ಬೆಂಗಳೂರು: ವಿರೋಧ ಪಕ್ಷದಲ್ಲಿ ಕೂತು ದೊಡ್ಡ ಅರ್ಥಶಾಸ್ತ್ರಜ್ಞರಂತೆ ಮಾತನಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಬಿಜೆಪಿ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ರಾಜ್ಯದ ಆರ್ಥಿಕತೆ ಕುಸಿಯುತ್ತಿದೆ ಮತ್ತು ರಾಜ್ಯ ದಿವಾಳಿಯಾಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹಾಗೂ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಟೀಕಿಸಿದ್ದರು.
ಬಿಜೆಪಿ ಆರೋಪಗಳಿಗೆ ಪತ್ರಿಕಾ ಹೇಳಿಕೆ ಮೂಲಕ ತಿರುಗೇಟು ನೀಡಿರುವ ಸಿಎಂ ಸಿದ್ದರಾಮಯ್ಯ ಅವರು, ಬಿಜೆಪಿಯ ರಾಜ್ಯಾಧ್ಯಕ್ಷರಾದ ಬಿವೈ ವಿಜಯೇಂದ್ರ, ಮಾಜಿ ಮುಖ್ಯಮಂತ್ರಿಗಳು ಹಾಗೂ ಹಾಲಿ ಸಂಸದರಾದ ಬಸವರಾಜ ಬೊಮ್ಮಾಯಿ ಮತ್ತು ಇತರೆ ವಿರೋಧ ಪಕ್ಷದ ಮುಖಂಡರುಗಳು ರಾಜ್ಯದ ಆರ್ಥಿಕತೆಯ ಬಗ್ಗೆ ಮಾತನಾಡಿದ್ದಾರೆ. ರಾಜ್ಯದ ಆರ್ಥಿಕತೆ ಕುಸಿಯುತ್ತಿದೆ, ರಾಜ್ಯ ದಿವಾಳಿಯಾಗುತ್ತಿದೆ, ಹಣಕಾಸಿನ ವ್ಯವಸ್ಥೆ ನೆಲ ಕಚ್ಚಿದೆ ಎಂದೆಲ್ಲ ಆರೋಪಿಸಿ ಮಾತನಾಡಿದ್ದಾರೆ. ಆ ಮೂಲಕ ಜನರನ್ನು ಸಶಕ್ತಗೊಳಿಸುತ್ತಿರುವ ನಮ್ಮ ಗ್ಯಾರಂಟಿ ಹಾಗೂ ಇನ್ನಿತರೆ ಯೋಜನೆಗಳನ್ನು ಟೀಕಿಸಿದ್ದಾರೆ.
ವಾಸ್ತವವೇನೆಂದರೆ, ರಾಜ್ಯದಲ್ಲಿ ಬಿಜೆಪಿಯವರು ಆಡಳಿತ ನಡೆಸುತ್ತಿದ್ದಾಗ ನಮ್ಮ ಆರ್ಥಿಕ ವ್ಯವಸ್ಥೆಯನ್ನು ಪಾತಾಳಕ್ಕೆ ಕುಸಿಯುವಂತೆ ಮಾಡಿದ್ದರು. ಆದರೆ ವಿರೋಧ ಪಕ್ಷದಲ್ಲಿ ಕೂತು ದೊಡ್ಡ ಅರ್ಥಶಾಸ್ತ್ರಜ್ಞರಂತೆ ಮಾತನಾಡುತ್ತಿದ್ದಾರೆ. ಬಿಜೆಪಿಯವರ ಅರಾಜಕ ಆರ್ಥಿಕ ನಿರ್ವಹಣೆಗಳಿಂದಾಗಿ ಪಾತಾಳದತ್ತ ಕುಸಿಯುತ್ತಿದ್ದ ರಾಜ್ಯದ ಅರ್ಥ ವ್ಯವಸ್ಥೆಯನ್ನು ಸರಿದಾರಿಗೆ ತರುವ ಪ್ರಯತ್ನವನ್ನು ನಮ್ಮ ಸರ್ಕಾರ ಮಾಡುತ್ತಿದೆ. ಇದನ್ನು ಸಹಿಸಿಕೊಳ್ಳಲಾಗದೆ ಅಥವಾ ಅರಿತುಕೊಳ್ಳಲಾರದೆ ಬಿಜೆಪಿಯವರು ಮಾತಾಡುತ್ತಿರುವುದು ದುರಂತ ಎಂದಿದ್ದಾರೆ.
ಬಿಜೆಪಿಯವರು ತಾವು ಮಾಡಿದ್ದ ಅವಾಂತರಗಳ ಕೆಲವು ಉದಾಹರಣೆಗಳಿವು;
ಸರ್ಕಾರವು ಆಡಳಿತ ನಡೆಸುತ್ತಿದ್ದಾಗ ಬಜೆಟ್‌ಗಳಲ್ಲಿ ನಿಗದಿ ಮಾಡಿದ್ದಕ್ಕಿಂತ ಏಳು ಪಟ್ಟು ಹೆಚ್ಚಿನ ಮೊತ್ತದ ಕಾಮಗಾರಿಗಳನ್ನು ತೆಗೆದುಕೊಂಡಿದ್ದರು. 31-3-2023 ಕ್ಕೆ ಬಂಡವಾಳ ವೆಚ್ಚ ಮಾಡುವ ಪ್ರಮುಖ ಇಲಾಖೆಗಳಾದ ಲೋಕೋಪಯೋಗಿ, ಸಣ್ಣ ನೀರಾವರಿ, ಜಲ ಸಂಪನ್ಮೂಲ, ನಗರಾಭಿವೃದ್ಧಿ, ಗ್ರಾಮೀಣಾಭಿವೃದ್ಧಿ, ವಸತಿ ಇಲಾಖೆಗಳಲ್ಲಿ 2,70,695 ಕೋಟಿ ರೂಪಾಯಿಗಳಷ್ಟು ಬೃಹತ್ ಮೊತ್ತದ ಕಾಮಗಾರಿಗಳನ್ನು ಬೇಕಾಬಿಟ್ಟಿ ತೆಗೆದುಕೊಂಡು ಅನುದಾನ ಒದಗಿಸದೆ ಬಿಟ್ಟು ಹೋಗಿದ್ದಾರೆ. ಮುಖ್ಯಮಂತ್ರಿಗಳ ವಿವೇಚನಾ ಕೋಟಾದ ಕೆಳಗೆ 1,66,426 ಕೋಟಿ ರೂಪಾಯಿಗಳ ಕಾಮಗಾರಿಗಳಿಗೆ ಅನುಮೋದನೆ ನೀಡಿದ್ದಾರೆ. ಬಿಜೆಪಿ ಸರ್ಕಾರದ ಈ ಆರ್ಥಿಕ ದುರಾಡಳಿತ, ಬೇಜವಾಬ್ದಾರಿತನ, ಭ್ರಷ್ಟಾಚಾರಯುತ ಕಾಮಗಾರಿಗಳ ನಿರ್ವಹಣೆಯನ್ನು ಕೇವಲ ಒಂದೆರಡು ವರ್ಷಗಳಲ್ಲಿ ದುರಸ್ತಿ ಮಾಡಲು ಸಾಧ್ಯವೆ? ಎಂದು ಪ್ರಶ್ನಿಸಿದ್ದಾರೆ.
ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರವು ನಮ್ಮ ರಾಜ್ಯದ ಸಂಪನ್ಮೂಲಗಳನ್ನು ಗುಡಿಸಿ ಗುಂಡಾಂತರ ಮಾಡುತ್ತಿದ್ದರೂ ರಾಜ್ಯ ಬಿಜೆಪಿಯವರು ಕೈ ಕಟ್ಟಿ ಬಾಯಿ ಮುಚ್ಚಿ ಕೂತಿದ್ದರು. ಇದು ಜೀವಂತ ಕುರಿಯ ಚರ್ಮ ಸುಲಿಯುತ್ತಿದ್ದರೂ ಕಣ್ಣ ಮುಂದಿನ ಗರಿಕೆ ಹುಲ್ಲಿಗೆ ಬಾಯಿ ಬಿಡುವಂತೆ ಕಾಣುತ್ತಿತ್ತು. ಬಿಜೆಪಿಯವರ ಕಾಲದಲ್ಲಿ ಸಂಗ್ರಹಿಸಿದ ಜಿಎಸ್‌ಟಿ ಸೆಸ್‌ನಲ್ಲಿ ಪರಿಹಾರ ಕೊಡುವುದನ್ನು ನಿಲ್ಲಿಸಿದರು. ಇದರಿಂದ ನಮಗೆ ವರ್ಷಕ್ಕೆ 18-20 ಸಾವಿರ ಕೋಟಿ ರೂಪಾಯಿಗಳಷ್ಟು ಆದಾಯ ಕಡಿಮೆಯಾಯಿತು. ಕೇಂದ್ರದವರು ಜನರಿಂದ ಸೆಸ್ ಸಂಗ್ರಹಿಸುವುದನ್ನು ನಿಲ್ಲಿಸಲಿಲ್ಲ.
ಮೋದಿ ಸರ್ಕಾರ ತೆರಿಗೆ ಪಾಲಿನಲ್ಲೂ ರಾಜ್ಯಕ್ಕೆ ಬಹಳ ದೊಡ್ಡ ಅನ್ಯಾಯ ಮಾಡಿದೆ. 2018-19 ರಲ್ಲಿ ಕೇಂದ್ರದ ಬಜೆಟ್ ಗಾತ್ರ 24.42 ಲಕ್ಷ ಕೋಟಿ ಇತ್ತು. ಆಗ ನಮ್ಮ ರಾಜ್ಯಕ್ಕೆ ತೆರಿಗೆ ಪಾಲು 35,895 ಕೋಟಿ ರೂ. ಸಿಗುತ್ತಿತ್ತು. ಆದರೆ ಈಗ ಬಜೆಟ್ ಗಾತ್ರ 50.65 ಲಕ್ಷ ಕೋಟಿ ರೂ.ಗಳಿಗೆ ಏರಿಕೆಯಾಗಿದೆ. ಇಷ್ಟು ದೊಡ್ಡ ಮೊತ್ತದ ಕೇಂದ್ರ ಬಜೆಟ್‌ನಲ್ಲಿ ರಾಜ್ಯಕ್ಕೆ ಸುಮಾರು 51 ಸಾವಿರ ಕೋಟಿ ರೂ ಮಾತ್ರ ತೆರಿಗೆ ಪಾಲು ಸಿಗಬಹುದು. 2018 ಕ್ಕೆ ಹೋಲಿಸಿದರೂ ಸಹ ನಮಗೆ ಕನಿಷ್ಠ ಅಂದರೂ 73 ಸಾವಿರ ಕೋಟಿ ರೂ.ನಷ್ಟು ಪಾಲು ಸಿಗಬೇಕಿತ್ತು. ಇಷ್ಟಾದರೂ ಇದೊಂದು ಬಾಬತ್ತಿನಲ್ಲೆ ನಮಗೆ ವರ್ಷಕ್ಕೆ 22 ಸಾವಿರ ರೂ.ಗಳಷ್ಟು ನಷ್ಟವಾಗುತ್ತಿದೆ.
ಕರ್ನಾಟಕದಿಂದ ವರ್ಷಕ್ಕೆ 4.5 ಲಕ್ಷ ಕೋಟಿಗೂ ಹೆಚ್ಚಿನ ತೆರಿಗೆಯನ್ನು ಕೇಂದ್ರವು ಸಂಗ್ರಹಿಸುತ್ತಿದೆ. ಇದರಲ್ಲಿ ಬಿಡಿಗಾಸನ್ನು ಮಾತ್ರ ರಾಜ್ಯಕ್ಕೆ ಕೊಡುತ್ತಿದೆ. ಈ ಕುರಿತು ರಾಜ್ಯ ಬಿಜೆಪಿ ನಾಯಕರು ಎಂದಾದರೂ ಬಾಯಿ ಬಿಟ್ಟಿದ್ದಾರಾ?
2017 ರಿಂದ ಈ ವರೆಗೆ ಜಿಎಸ್‌ಟಿಯ ಅಸಮರ್ಪಕ ಅನುಷ್ಠಾನದಿಂದ, 15 ನೇ ಹಣಕಾಸು ಆಯೋಗದ ವರದಿಯಿಂದ, ಸೆಸ್ ಮತ್ತು ಸರ್ಚಾರ್ಜ್‌ಗಳಲ್ಲಿ ಪಾಲು ಕೊಡದ ಕಾರಣ, 15ನೇ ಹಣಕಾಸು ಆಯೋಗ ಹೇಳಿದರೂ ಕೇಂದ್ರವು ಕೊಡದೆ ಉಳಿಸಿಕೊಂಡ 11,495 ಕೋಟಿರೂಗಳಿಂದ, ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ಘೋಷಿಸಿ ಕೊಡದ ಕಾರಣದಿಂದ, ಒಟ್ಟಾರೆ ಕೇಂದ್ರದ ನೀತಿಗಳಿಂದ 2.1 ಲಕ್ಷ ಕೋಟಿ.ರೂಗಳಿಗೂ ಹೆಚ್ಚಿನ ಮೊತ್ತ ರಾಜ್ಯಕ್ಕೆ ನಷ್ಟವಾಗಿದೆ. ಈ ಕುರಿತು ಬಿಜೆಪಿಯವರು ಒಂದು ದಿನವೂ ಮಾತಾಡಲಿಲ್ಲ ಎಂದು ಸಿಎಂ ವಾಗ್ದಾಳಿ ನಡೆಸಿದ್ದಾರೆ.
ನಮ್ಮ ಎರಡು ವರ್ಷಗಳ ಬಜೆಟ್ ಗಾತ್ರದ ಸರಾಸರಿ ಬೆಳವಣಿಗೆ ಶೇ.18.3 ರಷ್ಟಿದೆ. ಬಿಜೆಪಿಯ 4 ವರ್ಷಗಳ ಅಧಿಕಾರಾವಧಿಯಲ್ಲಿ ಕೇವಲ ಶೇ.5 ರಷ್ಟಿತ್ತು.
ರಾಜ್ಯದ ಸ್ವಂತ ತೆರಿಗೆಯ ಬೆಳವಣಿಗೆ ಶೇ. 15 ರಷ್ಟಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಶೇ. 11 ರಷ್ಟು ಮಾತ್ರ ಇತ್ತು.
ನಾವು ಗ್ಯಾರಂಟಿ ಯೋಜನೆಗಳು ಸೇರಿದಂತೆ ವರ್ಷಕ್ಕೆ 90 ಸಾವಿರ ಕೋಟಿಗೂ ಹೆಚ್ಚಿನ ಮೊತ್ತವನ್ನು ಜನರಿಗೆ ನೇರವಾಗಿ ಡಿಬಿಟಿ ಮೂಲಕ ಹಾಗೂ ಸಬ್ಸಿಡಿ ಪ್ರೋತ್ಸಾಹಧನದ ಮೂಲಕ ನೀಡುತ್ತಿದ್ದೇವೆ. ನಮ್ಮ ಸರ್ಕಾರ ವೃದ್ಧರಿಗೆ, ಅಶಕ್ತರಿಗೆ, ವಿಧವೆಯರಿಗೆ, ಅಂಗವಿಕಲರಿಗೆ ವರ್ಷಕ್ಕೆ 10,400 ಕೋಟಿಗೂ ಹೆಚ್ಚಿನ ಹಣವನ್ನು ಕೊಡುತ್ತಿದೆ. ಇದರಲ್ಲಿ ಕೇಂದ್ರ ಸರ್ಕಾರ ಕೇವಲ 450 ಕೋಟಿ ರೂ.ಗಳನ್ನು ಮಾತ್ರ ನೀಡುತ್ತಿದೆ. ಮನಮೋಹನ್ ಸಿಂಗ್ ರವರ ಕಾಲದಲ್ಲಿ ಈ ವೇತನಗಳೆಷ್ಟಿದ್ದವೊ ಈಗಲೂ ಅಷ್ಟೇ ಇವೆ.
ಇನ್ನು ಸಾಲದ ಬಗ್ಗೆ ಮಾತನಾಡುವ ವಿಜಯೇಂದ್ರ ಅವರೇ, ನರೇಂದ್ರ ಮೋದಿಯವರ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಕೇಂದ್ರದ ಸಾಲ ಎಷ್ಟಾಗಿದೆ? ರಾಜ್ಯಗಳ ಸಾಲ ಎಷ್ಟಾಗಿದೆ ಎಂಬುದನ್ನು ತಿಳಿದುಕೊಂಡರೆ ಒಳ್ಳೆಯದು.
2013-14 ರಲ್ಲಿ 53.11 ಲಕ್ಷ ಕೋಟಿ ರೂಗಳಷ್ಟಿದ್ದ ಕೇಂದ್ರದ ಸಾಲ ನಿರ್ಮಲಾ ಸೀತಾರಾಮನ್ ಅವರೇ ಈ ಬಜೆಟ್ ನಲ್ಲಿ ಘೋಷಿಸಿರುವಂತೆ 2026 ರ ಮಾರ್ಚ್ ವೇಳೆಗೆ 200.16 ಲಕ್ಷ ಕೋಟಿಗಳಷ್ಟಾಗುತ್ತಿದೆ. ಅದನ್ನೂ ಮೀರಬಹುದು. 11 ವರ್ಷಗಳಲ್ಲಿ 147 ಲಕ್ಷ ಕೋಟಿಗಳಿಗೂ ಹೆಚ್ಚಿನ ಸಾಲವನ್ನು ಮೋದಿ ಸರ್ಕಾರ ಮಾಡಿದೆ. ಇಷ್ಟು ಬೃಹತ್ ಮೊತ್ತದ ಸಾಲ ಯಾಕಾಯಿತು?
ನರೇಂದ್ರ ಮೋದಿಯವರ ಆರ್ಥಿಕ ನೀತಿಗಳಿಂದ ರಾಜ್ಯಗಳ ಆರ್ಥಿಕ ಸ್ಥಿತಿಯೂ ಅಯೋಮಯವಾಗಿದೆ. 2014 ರ ಮಾರ್ಚ್ ಅಂತ್ಯಕ್ಕೆ ದೇಶದ ಎಲ್ಲ ರಾಜ್ಯಗಳ ಸಾಲ 25 ಲಕ್ಷ ಕೋಟಿ ರೂ. ಇದ್ದದ್ದು ಈಗ 95 ಲಕ್ಷ ಕೋಟಿ ರೂ.ಗಳಿಗೂ ಮೀರಿದೆ. ಕಳೆದ 10 ವರ್ಷಗಳಲ್ಲಿ ರಾಜ್ಯಗಳ ಸಾಲ 70 ಲಕ್ಷ ಕೋಟಿಗಳಷ್ಟು ಹೆಚ್ಚಾಗಿದೆ. ಮೋದಿ ಸರ್ಕಾರದ ಆರ್ಥಿಕ ನೀತಿಗಳಿಂದ ರಾಜ್ಯಗಳೂ ತ್ರಾಸ ಪಡುತ್ತಿವೆ. ಕೇಂದ್ರದ ಆರ್ಥಿಕತೆಯೂ ದುರ್ಬಲವಾಗುತ್ತಿದೆ.
ಮತ್ತೊಮ್ಮೆ ತಿಳಿಸಬಯಸುವುದೇನೆಂದರೆ ನಮ್ಮ ರಾಜ್ಯದ ಆರ್ಥಿಕತೆ ಬಿಜೆಪಿಯ ದ್ರೋಹವನ್ನು ಮೆಟ್ಟಿ ನಿಲ್ಲುವಷ್ಟು ಸದೃಢವಾಗಿದೆ. ನಾವು ದೆಹಲಿಯ ಮೋದಿಯವರ ನೇತೃತ್ವದ ಬಿಜೆಪಿ ಸರ್ಕಾರ ಮಾಡುತ್ತಿರುವ ದ್ರೋಹದ ವಿರುದ್ಧ ನಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡುತ್ತೇವೆ. ಇಷ್ಟರ ನಡುವೆಯೂ ನಾವು ನುಡಿದಂತೆ ನಡೆಯುತ್ತೇವೆ, ನಮ್ಮ ಜನರ ಜೊತೆ ನಿಲ್ಲುತ್ತೇವೆ ಸಿಎಂ ಹೇಳಿದ್ದಾರೆ.