯದಾದ್ಯಂತ ಇರುವ ಬಲವಾದ ಆಡಳಿತ ವಿರೋಧಿ ಅಲೆಯನ್ನು ತೋರಿಸುತ್ತದೆ ಎಂದು ತಿಳಿಸಿದ್ದಾರೆ.
ಪ್ರಧಾನಿ ಮೋದಿ ಅವರ ‘ವಿಕಸಿತ ಭಾರತ’ ದೃಷ್ಟಿಕೋನದ ಮೇಲಿನ ನಂಬಿಕೆಯನ್ನು ರಾಜ್ಯ ಜನರು ಮತ್ತೊಮ್ಮೆ ವ್ಯಕ್ತಪಡಿಸಿದ್ದಾರೆ. ಅಭಿವೃದ್ಧಿ, ಸ್ಥಿರತೆ ಮತ್ತು ಸತ್ವಪೂರ್ಣ ಆಡಳಿತವನ್ನು ಜನರು ಆಯ್ಕೆ ಮಾಡಿದ್ದಾರೆಂದು ಹೇಳಿದ್ದಾರೆ.
ವಿಧಾನಪರಿಷತ್ತಿನ ವಿಪಕ್ಷ ಮುಖ್ಯ ಸಚೇತಕ ಎನ್. ರವಿ ಕುಮಾರ್ ಮಾತನಾಡಿ, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿಯ ಉತ್ತಮ ಸಾಧನೆ ಕಾಂಗ್ರೆಸ್ ಸರ್ಕಾರದ ದುರಾಡಳಿತದಿಂದ ಜನರು ಬೇಸತ್ತಿರುವುದಕ್ಕೆ ಸ್ಪಷ್ಟ ಸೂಚನೆಯಾಗಿದೆ ಎಂದು ಹೇಳಿದ್ದಾರೆ.