ಬೆಂಗಳೂರು: ರಾಜ್ಯ ರಾಜ್ಯಾಧ್ಯಕ್ಷ ಸ್ಥಾನದಿಂದ ಬಿ.ವೈ. ವಿಜಯೇಂದ್ರ ಅವರನ್ನು ಪದಚ್ಯುತಗೊಳಿಸಲು ಶತಾಯಗತಾಯ ಕಸರತ್ತು ನಡೆಸುತ್ತಿರುವ ಬಂಡಾಯ ನಾಯಕರು, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ವಿಜಯೇಂದ್ರ ಅವರನ್ನು ಹೊರಗಿಟ್ಟು ನವದೆಹಲಿಯಲ್ಲಿ ಫೆ.10ರಂದು ಲಿಂಗಾಯತ ಪ್ರಮುಖರ ಸಭೆ ನಡೆಸಲು ಸಿದ್ಧತೆ ನಡೆಸಿದ್ದಾರೆಂದು ತಿಳಿದುಬಂದಿದೆ.
ಕೇಂದ್ರ ಸಹಾಯಕ ಸಚಿವ ವಿ. ಸೋಮಣ್ಣ ಅವರ ಸರ್ಕಾರಿ ಕಚೇರಿಯ ಉದ್ಘಾಟನೆ ಕಾರ್ಯಕ್ರಮ ಫೆ. 10ರಂದು ನಿಗದಿಯಾಗಿದ್ದು, ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನೆಪದಲ್ಲಿ ಲಿಂಗಾಯತ ಪ್ರಮುಖ ನಾಯಕರೆಲ್ಲರೂ ಪಾಲ್ಗೊಂಡು ಸಭೆ ನಡೆಸುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ.
ಸೋಮಣ್ಣ ಕೂಡ ರಾಜ್ಯ ಅಧ್ಯಕ್ಷರಾಗುವ ಸ್ಪರ್ಧೆಯಲ್ಲಿದ್ದರು. ಅಲ್ಲದೆ, ಯಡಿಯೂರಪ್ಪ ಅವರೊಂದಿಗೂ ವೈಮನಸ್ಸು ಹೊಂದಿದ್ದು, ಇದನ್ನೇ ಬಳಸಿಕೊಂಡು ಸೋಮಣ್ಣ ಅವರನ್ನು ತಮ್ಮ ಪರವಾಗಿಸಿಕೊಳ್ಳಳು ಬಂಡಾಯ ನಾಯಕರು ಯತ್ನಿಸುತ್ತಿದ್ದಾರೆ.
ಧಾರ್ಮಿಕ ಮಠಗಳ ಬೆಂಬಲದೊಂದಿಗೆ ಸಮುದಾಯದ ಪ್ರಬಲ ನಾಯಕರೂ ಆಗಿರುವ ಸೋಮಣ್ಣ ಅವರನ್ನು ಪಕ್ಷದ ಮುಖ್ಯ ಹುದ್ದೆಯನ್ನು ವಹಿಸಿಕೊಳ್ಳುವಂತೆ ಮನವೊಲಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಇದೇ ಯತ್ನವಾಗಿ ಬುಧವಾರ ಬಂಡಾಯ ನಾಯಕರು ಮಾಜಿ ಮುಖ್ಯಮಂತ್ರಿ ಮತ್ತು ಹಾವೇರಿ ಸಂಸದ ಬಸವರಾಜ ಬೊಮ್ಮಾಯಿ ಅವರನ್ನು ನವದೆಹಲಿಯಲ್ಲಿರುವ ಅವರ ನಿವಾಸದಲ್ಲಿ ಭೇಟಿ ಮಾಡಿ, ಮಾತುಕತೆ ನಡೆಸಿದ್ದರು ಎಂದು ಮೂಲಗಳು ತಿಳಿಸಿವೆ.
ಹೈಕಮಾಂಡ್ ಬೆಂಬಲದೊಂದಿಗೆ ಸೋಮಣ್ಣ ರಾಜ್ಯ ಘಟಕದ ಅಧ್ಯಕ್ಷರಾಗಲು ಒಪ್ಪಿಕೊಂಡರೆ, ಬೊಮ್ಮಾಯಿ ಅವರನ್ನು ಪ್ರಧಾನಿ ಮೋದಿಯವರ ಸಂಪುಟಕ್ಕೆ ಸೇರಿಸಲು ಸಹಾಯವಾಗುತ್ತದೆ. ಆದರೆ ಕೇಂದ್ರ ಸಚಿವ ಸ್ಥಾನದಿಂದ ಸಂತೋಷದಲ್ಲಿರುವ ಸೋಮಣ್ಣ ಅವರು, ಈ ಯೋಜನೆಯನ್ನು ಒಪ್ಪಿಗೆ ನೀಡುವ ಸಾಧ್ಯತೆಯಿಲ್ಲ ಎಂದು ಮೂಲವೊಂದು ತಿಳಿಸಿದೆ.
ಪಕ್ಷದ ನಾಯಕರನ್ನು ಆಹ್ವಾನಿಸಿದ್ದೇನೆ. ಬಂಡಾಯ ನಾಯಕರಿಗೆ ಮಾತ್ರ ಆಹ್ವಾನ ನೀಡಿದ್ದೇನೆಂಬುದು ವದಂತಿಯಷ್ಟೇ. ಪಕ್ಷದ ಹೈಕಮಾಂಡ್ ಯಾವುದೇ ಸೂಚನೆ ನೀಡಿದರೂ, ಅದನ್ನು ಪಾಲಿಸುತ್ತೇನೆಂದು ಸೋಮಣ್ಣ ಅವರು ಹೇಳಿದ್ದಾರೆ.